ಮಂಡ್ಯ: ಬಾರದ ಮಳೆ, ಒಣಗುತ್ತಿರುವ ಕಬ್ಬಿನ ಬೆಳೆ..!

KannadaprabhaNewsNetwork |  
Published : Jun 23, 2026, 01:30 AM IST
೨೨ಕೆಎಂಎನ್‌ಡಿ-೪ಮಳೆ ಕೊರತೆಯಿಂದಾಗಿ ಒಣಗುತ್ತಿರುವ ಕಬ್ಬು ಬೆಳೆ | Kannada Prabha

ಸಾರಾಂಶ

ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಕೊರತೆಯಿಂದ ಕಬ್ಬು ಬೆಳೆ ನೀರಿಲ್ಲದೆ ಒಣಗಲಾರಂಭಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ೮ ರಿಂದ ೧೧ ತಿಂಗಳ ಕಬ್ಬು ಬೆಳೆದು ನಿಂತಿದ್ದು, ಕಟಾವಿಗೆ ಎರಡು ತಿಂಗಳಿಂದ ನಾಲ್ಕು ತಿಂಗಳು ಬೇಕಿದೆ. ನೀರಿನ ಕೊರತೆಯಿಂದ ಕಬ್ಬು ಬೆಳೆ ನಷ್ಟಕ್ಕೊಳಗಾಗುವ, ಇಳುವರಿ ಕುಂಠಿತಗೊಳ್ಳುವ ಆತಂಕ ಎದುರಾಗಿದೆ.

ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ, ಮಂಡ್ಯ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಕೊರತೆಯಿಂದ ಕಬ್ಬು ಬೆಳೆ ನೀರಿಲ್ಲದೆ ಒಣಗಲಾರಂಭಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ೮ ರಿಂದ ೧೧ ತಿಂಗಳ ಕಬ್ಬು ಬೆಳೆದು ನಿಂತಿದ್ದು, ಕಟಾವಿಗೆ ಎರಡು ತಿಂಗಳಿಂದ ನಾಲ್ಕು ತಿಂಗಳು ಬೇಕಿದೆ. ನೀರಿನ ಕೊರತೆಯಿಂದ ಕಬ್ಬು ಬೆಳೆ ನಷ್ಟಕ್ಕೊಳಗಾಗುವ, ಇಳುವರಿ ಕುಂಠಿತಗೊಳ್ಳುವ ಆತಂಕ ಎದುರಾಗಿದೆ.ಜಿಲ್ಲೆಯ ಒಟ್ಟು ೩,೦೧೩ ಹೆಕ್ಟರ್‌ನಲ್ಲಿ ಕಬ್ಬು ಬೆಳೆದು ನಿಂತಿದೆ. ಇದರಲ್ಲಿ ಕಳೆದ ವರ್ಷ ಜುಲೈ ಹಾಗೂ ಅಕ್ಟೋಬರ್ ತಿಂಗಳಲ್ಲಿ ನಾಟಿ ಮಾಡಿದ ಕಬ್ಬು ಇದೆ. ಎಂಟು ತಿಂಗಳ ಕಬ್ಬಿಗೆ ಎರಡು ಕಟ್ಟು ನೀರಿನ ಅವಶ್ಯಕತೆ ಇದ್ದರೆ, ಹನ್ನೊಂದು ತಿಂಗಳ ಕಬ್ಬಿಗೆ ಒಂದು ಕಟ್ಟು ನೀರಿನ ಅವಶ್ಯಕತೆ ಇದೆ.ಮುಂಗಾರು ಮಳೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದಿಲ್ಲ. ಕೆಆರ್‌ಎಸ್ ಅಣೆಕಟ್ಟೆಗೂ ನಿರೀಕ್ಷಿತ ಪ್ರಮಾಣದ ನೀರು ಹರಿದು ಬರುತ್ತಿಲ್ಲ. ಅಣೆಕಟ್ಟೆಯಲ್ಲಿ ೮೧ ಅಡಿಯವರಿಗೆ ಮಾತ್ರ ನೀರು ದಾಖಲಾಗಿದೆ. ಇದರ ನಡುವೆ ಬೆಳೆದು ನಿಂತಿರುವ ಕಬ್ಬು ಬೆಳೆಗೆ ನೀರು ಹರಿಸುವಂತೆ ರೈತರಿಂದ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ಜೊತೆಗೆ ಜೂನ್ ಮುಗಿಯುತ್ತಿದ್ದಂತೆ ತಮಿಳುನಾಡು ನೀರಿಗೆ ಬೇಡಿಕೆ ಇಡುವ ಸಾಧ್ಯತೆಗಳು ಇರುವುದರಿಂದ ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ತಲೆದೋರುವ ಲಕ್ಷಣಗಳು ಗೋಚರಿಸಲಾರಂಭಿಸಿದೆ.ಮಂತ್ರಿಯೂ ಇಲ್ಲ, ಸರ್ಕಾರಕ್ಕೆ ಒತ್ತಡವೂ ಇಲ್ಲ:ಸದ್ಯದ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರು ಹರಿಸುವ ಸ್ಥಿತಿಯಲ್ಲಿ ಜಿಲ್ಲಾಡಳಿತ ಇಲ್ಲ. ಜಿಲ್ಲೆಗೆ ಉಸ್ತುವಾರಿ ಮಂತ್ರಿಯೂ ಇಲ್ಲದಿರುವುದರಿಂದ ಸರ್ಕಾರದ ಎದುರು ಬೇಡಿಕೆ ಮಂಡಿಸಲು ಸಾಧ್ಯವಾಗುತ್ತಿಲ್ಲ. ಶಾಸಕರು ಅವರವರ ಕ್ಷೇತ್ರಕ್ಕೆ ಸೀಮಿತರಾಗಿರುವುದರಿಂದ ನೀರಿಗಾಗಿ ಸರ್ಕಾರದ ಎದುರು ಪ್ರಬಲ ವಾದ ಮಂಡಿಸುವವರೇ ಇಲ್ಲದಂತಾಗಿದೆ.ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕೆಳಮಟ್ಟಕ್ಕೆ ತಲುಪಿದೆ. ರೈತರು ಮತ್ತು ರೈತ ಸಂಘಟನೆಗಳು ಹೇಳುವ ಪ್ರಕಾರ ಈಗಿರುವ ನೀರಿನಲ್ಲಿ ಒಂದು ಕಟ್ಟು ನೀರನ್ನು ಹರಿಸಲು ಸಾಧ್ಯವಿದ್ದು, ಆ ನೀರನ್ನು ಕೊಟ್ಟರೆ ಸಾಧ್ಯವಾದಷ್ಟು ಕಬ್ಬು ಬೆಳೆಯನ್ನು ಉಳಿಸಿಕೊಳ್ಳಲು ಅವಕಾಶವಿದೆ. ಜಿಲ್ಲಾಡಳಿತ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಸರ್ಕಾರದ ಗಮನ ಸೆಳೆದು ನೀರು ಹರಿಸುವುದಕ್ಕೆ ತ್ವರಿತ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.ಕೆಆರ್‌ಎಸ್‌ಗೆ ಒಳಹರಿವಿಲ್ಲ:ಕೇರಳ ಮತ್ತು ಕೊಡಗಿನಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೇ ಇರುವುದರಿಂದ ಕೆಆರ್‌ಎಸ್‌ಗೆ ಒಳಹರಿವು ಹರಿದುಬರುತ್ತಿಲ್ಲ. ಕೇವಲ ೬೮೪ ಕ್ಯೂಸೆಕ್ ನೀರು ಮಾತ್ರ ಜಲಾಶಯಕ್ಕೆ ಹರಿದು ಬರುತ್ತಿದೆ. ಈ ಪ್ರಮಾಣದ ಒಳಹರಿವು ಯಾವುದಕ್ಕೂ ಸಾಲದಂತಾಗಿದೆ. ಜೂನ್ ತಿಂಗಳಲ್ಲಿ ಕನಿಷ್ಠ ೧೦ ರಿಂದ ೧೫ ಸಾವಿರ ಕ್ಯೂಸ್ ನೀರು ಹರಿದುಬರಬೇಕಿತ್ತು. ಆದರೆ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಮಳೆ ಇನ್ನೂ ಕಣ್ಣಾಮುಚ್ಚಾಲೆ ಆಟ ಮುಂದುವರಿಸಿದೆ. ಬಿಸಿಲು-ಮೋಡದ ನಡುವಿನ ಚೆಲ್ಲಾಟದಲ್ಲಿ ರೈತರ ಬದುಕು ಅತಂತ್ರವಾಗಿದೆ.ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ ೧೧೯.೪೦ ಅಡಿ ದಾಖಲಾಗಿತ್ತು. ೧೩೩೫೯ ಕ್ಯುಸೆಕ್‌ನಷ್ಟು ನೀರು ಜಲಾಶಯಕ್ಕೆ ಹರಿದುಬರುತ್ತಿತ್ತು. ಜೂನ್ ತಿಂಗಳಾಂತ್ಯಕ್ಕೆ ಜಲಾಶಯ ಭರ್ತಿಯಾಗಿ ಹೊಸ ದಾಖಲೆ ನಿರ್ಮಿಸಿತ್ತು. ಈ ವರ್ಷ ಮಳೆಯ ಕೊರತೆ ಎದುರಾಗಿದೆ. ಮಳೆಯ ಆಟ ಇದೇ ರೀತಿ ಮುಂದುವರೆದರೆ ಪ್ರಸಕ್ತ ವರ್ಷ ಅಣೆಕಟ್ಟು ಭರ್ತಿಯಾಗುವ ಸಾಧ್ಯತೆಗಳು ತೀರಾ ಕಡಿಮೆ. ನೀರಿಲ್ಲದೆ ಕೃಷ್ಣರಾಜಸಾಗರ ಜಲಾಶಯ ಇದೀಗ ಕಳಾಹೀನವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ರೈತರ ಸ್ಥಿತಿಯೂ ಅಯೋಮಯವಾಗಿದೆ.ಭತ್ತದ ಇಳುವರಿಯೂ ಕುಸಿತ:ಪೂರ್ವ ಮುಂಗಾರು ಆಶಾದಾಯಕವಾಗಿ ಬರಬಹುದೆಂಬ ನಿರೀಕ್ಷೆಯಿಂದ ಡಿಸೆಂಬರ್ ತಿಂಗಳಲ್ಲಿ ರೈತರು ಭತ್ತ ನಾಟಿ ಮಾಡಿದ್ದರು. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಭತ್ತದ ತೆನೆಗಳು ಹಾಲು ತುಂಬಿಕೊಳ್ಳುವ ಸಮಯ. ಆಗ ಮಳೆ ಬಂದು ನೀರು ಸಮರ್ಪಕವಾಗಿ ದೊರಕಿದರೆ ಭತ್ತ ಉತ್ತಮ ಇಳುವರಿ ಬರುತ್ತದೆ. ಆ ಸಮಯದಲ್ಲೇ ಮಳೆ ಕೈಕೊಟ್ಟಿತು. ನಾಲೆಯಲ್ಲಿ ಹರಿದ ನೀರು ಕೊನೆಯ ಭಾಗವನ್ನೂ ತಲುಪಲಿಲ್ಲ. ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಮಂಡ್ಯ ಸ್ವಲ್ಪ ಭಾಗ ಹೊರತುಪಡಿಸಿದರೆ ಮದ್ದೂರು, ಮಳವಳ್ಳಿ ಕೊನೆಯ ಭಾಗಕ್ಕೆ ನೀರು ಸರಿಯಾಗಿ ತಲುಪಲಿಲ್ಲ. ಇದರಿಂದ ಭತ್ತದ ಇಳುವರಿ ಸರಿಯಾಗಿ ಬಾರದೆ ಜೊಳ್ಳೇ ಹೆಚ್ಚಾಯಿತು.ಇದೀಗ ಜಿಲ್ಲೆಯಲ್ಲಿ ಶೇ.೭೫ರಷ್ಟು ಭಾಗದಲ್ಲಿ ಭತ್ತದ ಕಟಾವು ಮುಗಿದಿದೆ. ಶೇ.೨೫ರಷ್ಟು ಭತ್ತದ ಬೆಳೆ ಮಾತ್ರವಿದ್ದು, ಈ ತಿಂಗಳಾಂತ್ಯಕ್ಕೆ ಅದರ ಕಟಾವು ಮುಗಿದುಹೋಗಲಿದೆ. ಈಗಾಗಲೇ ಹಲವು ರೈತರು ಭತ್ತದ ಒಕ್ಕಣೆಯನ್ನು ನಡೆಸುತ್ತಿದ್ದಾರೆ. ಇಳುವರಿ ಕುಸಿತಗೊಂಡಿರುವುದರಿಂದ ಉತ್ತಮ ಬೆಲೆ ಸಿಗದೆ ನಷ್ಟ ಅನುಭವಿಸಿದ್ದಾರೆ.ಆಹಾರ ಧಾನ್ಯಗಳ ಇಳುವರಿ ಕುಸಿತ:ಜಿಲ್ಲೆಯ ೨೦೫೩೦ ಹೆಕ್ಟೇರ್‌ನಲ್ಲಿ ಆಹಾರ ಧಾನ್ಯಗಳಿದ್ದು ಅವು ಕೂಡ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ತೊಗರಿ, ಹುರುಳಿ, ಉದ್ದು, ಹೆಸರು,ಅಲಸಂದೆ, ಅವರೆಯಂತಹ ಆಹಾರ ಧಾನ್ಯಗಳ ಇಳುವರಿಯೂ ನೀರಿನ ಕೊರತೆಯಿಂದ ಕುಸಿತಗೊಂಡಿದೆ.ಕಳೆದ ವರ್ಷ ಪೂರ್ವಮಂಗಾರು ಹಾಗೂ ಮುಂಗಾರು ಮಳೆ ನಿರೀಕ್ಷೆಗೂ ಮೀರಿ ಬಂದಿತ್ತು. ಈ ಬಾರಿ ಮಳೆ ಕೈ ಕೊಟ್ಟಿರುವುದರಿಂದ ಕೃಷಿ ಚಟುವಟಿಕೆ ಮೇಲೆ ಕರಾಳ ಛಾಯೆ ಎದುರಾಗಿದೆ. ಎಲ್ ನಿನೋ ಪರಿಣಾಮದಿಂದ ಈ ವರ್ಷ ಮಳೆ ವಾಡಿಕೆಗಿಂತ ಕಡಿಮೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಆಶಾದಾಯಕವಾಗಿ ಬೀಳುವ ಸಾಧ್ಯತೆಗಳು ಇಲ್ಲದಿರುವುದರಿಂದ ಪರ್ಯಾಯ ಬೆಳೆಗಳನ್ನು ಬೆಳೆಯುವಂತ ರೈತರು ಗಮನ ಹರಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ.ಹತ್ತು ವರ್ಷದಲ್ಲಿ ಕೆಆರ್‌ಎಸ್ ನೀರಿನ ಮಟ್ಟದಿನಾಂಕ ಅಡಿ ಒಳಹರಿವುಜೂ.೨೨, ೨೦೧೭ ೬೮.೯೬ ೧೨೦೭ ಕ್ಯುಸೆಕ್ಜೂ.೨೨, ೨೦೧೮ ೧೦೪.೫೦ ೭೭೭೬ ಕ್ಯುಸೆಕ್ಜೂ.೨೨, ೨೦೧೯ ೭೯.೮೬ ೨೦೩ ಕ್ಯುಸೆಕ್ಜೂ.೨೨, ೨೦೨೦ ೯೫.೧೮ ೩೧೮೧ ಕ್ಯುಸೆಕ್ಜೂ.೨೨, ೨೦೨೧ ೯೪.೪೬ ೧೧೯೨೦ ಕ್ಯುಸೆಕ್ಜೂ.೨೨, ೨೦೨೨ ೧೦೬.೪೦ ೨೩೯೮ ಕ್ಯುಸೆಕ್ಜೂ.೨೨, ೨೦೨೩ ೭೮.೫೦ ೪೨೧ ಕ್ಯುಸೆಕ್ಜೂ.೨೨, ೨೦೨೪ ೮೭.೬೦ ೧೪೧೩ ಕ್ಯುಸೆಕ್ಜೂ.೨೨, ೨೦೨೫ ೧೧೯.೪೦ ೧೩೩೫೯ ಕ್ಯುಸೆಕ್ಜೂ.೨೨, ೨೦೨೬ ೮೧.೫೨ ೬೮೪ ಕ್ಯುಸೆಕ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪಾರದರ್ಶಕವಾಗಿರಲಿ
ಮೌಲ್ಯಾಧಾರಿತ ಶಿಕ್ಷಣ ಶಾಲಾ ಕಾಲೇಜುಗಳ ಧ್ಯೇಯವಾಗಬೇಕು