ಮಂಡ್ಯ: ಕೋಳಿ ಫಾರಂನಂತಿರುವ ಶಾಲಾ ಕೊಠಡಿಗಳು..!

KannadaprabhaNewsNetwork |  
Published : Feb 01, 2026, 01:45 AM IST
೩೧ಕೆಎಂಎನ್‌ಡಿ-೫ಮಂಡ್ಯದ ಶಂಕರನಗರದಲ್ಲಿರುವ ಶ್ರೀ ಗೀತಾ ಪ್ರೌಢಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳು. | Kannada Prabha

ಸಾರಾಂಶ

ಮಂಡ್ಯ ಶಂಕರ ನಗರದಲ್ಲಿರುವ ಅನುದಾನಿತ ಶಾಲೆಯಾಗಿರುವ ಶ್ರೀಗೀತಾ ಪ್ರೌಢಶಾಲೆಯ ಅವ್ಯವಸ್ಥೆ ಕೇಳೋರಿಲ್ಲದಂತಾಗಿದೆ. ಶಾಲಾ ಕೊಠಡಿಗಳು ಕೋಳಿ ಫಾರಂನಂತಿದ್ದು, ಅದರೊಳಗೆ ಶಿಕ್ಷಕರು ಪಾಠ ಮಾಡುವುದು, ಮಕ್ಕಳು ಕುಳಿತು ಪಾಠ ಕೇಳುವುದು ಅಸಾಧ್ಯವಾಗಿ ಪರಿಣಮಿಸಿದೆ. ಶಾಲೆಯ ಕೊಠಡಿಗಳ ಸ್ಥಿತಿ ಹೀಗಿದ್ದರೂ ಯಾರಿಂದಲೂ ಬಿಡುಗಾಸಿನ ನೆರವೂ ಶಾಲೆಗೆ ಸಿಗದಿರುವುದು ದುರ್ದೈವದ ಸಂಗತಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಇಲ್ಲಿನ ಶಂಕರ ನಗರದಲ್ಲಿರುವ ಅನುದಾನಿತ ಶಾಲೆಯಾಗಿರುವ ಶ್ರೀಗೀತಾ ಪ್ರೌಢಶಾಲೆಯ ಅವ್ಯವಸ್ಥೆ ಕೇಳೋರಿಲ್ಲದಂತಾಗಿದೆ. ಶಾಲಾ ಕೊಠಡಿಗಳು ಕೋಳಿ ಫಾರಂನಂತಿದ್ದು, ಅದರೊಳಗೆ ಶಿಕ್ಷಕರು ಪಾಠ ಮಾಡುವುದು, ಮಕ್ಕಳು ಕುಳಿತು ಪಾಠ ಕೇಳುವುದು ಅಸಾಧ್ಯವಾಗಿ ಪರಿಣಮಿಸಿದೆ. ಶಾಲೆಯ ಕೊಠಡಿಗಳ ಸ್ಥಿತಿ ಹೀಗಿದ್ದರೂ ಯಾರಿಂದಲೂ ಬಿಡುಗಾಸಿನ ನೆರವೂ ಶಾಲೆಗೆ ಸಿಗದಿರುವುದು ದುರ್ದೈವದ ಸಂಗತಿಯಾಗಿದೆ.

ಈ ಶಾಲೆಯಲ್ಲಿ ಎಂಟು ಕೊಠಡಿಗಳಿದ್ದು ಮೂರು ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಅಲ್ಲಿ ಪಾಠ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಮುಖ್ಯ ಶಿಕ್ಷಕರ ಕೊಠಡಿ, ಶಿಕ್ಷಕರ ಕೊಠಡಿ, ಆಡಳಿತ ಮಂಡಳಿ ಸದಸ್ಯರ ಕೊಠಡಿ, ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿಗಳಿವೆ. ಇರುವ ಕೊಠಡಿಗಳಲ್ಲೇ ಹೊಂದಿಸಿಕೊಂಡು ಮಕ್ಕಳಿಗೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

೧೯೬೫ರಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆ ೬೦ ವರ್ಷಗಳನ್ನು ಪೂರೈಸಿದೆ. ಈ ವಿದ್ಯಾಸಂಸ್ಥೆಯಲ್ಲಿ ಓದಿದವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಷ್ಟೆಲ್ಲಾ ಖ್ಯಾತಿ ಇರುವ ಶಾಲೆ ದುರವಸ್ಥೆಯಿಂದ ಕೂಡಿದ್ದರೂ ಯಾರೂ ತಿರುಗಿನೋಡುತ್ತಿಲ್ಲ. ಶಾಲೆಯನ್ನು ಉಳಿಸಿಕೊಳ್ಳಲೇಬೇಕೆಂದು ಹಠ ತೊಟ್ಟಿರುವ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಬಿ.ಶ್ರೀಕಂಠಯ್ಯ ಅವರು ತಮ್ಮ ಸ್ವಂತ ಹಣವನ್ನು ಶಾಲೆಯ ಅಭಿವೃದ್ಧಿಗೆ ಹಾಕಿದ್ದಾರೆ. ಇದುವರೆಗೂ ೧೨ ಲಕ್ಷ ರು. ಹಣವನ್ನು ಖರ್ಚು ಮಾಡಿ ಶಾಲೆಗೆ ಬೆನ್ನಾಗಿ ನಿಂತಿದ್ದಾರೆ.

ಈ ಶಾಲೆಯಲ್ಲಿ ಒಟ್ಟು ೧೧೧ ಮಕ್ಕಳು ಎಂಟನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಓದುತ್ತಿದ್ದಾರೆ. ಎಲ್ಲರೂ ಬಡ ಕುಟುಂಬದಿಂದ ಬಂದ ಮಕ್ಕಳೇ ಆಗಿದ್ದಾರೆ. ಶಂಕರಮಠ, ಹಾಲಹಳ್ಳಿ, ಚಿಕ್ಕಮಂಡ್ಯ, ಕೆರೆಯಂಗಳ, ಗಾಂಧಿನಗರ, ಲೇಬರ್ ಕಾಲೋನಿ, ಷುಗರ್‌ಟೌನ್ ಸೇರಿದಂತೆ ಇತರೆ ಬಡಾವಣೆಗಳಿಂದ ಮಕ್ಕಳು ಇಲ್ಲಿಗೆ ಬರುತ್ತಾರೆ. ಮಕ್ಕಳನ್ನು ಶಾಲೆಗೆ ಕರೆತರುವುದಕ್ಕೆ ಶಿಕ್ಷಕರೇ ಸ್ವತಃ ಆಟೋ ವ್ಯವಸ್ಥೆ ಮಾಡಿ ಅದರ ಖರ್ಚನ್ನೂ ಅವರೇ ಭರಿಸುತ್ತಿರುವುದು ವಿಶೇಷವಾಗಿದೆ.

ಈ ಶಾಲೆಯಲ್ಲಿ ಸಮಾಜಶಾಸ್ತ್ರ ಹಾಗೂ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಳೆದ ೧೦ ವರ್ಷದಿಂದ ಸಮಾಜಶಾಸ್ತ್ರ ವಿಷಯಕ್ಕೆ ತಾತ್ಕಾಲಿಕ ಶಿಕ್ಷಕರನ್ನು ನೇಮಕ ಮಾಡಿಕೊಂಡು ಪಾಠ ಹೇಳಿಕೊಡಲಾಗುತ್ತಿದೆ. ದೈಹಿಕ ಶಿಕ್ಷಕರಿಲ್ಲದೆ ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಲು ಸಾಧ್ಯವಾಗದಂತಾಗಿದೆ.

ಶಾಲೆಯ ಆಟದ ಮೈದಾನಕ್ಕೆ ಹೊಂದಿಕೊಂಡಂತೆ ಹೊರಭಾಗದಲ್ಲಿ ಎರಡು ಕೊಠಡಿಗಳಿವೆ. ಅದು ಈಗಲೋ ಆಗಲೋ ಕುಸಿದುಬೀಳುವಂತಿದೆ. ಈ ಕೊಠಡಿಗಳ ದುಸ್ಥಿತಿಯಿಂದಾಗಿ ಕಂಪ್ಯೂಟರ್ ಕೊಠಡಿಯನ್ನೂ ಆಡಳಿತ ಸಮಿತಿಯವರ ಕೊಠಡಿಗೆ ವರ್ಗಾಯಿಸಲಾಗಿದೆ. ಶಾಲೆಯ ಕೆಲವು ಹಿರಿಯ ವಿದ್ಯಾರ್ಥಿಗಳು ನೀಡಿದ ಹಣಕಾಸಿನ ನೆರವಿನಿಂದ ಸಣ್ಣ-ಪುಟ್ಟ ಕಾಮಗಾರಿಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ಜನಪ್ರತಿನಿಧಿಗಳು ಹಾಗೂ ಸರ್ಕಾರದಿಂದ ಶಾಲೆಗೆ ಇದುವರೆಗೂ ಯಾವುದೇ ಸಹಕಾರ ಸಿಗದಿರುವುದರಿಂದ ಕೊಠಡಿಗಳ ಸಮಸ್ಯೆಗೆ ಮುಕ್ತಿ ದೊರಕದಂತಾಗಿದೆ.

ಆಡಳಿತ ಮಂಡಳಿ ಅಧ್ಯಕ್ಷ ಎಸ್.ಬಿ.ಶ್ರೀಕಂಠಯ್ಯನವರು ಮೂರು ಬಾರಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಶಾಲೆಯ ದುಸ್ಥಿತಿಯ ಬಗ್ಗೆ ಗಮನಸೆಳೆದಿದ್ದಾರೆ. ಒಮ್ಮೆ ದೆಹಲಿಗೂ ತೆರಳಿ ಗಮನಸೆಳೆದಿದ್ದಾರೆ. ಆದರೆ, ಇದುವರೆಗೂ ಅವರಿಂದ ಶಾಲೆಯ ಅಭಿವೃದ್ಧಿಗೆ ಹಣಕಾಸಿನ ನೆರವು ಸಿಕ್ಕಿಲ್ಲ ಎಂದು ಅಸಮಾಧಾನದಿಂದ ಹೇಳಿದರು.

ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಹಾಗೂ ಮಾಜಿ ಸದಸ್ಯ ಮರ್ದಿನಿ ಕೃಷ್ಣ ಅವರು ಶಾಸಕ ಪಿ.ರವಿಕುಮಾರ್ ಅವರಿಂದ ಅನುದಾನ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಆ ಪ್ರಯತ್ನಕ್ಕೂ ಮುಂದಾಗಿರುವ ಶ್ರೀಕಂಠಯ್ಯನವರು ಶಾಲೆಯ ಉಳಿವಿಗೆ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ.

ಶಾಲೆಗೆ ಸೇರಿದ ಜಾಗದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಲಕ್ಷಾಂತರ ರು. ಹಣವನ್ನು ಉದಾರವಾಗಿ ನೀಡಿದರು. ಆದರೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ ಹಣ ಕೇಳಿದರೆ ಯಾರೂ ಕೊಡುವುದಿಲ್ಲ. ಮಕ್ಕಳಿಗೆ ಕೊಠಡಿಗಳ ಕೊರತೆ ಇದ್ದು ಇರುವ ಕೊಠಡಿಗಳಲ್ಲೇ ಪಾಠ-ಪ್ರವಚನಗಳನ್ನು ನಡೆಸಲಾಗುತ್ತಿದೆ. ೬೦ ವರ್ಷದ ಶಾಲೆಯನ್ನು ಉಳಿಸಿಕೊಳ್ಳುವುದಕ್ಕೆ ಶತಪ್ರಯತ್ನ ಮಾಡುತ್ತಿದ್ದೇವೆ.

- ಎಸ್.ಬಿ.ಶ್ರೀಕಂಠಯ್ಯ, ಅಧ್ಯಕ್ಷರು, ಶ್ರೀ ಗೀತಾ ವಿದ್ಯಾಸಂಸ್ಥೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ