ಮಂಡ್ಯ: ಫುಟ್‌ಪಾತ್ ಒತ್ತುವರಿದಾರರಿಗೆ ಶಾಕ್...!

KannadaprabhaNewsNetwork |  
Published : Jan 13, 2026, 01:45 AM IST
೧೨ಕೆಎಂಎನ್‌ಡಿ-೧ರಸ್ತೆಯ ಮಧ್ಯಭಾಗದಿಂದ ೨೦ ಮೀಟರ್‌ವರೆಗೆ ಪುಟ್‌ಪಾತ್ ಸರ್ವೇ ಮಾಡುತ್ತಿರುವ ನಗರಸಭೆ ಅಧಿಕಾರಿಗಳು. | Kannada Prabha

ಸಾರಾಂಶ

ಮಂಡ್ಯ ನಗರದಲ್ಲಿ ಫುಟ್‌ಪಾತ್ ಒತ್ತುವರಿದಾರರಿಗೆ ನಗರಸಭೆ ಅಧಿಕಾರಿಗಳು ದಿಢೀರ್ ಶಾಕ್ ನೀಡಿದ್ದಾರೆ. ಸೋಮವಾರ ಅಧಿಕಾರಿಗಳ ತಂಡ ಸರ್ವೇ ನಡೆಸಿ ಒತ್ತುವರಿ ಜಾಗವನ್ನು ಗುರುತು ಮಾಡಿದ್ದಾರೆ. ಏಳು ದಿನಗಳೊಳಗೆ ಒತ್ತುವರಿ ತೆರವುಗೊಳಿಸುವಂತೆ ಕಟ್ಟಡ ಮಾಲೀಕರಿಗೆ ಸೂಚಿಸಿ ನೋಟಿಸ್ ಜಾರಿಗೊಳಿಸಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದಲ್ಲಿ ಫುಟ್‌ಪಾತ್ ಒತ್ತುವರಿದಾರರಿಗೆ ನಗರಸಭೆ ಅಧಿಕಾರಿಗಳು ದಿಢೀರ್ ಶಾಕ್ ನೀಡಿದ್ದಾರೆ. ಸೋಮವಾರ ಅಧಿಕಾರಿಗಳ ತಂಡ ಸರ್ವೇ ನಡೆಸಿ ಒತ್ತುವರಿ ಜಾಗವನ್ನು ಗುರುತು ಮಾಡಿದ್ದಾರೆ. ಏಳು ದಿನಗಳೊಳಗೆ ಒತ್ತುವರಿ ತೆರವುಗೊಳಿಸುವಂತೆ ಕಟ್ಟಡ ಮಾಲೀಕರಿಗೆ ಸೂಚಿಸಿ ನೋಟಿಸ್ ಜಾರಿಗೊಳಿಸಿದ್ದಾರೆ.

ಸೋಮವಾರ ನಗರದ ಎಸ್.ಡಿ.ಜಯರಾಂ ವೃತ್ತದಿಂದ ಮಹಾವೀರ ವೃತ್ತದವರೆಗೆ ನಗರಸಭೆ ಅಧಿಕಾರಿಗಳು ಫುಟ್‌ಪಾತ್ ಒತ್ತುವರಿ ಸರ್ವೇ ಕಾರ್ಯ ನಡೆಸಲಾಯಿತು. ಹೆದ್ದಾರಿ ರಸ್ತೆಯ ಮಧ್ಯಭಾಗದಿಂದ ೨೦ ಮೀಟರ್ ಅಂತರದವರೆಗೆ ಟೇಪ್ ಹಿಡಿದು ಅಧಿಕಾರಿಗಳು ಸರ್ವೇ ಮಾಡಿದಾಗ ಬಹುತೇಕ ಅಂಗಡಿ ಮಾಲೀಕರು ಕನಿಷ್ಠ ೧೦ ರಿಂದ ೨೦ ಅಡಿಯವರೆಗೆ ಒತ್ತುವರಿ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಗರದೊಳಗೆ ಫುಟ್‌ಪಾತ್ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಎಸ್.ಡಿ.ಜಯರಾಂ ವೃತ್ತದಿಂದ ಮಹಾವೀರ ವೃತ್ತದವರೆಗೆ ಫುಟ್‌ಪಾತ್ ನಿರ್ಮಾಣ ಗೊಂದಲದ ಗೂಡಾಗಿತ್ತು. ಅದಕ್ಕಾಗಿ ಅಲ್ಲಿ ಇದುವರೆಗೂ ಯಾವುದೇ ಕಾಮಗಾರಿಯನ್ನು ನಡೆಸಿರಲಿಲ್ಲ. ಈ ಪ್ರದೇಶದಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡು ಪ್ರತಿಷ್ಠಿತರು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರು. ಫುಟ್‌ಪಾತ್ ನಿರ್ಮಾಣಕ್ಕೂ ಮುನ್ನ ಸರ್ವೇ ಕಾರ್ಯ ನಡೆಸಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದರಿಂದ ಒತ್ತುವರಿದಾರರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.

ಫುಟ್‌ಪಾತ್ ಅಂಗಡಿ ಮೇಲೆ ಹಾಕಲಾಗಿದ್ದ ಪೆಟ್ಟಿ ಅಂಗಡಿಗಳು, ಅಂಗಡಿಗಳ ಮೇಲಿನ ಹೋಲ್ಡಿಂಗ್ಸ್‌ಗಳನ್ನು ತೆರವುಗೊಳಿಸಲಾಯಿತು. ಅಧಿಕಾರಿಗಳು ಒತ್ತುವರಿದಾರರಿಗೆ ಏಳು ದಿನಗಳವರೆಗೆ ಗಡುವು ನೀಡಿ ಸ್ಥಳದಲ್ಲಿಯೇ ನೋಟಿಸ್ ಜಾರಿಗೊಳಿಸಿದ್ದಾರೆ. ಕೆಲವರು ಸ್ವಯಂ ಪ್ರೇರಿತವಾಗಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಪ್ರತಿಷ್ಠಿತರು ನೋಟಿಸ್ ಸ್ವೀಕರಿಸಿದ್ದು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲವೆಂದು ತಿಳಿದುಬಂದಿದೆ.ಹೆದ್ದಾರಿ ಪಕ್ಕದಲ್ಲಿರುವ ಸುಮಾರು ೨೦೦ ಮೀಟರ್ ಉದ್ದದ ಪ್ರದೇಶದಲ್ಲಿ ಫುಟ್‌ಪಾತ್ ಜಾಗ ಬಿಟ್ಟು ಏಕಪ್ರಕಾರವಾಗಿ ಅಂಗಡಿಗಳನ್ನು ನಿರ್ಮಿಸಿಲ್ಲ. ಕೆಲವರು ಫುಟ್‌ಪಾತ್‌ಗಳ ಮೇಲೆಯೇ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರೆ ಕೆಲವರು ಶೀಟ್‌ಗಳನ್ನು ಹಾಕಿಕೊಂಡು ಮುಂದೆ ಬಂದಿದ್ದಾರೆ. ಕೆಲವರು ಮೆಟ್ಟಿಲುಗಳು, ಕಾಂಪೌಂಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೆಲವರು ಫುಟ್‌ಪಾತ್ ಜಾಗ ಎಂಬುದನ್ನೇ ಮರೆತು ಹೆದ್ದಾರಿಯ ತುದಿಯವರೆಗೂ ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ವಾಹನಗಳ ಪಾರ್ಕಿಂಗ್, ಪಾದಚಾರಿಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಈ ಪ್ರದೇಶದಲ್ಲಿ ಪಾದಚಾರಿಗಳು ಮುಖ್ಯ ರಸ್ತೆಯಲ್ಲೇ ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ನಿತ್ಯ ನೂರಾರು ದ್ವಿಚಕ್ರವಾಹನಗಳು, ಕಾರುಗಳನ್ನು ಇಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ಸರ್ವೇಸಾಮಾನ್ಯವಾಗಿದೆ. ಇದಕ್ಕೆ ಬ್ರೇಕ್ ಹಾಕಲು ನಗರಸಭೆ ಅಧಿಕಾರಿಗಳು ಸರ್ವೇ ಕಾರ್ಯಕ್ಕಿಳಿದಿರುವುದು ಉತ್ತಮ ಬೆಳವಣಿಗೆ. ಆದರೆ, ಒತ್ತುವರಿಯಾಗಿರುವ ಜಾಗವನ್ನು ಎಷ್ಟರಮಟ್ಟಿಗೆ ತೆರವುಗೊಳಿಸುವರು ಎನ್ನುವುದು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಕಾರ್ಯಾಚರಣೆಯಲ್ಲಿ ನಗರಸಭೆ ಅಭಿಯಂತರ ಮಹೇಶ್‌, ಆರೋಗ್ಯ ನಿರೀಕ್ಷಕ ಚಲುವರಾಜು ಮತ್ತು ನಗರಸಭೆ ಸಿಬ್ಬಂದಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು. ಕಾರ್ಯಾಚರಣೆಗೆ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಸಂಘಟನೆಗಳ ಹೋರಾಟದ ಫಲ

ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸದೆ ಕಾಮಗಾರಿ ಮಾಡದಂತೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರುನಾಡ ಸೇವಕರು ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಜಂಟೀಯಾಗಿ ಪ್ರತಿಭಟನೆ ನಡೆಸಿದ್ದವು. ಸಾಕಷ್ಟು ರಾಜಕೀಯ ಒತ್ತಡದ ಕಾರಣಕ್ಕೆ ಒತ್ತುವರಿ ತೆರವು ನನೆಗುದಿಗೆ ಬಿದ್ದಿತ್ತು. ಒತ್ತುವರಿ ತೆರವುಗೊಳಿಸದೆ ಕಾಮಗಾರಿ ನಡೆಸಲು ಬಿಡುವುದಿಲ್ಲವೆಂದು ಸಂಘಟನೆಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಂಡ್ಯ ನಗರಸಭೆ ಜಂಟಿಯಾಗಿ ಮೊದಲಿಗೆ ಎಸ್‌.ಡಿ.ಜಯರಾಂ ವೃತ್ತದಿಂದ ಮಹಾವೀರ ವೃತ್ತದವರೆಗೆ ಒತ್ತುವರಿಯಾಗಿರುವ ಪಾದಚಾರಿ ಮಾರ್ಗದ ಗಡಿಯನ್ನು ಗುರುತಿಸಿತು. ಹೆದ್ದಾರಿಯ ಮಧ್ಯ ಭಾಗದಿಂದ ೨೦ ಮೀಟರ್ ಅಂತರದವರೆಗೆ ಯಾವುದೆ ಕಟ್ಟಡ ನಿರ್ಮಾಣವನ್ನು ಅಕ್ರಮ ನಿರ್ಮಾಣ ಎಂದೇ ಸುಪ್ರೀಂ ಕೋರ್ಟ್ ಸಹ ವ್ಯಾಖ್ಯಾನಿಸಿದೆ.ರಾಜಕೀಯ ಪ್ರಭಾವ, ಒತ್ತಡ ಸೃಷ್ಟಿಯಾಗುವ ಸಂಭವ

ಫುಟ್‌ಪಾತ್ ಒತ್ತುವರಿ ಜಾಗ ತೆರವುಗೊಳಿಸುವುದು ನಗರಸಭೆ ಅಧಿಕಾರಿಗಳಿಗೆ ಇದೀಗ ದೊಡ್ಡ ಸವಾಲಾಗಿದೆ. ಇದೇನು ಅಷ್ಟು ಸುಲಭದ ಕೆಲಸವಾಗಿಲ್ಲ. ಸೋಮವಾರ ಅಧಿಕಾರಿಗಳು ನಡೆಸಿರುವ ಸರ್ವೇ ಪ್ರಕಾರ ಹಲವಾರು ಕಟ್ಟಡಗಳನ್ನು ಒಡೆದುಹಾಕಬೇಕಾಗುತ್ತದೆ. ೨೦ ಅಡಿಗಳಷ್ಟು ಮುಂದೆ ಬಂದಿರುವ ಕಟ್ಟಡ ಮಾಲೀಕರು ರಾಜಕೀಯ ಪ್ರಭಾವ, ಒತ್ತಡಗಳನ್ನು ಬೀರುವ ಸಾಧ್ಯತೆಗಳಿವೆ. ನಗರಸಭೆ ಅಧಿಕಾರಿಗಳು ಒತ್ತಡಕ್ಕೆ ಮಣಿದದ್ದೇ ಆದಲ್ಲಿ ಒತ್ತುವರಿಯಿಂದ ಸೃಷ್ಟಿಯಾಗಿರುವ ಅವ್ಯವಸ್ಥೆ ಮುಂದುವರೆಯಲಿದೆ. ಒಂದೊಮ್ಮೆ ಯಾರ ಪ್ರಭಾವಕ್ಕೂ ಮಣಿಯದೆ ಒತ್ತುವರಿಯನ್ನು ತೆರವುಗೊಳಿಸಿದರೆ ಉತ್ತಮವಾದ ಫುಟ್‌ಪಾತ್ ನಿರ್ಮಾಣವಾಗಲಿದೆ. ಈ ಒತ್ತುವರಿಯಲ್ಲಿ ಪ್ರತಿಷ್ಠಿತರು, ಪ್ರಭಾವಿಗಳೇ ಇರುವುದರಿಂದ ತೆರವು ಕಾರ್ಯ ಕ್ಲಿಷ್ಟವಾಗಲಿದೆ. ಸಚಿವರು, ಶಾಸಕರು, ಸಂಸದರಿಂದಲೂ ಅಧಿಕಾರಿಗಳ ಮೇಲೆ ಒತ್ತಡ ಸೃಷ್ಟಿಯಾಗಬಹುದೆಂದು ಹೇಳಲಾಗುತ್ತಿದೆ.

೨೦೧೫ರಲ್ಲಿ ಸರ್ಕಾರಿ ಕಟ್ಟಡಗಳೇ ಹಿಂದಕ್ಕೆ..!

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿರ್ಮಾಣ ಸಮಯದಲ್ಲಿ ನಗರಸಭೆ ಆಯುಕ್ತರಾಗಿದ್ದ ಶಶಿಕುಮಾರ್ ಅವರು ಫುಟ್‌ಪಾತ್ ಜಾಗದಲ್ಲಿ ನಿರ್ಮಾಣವಾಗಿದ್ದ ನಗರಸಭೆ, ಲೋಕೋಪಯೋಗಿ ಇಲಾಖೆ, ಕಾವೇರಿ ನೀರಾವರಿ ನಿಗಮದ ಕಾಂಪೌಂಡ್‌ಗಳನ್ನೇ ಒಡೆದುಹಾಕಿಸುವಲ್ಲಿ ಯಶಸ್ವಿಯಾಗಿದ್ದರು. ನಂತರದಲ್ಲಿ ಇಲಾಖೆಗಳು ಹೊಸದಾಗಿ ಕಾಂಪೌಂಡ್ ಗೋಡೆಗಳನ್ನು ನಿರ್ಮಿಸಿಕೊಂಡಿದ್ದರು. ಆ ಸಮಯದಲ್ಲಿ ಈ ಪ್ರದೇಶದಲ್ಲಿ ಹೆಚ್ಚಿನ ಒತ್ತುವರಿಯಾಗಿರಲಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಫುಟ್‌ಪಾತ್ ಜಾಗವನ್ನು ೧೦ ರಿಂದ ೨೦ ಅಡಿ ಒತ್ತುವರಿ ಮಾಡಿಕೊಂಡಿರುವುದರಿಂದ ಫುಟ್‌ಪಾತ್ ನಿರ್ಮಾಣಕ್ಕೆ ತೀವ್ರ ಅಡಚಣೆಯಾಗಿದೆ.

ಒತ್ತುವರಿ ತೆರವಾಗದಿದ್ದರೆ ಹೋರಾಟ

ಫುಟ್‌ಪಾತ್ ಜಾಗ ಅತಿ ಹೆಚ್ಚು ಒತ್ತುವರಿಯಾಗಿರುವುದು ಇಲ್ಲೇ. ಸುಮಾರು ೧೦ ರಿಂದ ೨೦ ಅಡಿಯವರೆಗೆ ಒತ್ತುವರಿ ಮಾಡಿಕೊಂಡಿರುವುದು ಸರ್ವೆಯಿಂದ ಗೊತ್ತಾಗಿದೆ. ಏಳು ದಿನಗಳೊಳಗೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಬೇಕು. ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯಬಾರದು. ಲಾಭಿಗೊಳಗಾಗಿ ತೆರವುಗೊಳಿಸದಿದ್ದರೆ ಹೋರಾಟ ನಡೆಸಲಾಗುವುದು.

- ಎಂ.ಬಿ.ನಾಗಣ್ಣಗೌಡ, ರಾಜ್ಯಾಧ್ಯಕ್ಷರು, ಕರುನಾಡ ಸೇವಕರು ಸಂಘಟನೆ

ತೆರವುಗೊಳಿಸುವುದು ನಿಶ್ಚಿತ

ನಗರದೊಳಗೆ ಹಾಲಿ ಸರ್ವೆ ನಡೆಸಿರುವ ಪ್ರದೇಶದಲ್ಲಿ ಹೆಚ್ಚು ಫುಟ್‌ಪಾತ್ ಒತ್ತುವರಿಯಾಗಿದೆ. ಎಲ್ಲಿಂದ ಎಲ್ಲಿಯವರೆಗೆ ಫುಟ್‌ಪಾತ್ ನಿರ್ಮಿಸಬೇಕೆಂಬ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಅದಕ್ಕಾಗಿ ನಗರಸಭೆ ಅಧಿಕಾರಿಗಳಿಂದ ಸರ್ವೇಕಾರ್ಯ ನಡೆಸಲಾಗಿದೆ. ಒತ್ತುವರಿ ತೆರವಿಗೆ ಏಳು ದಿನಗಳ ಗಡುವು ನೀಡಿದ್ದು, ಅಷ್ಟರೊಳಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾವೇ ಮುಂದೆ ನಿಂತು ತೆರವುಗೊಳಿಸಬೇಕಾಗುತ್ತದೆ.

- ಯು.ಪಿ.ಪಂಪಾಶ್ರೀ, ಆಯುಕ್ತರು, ನಗರಸಭೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ