ಎಚ್.ಕೆ.ಅಶ್ವಥ್, ಹಳುವಾಡಿ
ಮಂಡ್ಯ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು 30 ಲಕ್ಷ ರು. ವೆಚ್ಚದಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ನಗರಸಭೆಯಿಂದ ನಡೆಸಲಾಗುತ್ತಿದೆ. ಈ ಸಾಲಿನಲ್ಲಿ ಮೂರು ಸಾವಿರ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಜೊತೆಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುವ ಗುರಿ ಹೊಂದಲಾಗಿದೆ.
ಪ್ರಾಣಿ ಸಂತತಿ ನಿಯಂತ್ರಣ ಎಬಿಸಿ (ಡಾಗ್ಸ್ ರೂಲ್ಸ್) 2021ರ ರೀತ್ಯಾ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ರೇಬೀಸ್ ಚುಚ್ಚುಮದ್ದು ನೀಡಿ ಸಂತಾನ ಶಕ್ತಿಹರಣ ಚಿಕಿತ್ಸೆ ನಡೆಸಲಾಗುವುದು. ಶಸ್ತ್ರಚಿಕಿತ್ಸೆ ಬಳಿಕ ನಾಯಿಗಳನ್ನು ಆರೈಕೆ ಮಾಡಿ ಶಸ್ತ್ರಚಿಕಿತ್ಸೆ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸುವುದು. ನಂತರ ಅವುಗಳನ್ನು ಯಾವ ಜಾಗದಲ್ಲಿ ಹಿಡಿದಿರುವರೋ ಅದೇ ಜಾಗಕ್ಕೆ ಜಿಪಿಎಸ್ ಫೋಟೋ ಸಹಿತ ಬಿಡುವ ಕಾರ್ಯ ಮಾಡಲಾಗುತ್ತಿದೆ.2025-26ನೇ ಸಾಲಿನಲ್ಲಿ ಬೀದಿನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ 60 ಲಕ್ಷ ಹಣವನ್ನು ಖರ್ಚು ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 30 ಲಕ್ಷ ರು.ಗಳ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಮೂರು ಸಾವಿರ ನಾಯಿಗಳನ್ನು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಗೊಳಪಡಿಸುವ ಗುರಿ ಹೊಂದಿದ್ದು, ಒಂದೊಂದು ಬೀದಿನಾಯಿಗೆ ಅಂದಾಜು 1722 ರು.ನಂತೆ ವೆಚ್ಚ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
2022ರಿಂದ ಸಂತಾನ ಶಕ್ತಿಹರಣ ಚಿಕಿತ್ಸೆ ಆರಂಭಿಸಲಾಗಿದೆ. 2023ರಲ್ಲಿ ಈ ಶಸ್ತ್ರ ಚಿಕಿತ್ಸೆಯನ್ನು ನಡೆಸಿರಲಿಲ್ಲ. 2024 ಮತ್ತು 2025ರಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಹಾಗೂ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಪರಿಸರ ಅಭಿಯಂತರ ರುದ್ರೇಗೌಡ ಹೇಳಿದರು.
ನಗರದ ವಿವಿಧ ವಾರ್ಡ್‌ಗಳಲ್ಲಿರುವ ನಾಯಿಗಳನ್ನು ಸೆರೆ ಹಿಡಿದು ವಾಹನಗಳಲ್ಲಿ ತುಂಬಿಕೊಂಡು ಕಾಳೇನಹಳ್ಳಿ ಹೊರ ವಲಯದ ಕಸ ಸಂಗ್ರಹಣಾ ಘಟಕಕ್ಕೆ ಕರೆದೊಯ್ಯಲಾಗುವುದು. ಅಲ್ಲಿ ನಿತ್ಯ 10 ರಿಂದ 20 ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿ ಬಳಿಕ ಅಲ್ಲೇ ಆರೈಕೆ ಮಾಡಲಾಗುತ್ತದೆ. ಬಳಿಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆಯೇ ಎಂಬುದನ್ನು ಖಚಿತ ಪಡಿಸಿಕೊಂಡು ರೇಬಿಸ್ ಚುಚ್ಚುಮದ್ದು ನೀಡಿ ಮತ್ತೆ ಅವುಗಳನ್ನು ಹಿಡಿದಿದ್ದ ಜಾಗದಲ್ಲೇ ಬಿಡುವ ಪ್ರಕ್ರಿಯೆ ನಡೆಸಲಾಗುತ್ತಿದೆ.ನಾಯಿಗಳ ಸಂತಾನಶಕ್ತಿ ಕ್ಷೀಣ
ನಗರಸಭೆ 2022ರಲ್ಲಿ ಒಟ್ಟು 1762 ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ಚುಚ್ಚುಮದ್ದು ನೀಡಲಾಗಿತ್ತು. ಇದಕ್ಕಾಗಿ ಒಟ್ಟು 13,44,400 ರು.ಗಳನ್ನು ವೆಚ್ಚ ಮಾಡಲಾಗಿತ್ತು. 2024ರಲ್ಲಿ 30 ಲಕ್ಷ ರು. ವೆಚ್ಚ ಮಾಡಿ 1742 ನಾಯಿಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇದೀಗ 30 ಲಕ್ಷ ರು. ವೆಚ್ಚದಲ್ಲಿ 3 ಸಾವಿರ ನಾಯಿಗಳನ್ನು ಶಸ್ತ್ರಚಿಕಿತ್ಸೆ, ರೇಬಿಸ್ ಚುಚ್ಚುಮದ್ದು ನೀಡುವುದಕ್ಕೆ ಒಳಪಡಿಸಲಾಗಿದೆ.ಬೀದಿ ನಾಯಿಗಳನ್ನು ನಿಯಂತ್ರಿಸುವುದಕ್ಕ ಬಜೆಟ್‌ನಲ್ಲಿ 30 ಲಕ್ಷ ರು. ತೆಗೆದಿರಿಸಲಾಗಿದ್ದು, ನಾಯಿಗಳಿಗೆ ಕಾಳೇನಹಳ್ಳಿಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಒಂದು ನಾಯಿಗೆ 1722 ರು. ವೆಚ್ಚ ಮಾಡುತ್ತಿದ್ದು, ಅವುಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿ ಯಾವ ಜಾಗದಲ್ಲಿ ಹಿಡಿದಿದ್ದೇವೋ ಅದೇ ಜಾಗಕ್ಕೆ ಬಿಡಲಾಗುತ್ತಿದೆ.