ಕನ್ನಡಪ್ರಭ ವಾರ್ತೆ ಮಂಡ್ಯ
ವಿಎಲ್‌ಎನ್ ಎಜುಕೇಷನ್ ಟ್ರಸ್ಟ್, ಡ್ಯಾಫೋಡಿಲ್ಸ್ ಶಾಲೆಯ ವಿದ್ಯಾರ್ಥಿಗಳಾದ ತ್ರಿಷಾ ಪಿ.ಗೌಡ ಹಾಗೂ ಎಚ್.ವಿ.ಕುಮುದಾ ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಸ್ಥಳದಲ್ಲೇ ಟೆಲಿಸ್ಕೋಪ್ ತಯಾರಿಸಿ ಹಲವು ದಾಖಲೆಗಳಿಗೆ ಪಾತ್ರರಾಗಿದ್ದಾರೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಸುಜಾತ ಕೃಷ್ಣ ತಿಳಿಸಿದರು.ಅ.1ರಿಂದ 9ರವರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ, ಇಸ್ರೋ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಹಯೋಗದಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆದ `ನಾನೂ ವಿಜ್ಞಾನಿ-2025’ ಶಿಬಿರದ ಮೂಲಕ ಈ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರದಲ್ಲಿ ರಾಜ್ಯದ 168 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ 150 ವಿದ್ಯಾರ್ಥಿಗಳು ಟೆಲಿಸ್ಕೋಪ್ ತಯಾರಿಸಿ ರಾಜ್ಯ ಪಾಲರಾದ ಥಾವರ್ ಚಂದ್ ಗೆಹಲೋಟ್ ಅವರಿಂದ ಪ್ರಶಸ್ತಿ ಪಡೆದಿದ್ದಾರೆ ಎಂದರು.150 ವಿದ್ಯಾರ್ಥಿಗಳ ಪೈಕಿ 5 ಮಂದಿಯುಳ್ಳ ತಂಡ ರಚಿಸಿದ್ದು, ತ್ರಿಷಾ.ಪಿ ಗೌಡ ಹಾಗೂ ಎಚ್.ವಿ.ಕುಮುದಾ ಅವರೊಂದಿಗೆ ಜಿಲ್ಲೆಯಿಂದ ಭಾಗವಹಿಸಿದ್ದ ವಿನುತ, ಚಿರಂತ್, ಸಾತ್ವಿಕ್ ಅವರು ಟೆಲಿಸ್ಕೋಪ್ ತಯಾರಿಸಲು ಪಾತ್ರ ವಹಿಸಿದ್ದಾರೆ. ಇವರ ಸಾಧನೆಯು ‘ವಲ್ಡ್ ಬುಕ್ ಆಫ್ ರೆಕಾರ್ಡ್’, ‘ಇಂಡಿಯನ್ ಬುಕ್ ಆಫ್ ರೆಕಾರ್ಡ್’, ‘ಏಷ್ಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲಾಗಿದೆ ಎಂದರು.
ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾದ ತ್ರಿಷಾ ಪಿ.ಗೌಡ ಹಾಗೂ ಎಚ್.ವಿ.ಕುಮುದಾ ತಮ್ಮ ಅನುಭವನ್ನು ಹಂಚಿಕೊಂಡರು. ತಾವು ತಯಾರಿಸಿದ ಟೆಲಿಸ್ಕೋಪ್‌ಗೆ ಸುಮಾರು 7 ರಿಂದ 8 ಸಾವಿರ ರು. ಆಗಿರಬಹುದೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಗೋಷ್ಠಿಯಲ್ಲಿ ಟ್ರಸ್ಟ್ನ ಅಧ್ಯಕ್ಷ ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಮುಖ್ಯ ಶಿಕ್ಷಕಿ ಸಿ.ಎನ್.ನಯನ, ಶಿಕ್ಷಕಿ ತರುಣ ಇದ್ದರು.