ಕನ್ನಡಪ್ರಭ ವಾರ್ತೆ ಮಂಡ್ಯ
ಅತಿಥಿ ಉಪನ್ಯಾಸಕರೆಲ್ಲರೂ ಸಾಮೂಹಿಕವಾಗಿ ಕುಲಸಚಿವರನ್ನು ಭೇಟಿಯಾಗಿ ವೇತನ ಪಾವತಿಗೆ ವಿಳಂಬ ಮಾಡುತ್ತಿರುವ ಆಡಳಿತ ಮಂಡಳಿ ಧೋರಣೆ ವಿರೋಧಿಸಿದರು. ಇನ್ನೆರಡು ದಿನದಲ್ಲಿ ವೇತನ ನೀಡದಿದ್ದರೆ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಬಾರಿ ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಕ ಮಾಡಿದರೂ ವೇತನ ಪಾವತಿಯನ್ನು ವಿಶ್ವವಿದ್ಯಾಲಯವೇ ಪಾವತಿಸಬೇಕು. ಅದಕ್ಕಾಗಿ ಸ್ವಂತ ಆರ್ಥಿಕ ಸಂಪನ್ಮೂಲವನ್ನು ಸೃಷ್ಟಿಸಿಕೊಳ್ಳುವಂತೆ ತಿಳಿಸಿತ್ತು. ಮಕ್ಕಳ ದಾಖಲಾತಿ ಕಡಿಮೆ ಇರುವುದರಿಂದ ವೇತನ ಪಾವತಿ ಕಷ್ಟವಾಗಲಿದೆ ಎಂದು ಸರ್ಕಾರಕ್ಕೆ ಪತ್ರ ಬರೆದರೂ ಅದನ್ನು ಒಪ್ಪದೆ ವೇತನ ಭರಿಸುವ ಜವಾಬ್ದಾರಿಯನ್ನು ವಿವಿಗೇ ವಹಿಸಿತ್ತು ಎಂದು ಅತಿಥಿ ಉಪನ್ಯಾಸಕರು ತಿಳಿಸಿದರು.ವಿವಿ ಹಣಕಾಸು ಸಮಿತಿ, ಸಿಂಡಿಕೇಟ್ ಸಭೆಗಳಲ್ಲೂ ಈ ವಿಷಯ ಚರ್ಚೆಗೆ ಬಂದಾಗ ಹಣಕಾಸು ಸಮಿತಿ ವೇತನ ಪಾವತಿಗೆ ಸಮ್ಮತಿ ಸೂಚಿಸಿತ್ತು. ಆದರೂ ಆಡಳಿತ ಮಂಡಳಿ ಇದುವರೆಗೂ ವೇತನ ಪಾವತಿಸದೆ ಮೀನಮೇಷ ಎಣಿಸುತ್ತಿರುವುದರಿಂದ ವೇತನವಿಲ್ಲದೆ ಅತಿಥಿ ಉಪನ್ಯಾಸಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಅಳಲು ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರೆಲ್ಲರೂ ಕುಲಸಚಿವೆ ಕಲ್ಪಶ್ರೀ ಅವರನ್ನು ಭೇಟಿಯಾಗಿ ವೇತನ ಪಾವತಿಸುವಂತೆ ಬಿಗಿಪಟ್ಟು ಹಿಡಿದರು. ಆಗ ಅವರನ್ನು ಸಮಾಧಾನಪಡಿಸಿದ ಕಲ್ಪಶ್ರೀ ಅವರು, ಅತಿಥಿ ಉಪನ್ಯಾಸಕರ ಹಾಜರಾತಿಯನ್ನು ಪರಿಶೀಲಿಸಿ ವೇತನ ಪಾವತಿಗೆ ಕ್ರಮವಹಿಸುವಂತೆ ಸೂಚಿಸಿದ್ದೇನೆ. ಇನ್ನೆರಡು ದಿನದಲ್ಲಿ ವೇತನ ಪಾವತಿಯಾಗಲಿದೆ. ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ಮಂಡ್ಯ ವಿವಿ ಹಣಕಾಸು ಸಮಿತಿ ವೇತನ ಪಾವತಿಗೆ ಒಪ್ಪಿದ್ದರೂ ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಅತಿಥಿ ಉಪನ್ಯಾಸಕರ ವಾರ್ಷಿಕ ಸುಮಾರು ೫ ಕೋಟಿ ರು. ಆಗಬಹುದು. ಕಾಲೇಜಿನಲ್ಲಿ ೧೫೬ ಅತಿಥಿ ಉಪನ್ಯಾಸಕರಿದ್ದು, ೨೮ ಸಾವಿರ ರು.ನಿಂದ ೪೦ ಸಾವಿರ ರು.ವರೆಗೆ ವೇತನ ಪಡೆಯುತ್ತಿದ್ದಾರೆ. ವೇತನ ವಿಳಂಬದಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ.
ಅತಿಥಿ ಉಪನ್ಯಾಸಕರು ಸರ್ಕಾರದಿಂದ ನೇಮಕಗೊಂಡಿದ್ದರೂ ವಿವಿಗಳೇ ವೇತನ ಪಾವತಿಸುವಂತೆ ಸೂಚನೆ ನೀಡಿದೆ. ವಿವಿ ಹಣಕಾಸು ಸಮಿತಿ ಸಮ್ಮತಿಸಿದ್ದರೂ ವೇತನ ಪಾವತಿಸದಿರುವುದು ಸರಿಯಲ್ಲ. ಕೂಡಲೇ ವೇತನ ಪಾವತಿಗೆ ವಿವಿಯ ಆಡಳಿತ ಮಂಡಳಿ ಕ್ರಮ ವಹಿಸಬೇಕು. ಇಲ್ಲದಿದ್ದರೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಲಿದೆ.