ಮಂಡ್ಯ: ವಿಷ್ಣು ದೇಗುಲಗಳಲ್ಲಿ ವೈಕುಂಠ ಏಕಾದಶಿ ಸಡಗರ

KannadaprabhaNewsNetwork |  
Published : Dec 31, 2025, 01:30 AM IST
30ಕೆಎಂಎನ್‌ಡಿ-7ಮಂಡ್ಯ ತಾಲೂಕು ಸಾತನೂರಿನ ಶ್ರೀ ಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ. | Kannada Prabha

ಸಾರಾಂಶ

ಮಂಡ್ಯ ನಗರದಲ್ಲಿರುವ ಶ್ರೀಲಕ್ಷ್ಮೀಜನಾರ್ದನಸ್ವಾಮಿ, ಶ್ರೀನಿವಾಸಸ್ವಾಮಿ, ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ, ಶ್ರೀನಿವಾಸ ದೇವಸ್ಥಾನ, ಬೋವಿ ಕಾಲೋನಿಯಲ್ಲಿರುವ ಶ್ರೀ ವೆಂಕಟೇಶ್ವರ, ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಪಾಂಡುರಂಗಸ್ವಾಮಿ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆದವು.

ಕನ್ನಡಪ್ರಭ ವಾರ್ತೆ ಮಂಡ್ಯ

ವೈಕುಂಠ ಏಕಾದಶಿ ಅಂಗವಾಗಿ ಜಿಲ್ಲೆಯ ವಿಷ್ಣು ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರು ದೇಗುಲಗಳಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರ ಪ್ರವೇಶದೊಂದಿಗೆ ದೇವರ ದರ್ಶನ ಪಡೆದು ಧನ್ಯತಾ ಭಾವ ಮೆರೆದರು.

ಸೋಮವಾರ ಸಂಜೆಯಿಂದಲೇ ದೇವಾಲಯಗಳಲ್ಲಿ ಪೂಜಾ ವಿಧಿ-ವಿಧಾನಗಳನ್ನು ನಡೆಸಲಾಯಿತು. ದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.

ಮಂಡ್ಯ ನಗರದಲ್ಲಿರುವ ಶ್ರೀಲಕ್ಷ್ಮೀಜನಾರ್ದನಸ್ವಾಮಿ, ಶ್ರೀನಿವಾಸಸ್ವಾಮಿ, ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ, ಶ್ರೀನಿವಾಸ ದೇವಸ್ಥಾನ, ಬೋವಿ ಕಾಲೋನಿಯಲ್ಲಿರುವ ಶ್ರೀ ವೆಂಕಟೇಶ್ವರ, ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಪಾಂಡುರಂಗಸ್ವಾಮಿ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆದವು. ತಾಲೂಕಿನ ಸಾತನೂರು ಶ್ರೀ ಕಂಬದ ನರಸಿಂಹಸ್ವಾಮಿ, ಕಿರಗಂದೂರು ಶ್ರೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪ್ರಾತಃಕಾಲ ಬೆಳಗ್ಗೆ 4.30ಕ್ಕೆ ಮಹಾಭಿಷೇಕ ನಡೆಯಿತು. ಬೆಳಗ್ಗೆ 5.30ಕ್ಕೆ ಉಯ್ಯಾಲೋತ್ಸವ, ನಂತರ 6.30ಕ್ಕೆ ಮಹಾ ಮಂಗಳಾರತಿ ನಡೆಯಿತು. ತಾಲೂಕಿನ ಕೇಶವನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಹವನ ನಡೆಯಿತು.

ವೈಕುಂಠ ಏಕಾದಶಿ ಅಂಗವಾಗಿ ಬೆಳಗಿನಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಮಾಡಿ ತೀರ್ಥ ಪ್ರಸಾದ ಸ್ವೀಕರಿಸಿದರು. ಕೆಲವು ಕಡೆಗಳಲ್ಲಿ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದ್ದುಘಿ, 20, 50 ರು.ಗಳನ್ನು ಕೊಟ್ಟು ಭಕ್ತರು ವಿಶೇಷ ದರ್ಶನ ಪಡೆದರು.

ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರಿಂದ ಸ್ವರ್ಗದ ಬಾಗಿಲು ಪ್ರವೇಶ

ಕೆ.ಆರ್.ಪೇಟೆ:

ತಾಲೂಕಿನ ವಿಷ್ಣು ದೇವಾಲಯಗಳಲ್ಲಿ ಇಂದು ವೈಕುಂಠ ಏಕಾದಶಿಯ ಪ್ರಯುಕ್ತ ಸ್ವರ್ಗದ ಬಾಗಿಲನ್ನು ಭಕ್ತರಿಗೆ ಪ್ರವೇಶ ಮಾಡಿಸುವ ಮೂಲಕ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.

ತಾಲೂಕಿನ ಪೌರಾಣಿಕ ಹಿನ್ನೆಲೆಯುಳ್ಳ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮುಂಜಾನೆ 4.30ರಿಂದಲೇ ಪೂಜಾ ವಿಧಿ ವಿಧಾನಗಳು ನಡೆದವು. ಬಿಜಿಎಸ್ ಹೇಮಗಿರಿ ಶಾಖಾಮಠದ ಡಾ.ಜೆ.ಎನ್.ರಾಮಕೃಷ್ಣೇಗೌಡರ ನೇತೃತ್ವದಲ್ಲಿ ಪೂಜಾ ವಿಧಿಗಳು ಜರುಗಿದವು.

ಬೆಳಗ್ಗೆಯಿಂದಲೆ ಸಹಸ್ರಾರು ಜನರು ಹೇಮಗಿರಿಯ ಬೆಟ್ಟದ ಮೇಲಿರುವ ದೇಗುಲಕ್ಕೆ ಆಗಮಿಸಿ ತಮ್ಮ ಸೇವೆಯನ್ನು ಮಾಡಿದರು.

ಹೊಸಹೊಳಲಿನ ಹೊಯ್ಸಳ ನಿರ್ಮಿತ ಶ್ರೀಲಕ್ಷ್ಮಿನಾರಾಯಣಸ್ವಾಮಿ ದೇಗುಲಕ್ಕೆ ಭಕ್ತರ ದಂಡೆ ಹರಿದು ಬರುತ್ತಿದೆ. ದೇವರ ರ್ದಶನ ಮಾಡಿ ನಂತರ ಸ್ವರ್ಗದ ಬಾಗಿಲಿನ ಮೂಲಕ ಹೊರಬಂದು ಪ್ರಸಾದವನ್ನು ಸೇವಿಸುವ ಅವಕಾಶವನ್ನು ಮಾಡಿಕೊಡಲಾಗಿತ್ತು.

ಬೂಕನಕೆರೆ ವೆಂಕಟೇಶ್ವರ ದೇವಾಲಯ, ವರಹನಾಥ ಕಲ್ಲಹಳ್ಳಿ ಭೂ ವರಾಹನಾಥ ದೇವಾಲಯ, ಕಿಕ್ಕೇರಿ ಯೋಗಾನರಸಿಂಹಸ್ವಾಮಿ ದೇವಾಲಯ, ಅಗ್ರಹಾರಬಾಚಹಳ್ಳಿ ಚನ್ನಕೆಶವ ದೇವಾಲಯ, ಹರಹರಪುರದ ಶ್ರೀ ಚನ್ನಕೇಶವ ದೇವಾಲಯ, ಪಟ್ಟಣದ ಶ್ರೀ ಲಕ್ಷ್ಮಿನಾರಾಯಣಸ್ವಾಮಿ ದೇವಾಲಯ, ಅಕ್ಕಿಹೆಬ್ಬಾಳಿನ ನರಸಿಂಹಸ್ವಾಮಿ ದೇವಾಲಯ, ಪಟ್ಟಣದ ಮುತ್ತುರಾಯಸ್ವಾಮಿ ದೇವಾಲಯ ಸೇರಿದಂತೆ ತಾಲೂಕಿನ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆಗಳು, ಹೋಮ ಹವನಾದಿಗಳು ನಡೆದವು.

ಶಾಸಕ ಎಚ್.ಟಿ.ಮಂಜು ತಮ್ಮ ಕುಟುಂಬ ಸಮೇತರಾಗಿ ತೆರಳಿ ಹೊಸಹೊಳಲಿನಲ್ಲಿ ದೇವರ ದರ್ಶನವನ್ನು ಪಡೆದು ಸ್ವರ್ಗದ ಬಾಗಿಲನ್ನು ಪ್ರವೇಶಿಸಿದರು. ಮನ್ಮುಲ್ ನಿರ್ದೇಶಕರಾದ ಡಾಲುರವಿ, ಎಂ.ಬಿ.ಹರೀಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಷ್, ಮಾಜಿ ಶಾಸಕ ಬಿ.ಪ್ರಕಾಶ್ ಸೇರಿದಂತೆ ಸಹಸ್ರಾರು ಭಕ್ತರು ವಿವಿಧ ದೇವಾಲಯಗಳಲ್ಲಿ ದೇವರ ರ್ದಶನವನ್ನು ಪಡೆದರು.ವೈಕುಂಠ ಏಕಾದಶಿ ವಿವಿಧ ಪೂಜಾಕೈಂಕರ್ಯ

ಕಿಕ್ಕೇರಿ:

ವೈಕುಂಠ ಏಕಾದಶಿ ಅಂಗವಾಗಿ ವಿಷ್ಣು ದೇವಾಲಯಗಳಲ್ಲಿ ವಿವಿಧ ಪೂಜಾಕೈಂಕರ್ಯ, ಅಭಿಷೇಕಗಳು ಜರುಗಿದವು.

ದಕ್ಷಿಣಯಾಣದಿಂದ ಉತ್ತರಾಯಣಕ್ಕೆ ಸೂರ್ಯಭಗವಾನ್ ಚಲಿಸುವ ಪುಣ್ಯಮಾಸದ ವಿಶೇಷ ದಿನದಲ್ಲಿ ಭಕ್ತರು ದೇಗುಲದ ಪ್ರವೇಶದ್ವಾರವನ್ನು ಭಕ್ತಿಯಿಂದ ನಮಿಸಿ ಒಳಪ್ರವೇಶಿಸಿದರು. ಇಲ್ಲಿನ ಸಿದ್ದಾರೂಢಸ್ವಾಮಿ ಮಠ, ನರಸಿಂಹಸ್ವಾಮಿ ದೇಗುಲ, ವೀರಾಂಜನೇಯದೇಗುಲದಲ್ಲಿ ಭಕ್ತರು ಅಧಿಕವಾಗಿ ಜಮಾಯಿಸಿದ್ದರು. ದೇಗುಲಗಳಲ್ಲಿ ನಿರ್ಮಿಸಲಾಗಿದ್ದ ವೈಕುಂಠಉತ್ತರದ್ವಾರ ಬಾಗಿಲು ಮೂಲಕ ಪ್ರವೇಶಿಸಿ ದೇವರದರ್ಶನ ಪಡೆದು ಪುನೀತರಾದರು.

ಗೋವಿಂದ, ನಾರಾಯಣ ಎಂಬ ಭಕ್ತರ ಜಯಘೋಷದೊಂದಿಗೆ ದೇಗುಲದಲ್ಲಿ ಶಂಖನಾದ ಮೊಳಗಿತು. ಅರ್ಚಕ ವೃಂದದವರು ದೇವರಿಗೆ ಪಂಚಾಮೃತ ಅಭಿಷೇಕ, ವಿವಿಧ ಪೂಜಾಲಂಕಾರ ಸೇವೆಗಳನ್ನು ಮಾಡಿ ಲೋಕಕಲ್ಯಾಣಾರ್ಥ ಪ್ರಾರ್ಥಿಸಿದರು. ದೇವರಿಗೆ ವಿವಿಧ ಪರಿಮಳ ಪುಷ್ಪ, ಆಭರಣಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಸರತಿಯಲ್ಲಿ ನಿಂತು ದೇವರದರ್ಶನ ಪಡೆದರು.

ಮಹಿಳೆಯರು ಚಿತ್ತಾಕರ್ಷಕವಾದ ವರ್ಣರಂಜಿತರಂಗೋಲಿ ಬಿಡಿಸಿ ಭಕ್ತರನ್ನು ಸ್ವಾಗತಿಸಿದರು. ವಿವಿಧ ದೇಗುಲಗಳಲ್ಲಿ ಸಿಹಿ ಬೂಂದಿ, ಲಡ್ಡು, ಮೊಸರನ್ನ, ರಸಾಯನ, ಪುಳಿಯೋಗರೆ, ತೀರ್ಥ ಪ್ರಸಾದ ಸೇವೆ ಭಕ್ತರಿಗೆ ನೀಡಲಾಯಿತು.

ಗದ್ದೆಹೊಸೂರುವಿನ ಅಭಯ ವೆಂಕಟರಮಣಸ್ವಾಮಿ, ಗೋವಿಂದನಹಳ್ಳಿ ವೇಣುಗೋಪಾಲಸ್ವಾಮಿ, ಕೃಷ್ಣಾಪುರದ ಚಲುವನಾರಾಯಣಸ್ವಾಮಿ, ಚಿಕ್ಕಳಲೆ ಲಕ್ಷ್ಮೀನರಸಿಂಹಸ್ವಾಮಿ, ಬೋಳಮಾರನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ಮಾರುತಿ ದೇಗುಲಗಳಲ್ಲಿ ವಿಶೇಷ ಪೂಜೆಗಳು ಶ್ರದ್ಧಾಭಕ್ತಿಯಿಂದ ನೆರವೇರಿಸಿ,ತೀರ್ಥ ಪ್ರಸಾದ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಬಸ್‌ ನಿಲ್ದಾಣಕ್ಕೆ 100ಕೋಟಿ ನೀಡಲು ಮನವಿ
ಮಂಡ್ಯದಲ್ಲಿ ಪೌರ ಕಾರ್ಮಿಕರಿಂದ ಕೇಕ್‌ ಮೇಳ ಉದ್ಘಾಟನೆ