ಮಂಗಳೂರು: ಆಳ್ವಾಸ್ ನುಡಿಸಿರಿ- ವಿರಾಸತ್ ಮಂಗಳೂರು ಘಟಕದ ಆಶ್ರಯದಲ್ಲಿ ನಗರದ ಕರಾವಳಿ ಉತ್ಸವ ಮೈದಾನದ ಕೀರ್ತಿಶೇಷ ಡಾ.ಎನ್. ವಿನಯ ಹೆಗ್ಡೆ ವೇದಿಕೆಯಲ್ಲಿ ಮಾ.21ರಂದು ಸಂಜೆ 6.15ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಮೇಳೈಸಲಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಅಂದು ಸಂಜೆ 6.10ಕ್ಕೆ ಸರಿಯಾಗಿ ಅತಿಥಿಗಳು ವೇದಿಕೆಗೆ ಆಗಮಿಸಲಿದ್ದಾರೆ. 6.15ಕ್ಕೆ ಪ್ರಾರ್ಥನೆಯ ಬಳಿಕ 45 ನಿಮಿಷ ಸಭಾ ಕಾರ್ಯಕ್ರಮ ನಡೆಯಲಿದೆ. ಅದಾದ ಬಳಿಕ ನಿಗದಿತ 3 ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 10 ಗಂಟೆಯೊಳಗೆ ಮುಕ್ತಾಯಗೊಳಿಸಲಾಗುವುದು. ಸಮಯ ಪರಿಪಾಲನೆ ಈ ಕಾರ್ಯಕ್ರಮದಲ್ಲೂ ಮುಂದುವರಿಯಲಿದೆ ಎಂದು ಹೇಳಿದರು.
ಆಳ್ವಾಸ್ ಸಾಂಸ್ಕೃತಿಕ ವೈಭವವು ಕರ್ನಾಟಕದ ಅತ್ಯಂತ ಪ್ರಸಿದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾಗಿ ರೂಪುಗೊಂಡಿದೆ. ಇದು ಕೇವಲ ಒಂದು ಕಾರ್ಯಕ್ರಮವಲ್ಲ, ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ವೈವಿಧ್ಯತೆಯ ಸೊಬಗನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳಲು ಇರುವ ಸುಂದರ ಅವಕಾಶ. ಈ ಕಾರ್ಯಕ್ರಮದ ಮೂಲಕ ನೂರು ಸಂದೇಶಗಳು ಸಮಾಜಕ್ಕೆ ತಲುಪಿ, ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವಿದೆ ಎಂದು ಡಾ.ಮೋಹನ್ ಆಳ್ವ ಆಶಿಸಿದರು.
ಆಳ್ವಾಸ್ ನುಡಿಸಿರಿ- ವಿರಾಸತ್ ಮಂಗಳೂರು ಘಟಕದ ಸಂಘಟನಾ ಕಾರ್ಯದರ್ಶಿ ಪ್ರಸಾದ್ ರೈ ಕಲ್ಲಿಮಾರ್, ಕೋಶಾಧಿಕಾರಿ ಶಶಿರಾಜ್ ಕಾವೂರು, ಪ್ರಮುಖರಾದ ಪ್ರದೀಪ ಕುಮಾರ ಕಲ್ಕೂರ, ಲೀಲಾಕ್ಷ ಕರ್ಕೇರ, ಆಳ್ವಾಸ್ ಕಾಲೇಜು ಉಪನ್ಯಾಸಕ ರಾಮ್‌ಪ್ರಸಾದ್ ಕಾಂಚೋಡು ಇದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 2012ರಿಂದ ಆಳ್ವಾಸ್ ನುಡಿಸಿರಿ- ವಿರಾಸತ್‌ನ 88 ಘಟಕಗಳ ಮೂಲಕ ದೇಶ- ವಿದೇಶಗಳಲ್ಲಿ 500ಕ್ಕೂ ಅಧಿಕ ಕಾರ್ಯಕ್ರಮ ನೀಡಲಾಗಿದೆ. ಈ ವರ್ಷ 40 ಕಾರ್ಯಕ್ರಮ ನೀಡಿದ್ದು, ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಆಳ್ವಾಸ್ ಸಾಂಸ್ಕೃತಿಕ ವೈಭವ ಆಯೋಜಿಸುತ್ತಿರುವುದು ನೆಮ್ಮದಿ, ಖುಷಿ ನೀಡಿದೆ. ಸಾಂಸ್ಕೃತಿಕ ವಿಭಾಗದಲ್ಲಿ ದತ್ತು ಸ್ವೀಕಾರದ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಎಷ್ಟೇ ಕಷ್ಟ ಆದರೂ ನಿಲ್ಲಿಸಬಾರದು ಎಂದು ತೀರ್ಮಾನಿಸಿದ್ದೇವೆ ಎಂದು ಡಾ.ಎಂ. ಮೋಹನ್ ಆಳ್ವ ಹೇಳಿದರು.