ಮೈಸೂರು : ‘ಗಾನಕೋಗಿಲೆ’ ಎಂದೇ ಖ್ಯಾತರಾಗಿದ್ದ, ಕನ್ನಡ ಚಿತ್ರರಸಿಕರ ಮನೆಮಾತಾಗಿದ್ದ ಹಾಗೂ ಒಂದು ಕಾಲದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಿನ್ನೆಲೆ ಗಾಯನಲೋಕವನ್ನೇ ಆಳಿದ್ದ ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್‌.ಜಾನಕಿ ಅವರು ಶನಿವಾರ ಸಂಜೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ 88 ವರ್ಷ ವಯಸ್ಸಾಗಿತ್ತು. ಬಹುಅಂಗಾಂಗ ವೈಫಲ್ಯದಿಂದ ಅವರು ಬಳಲುತ್ತಿದ್ದರು. ಶನಿವಾರ ಆರೋಗ್ಯ ಹದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ 7.30ಕ್ಕೆ ವಿಧಿವಶರಾದರು. ಅವರ ನಿಧನಕ್ಕೆ ಗಣ್ಯರು, ಸಂಗೀತಾಸಕ್ತರು ಆಘಾತ ವ್ಯಕ್ತಪಡಿಸಿದ್ದಾರೆ. ಭಾನುವಾರ ಅಂತ್ಯಕ್ರಿಯೆ ನಡೆಯಲಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಫಲಿಸದ ಚಿಕಿತ್ಸೆ- ಆಸ್ಪತ್ರೆ ಹೇಳಿಕೆ:


ಅವರ ಸಾವಿನ ಬಗ್ಗೆ ಅಪೋಲೋ ಆಸ್ಪತ್ರೆ ಹೇಳಿಕೆ ನೀಡಿ, ‘ಕಾಲು ನೋವು ಜಾಸ್ತಿಯಾದ ಕಾರಣ ಎಸ್. ಜಾನಕಿ ಅವರನ್ನು ಶನಿವಾರ ಮಧ್ಯಾಹ್ನ 12:49 ಕ್ಕೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಅವರ ಸ್ಥಿತಿ ಗಂಭೀರವಾಗಿತ್ತು. ಅವರನ್ನು ತಕ್ಷಣವೇ ತಪಾಸಣೆ ಮಾಡಿ ಹೆಚ್ಚಿನ ನಿರ್ವಹಣೆಗಾಗಿ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಪರಿಣತ ವೈದ್ಯರ ತಂಡದ ತೀವ್ರ ವೈದ್ಯಕೀಯ ಆರೈಕೆ ಮತ್ತು ನಿರಂತರ ಮೇಲ್ವಿಚಾರಣೆಯ ಹೊರತಾಗಿಯೂ, ಚಿಕಿತ್ಸೆಯ ಸಮಯದಲ್ಲಿ ಅವರಿಗೆ ಹೃದಯ ಸ್ತಂಭನ ಉಂಟಾಯಿತು. ಸಂಜೆ 7:30 ಕ್ಕೆ ನಿಧನರಾದರು’ ಎಂದು ಹೇಳಿದೆ.

ಕುಟುಂಬದ ಪರವಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್‌ ಮೂಲಕ ಸುದ್ದಿ ಹಂಚಿಕೊಂಡ ಅವರ ಮೊಮ್ಮಗಳು ಅಪ್ಸರಾ ವೈದ್ಯುಲಾ, ‘ನನ್ನ ಪ್ರೀತಿಯ ಅಜ್ಜಿ ಮತ್ತು ದಂತಕಥೆ ಗಾಯಕಿ ಎಸ್‌. ಜಾನಕಿ ಅವರ ನಿಧನ ವಾರ್ತೆ ಹಂಚಿಕೊಳ್ಳಲು ನನಗೆ ತುಂಬಾ ದುಃಖವಾಗಿದೆ’ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ವಾಸವಿದ್ದ ಜಾನಕಿ:

ಮೂಲತಃ ಆಂಧ್ರದವರಾದರೂ ಎಸ್‌.ಜಾನಕಿ ಅವರು ಕಳೆದ ಕೆಲವು ವರ್ಷಗಳಿಂದ ಮೈಸೂರಿನ ಬೋಗಾದಿಯಲ್ಲಿ ಕೇರ್‌ಟೇಕರ್‌ ನವೀನ್‌ ಮತ್ತು ಪ್ರವೀಣ್‌ ಎಂಬುವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಅವರನ್ನು ನೋಡಲು ಯಾರಿಗೂ ಬಿಡುತ್ತಿರಲಿಲ್ಲ.

ನಿಧನದ ಹಿನ್ನೆಲೆಯಲ್ಲಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯನವರು ಭೇಟಿ ನೀಡಿ, ಜಾನಕಿ ಅವರ ಅಂತಿಮ ದರ್ಶನ ಪಡೆದರು. ಬಳಿಕ, ಸ್ಥಳೀಯ ಶಾಸಕರು, ಜಾನಕಿ ಅವರ ಕುಟುಂಬಸ್ಥರು, ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿದರು.

ಕೆಲವು ವರ್ಷದಿಂದ ಮೈಸೂರಲ್ಲಿ ವಾಸ

ಎಸ್‌.ಜಾನಕಿ ಮೂಲತಃ ಆಂಧ್ರಪ್ರದೇಶದವರು. ಆದರೂ ಅವರು ಕಳೆದ ಕೆಲವು ವರ್ಷಗಳಿಂದ ಮೈಸೂರಿನ ಬೋಗಾದಿಯಲ್ಲಿ ಕೇರ್‌ಟೇಕರ್‌ ನವೀನ್‌ ಮತ್ತು ಪ್ರವೀಣ್‌ ಎಂಬುವರ ಮನೆಯಲ್ಲಿ ಆಶ್ರಯ ಪಡೆದಿದ್ದರು.

ಜಾನಕಿಗೆ ಕಾಡಿತ್ತು ತೀವ್ರ ಅನಾರೋಗ್ಯ

- ಕೆಲವು ದಿನದಿಂದ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಎಸ್‌. ಜಾನಕಿ

- ಕಾಲು ನೋವು ಜಾಸ್ತಿಯಾದ ಕಾರಣ ನಿನ್ನೆ ಮೈಸೂರು ಅಪೋಲೋ ಆಸ್ಪತ್ರೆಗೆ

- ಮಧ್ಯಾಹ್ನ 12.49ಕ್ಕೆ ಐಸಿಯುಗೆ ದಾಖಲು. ಸಂಜೆಯವೆರೆಗೆ ಅಲ್ಲಿಯೇ ಚಿಕಿತ್ಸೆ

- ಪರಿಣತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿರುವಾಗಲೇ ಅವರಿಗೆ ಹೃದಯಾಘಾತ

- ಶನಿವಾರ ಸಂಜೆ 7.30ರ ವೇಳೆಗೆ ಗಾಯಕಿಯ ಇಹಲೋಕದ ಯಾತ್ರೆ ಮುಕ್ತಾಯ