ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಎಲ್ಲೆಡೆ ಬಳಕೆಯಾಗುತ್ತಿದೆ. ಬದಲಾದ ಕಾಲಘಟ್ಟದಲ್ಲಿ ಪತ್ರಕರ್ತರು ತಂತ್ರಜ್ಞಾನದ ಜೊತೆಯಲ್ಲಿ ಸಾಗಬೇಕೆಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶಿಸಿದರು.

 ಬೆಂಗಳೂರು : ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಎಲ್ಲೆಡೆ ಬಳಕೆಯಾಗುತ್ತಿದೆ. ಬದಲಾದ ಕಾಲಘಟ್ಟದಲ್ಲಿ ಪತ್ರಕರ್ತರು ತಂತ್ರಜ್ಞಾನದ ಜೊತೆಯಲ್ಲಿ ಸಾಗಬೇಕೆಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶಿಸಿದರು.

ವಿಜಯನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ

ವಿಜಯನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ’ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಾಧ್ಯಮವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತದೆ. ತಪ್ಪುಗಳನ್ನು ಸರಿಪಡಿಸುವ ಪತ್ರಕರ್ತರ ಕಾರ್ಯ ಮಹತ್ವದ್ದಾಗಿದೆ. ಆಧುನಿಕ ಯುಗದಲ್ಲಿ ಎಐ ತಂತ್ರಜ್ಞಾನ ಎಲ್ಲೆಡೆ ಬಳಕೆಯಾಗುತ್ತಿದೆ. ಇದಕ್ಕೆ ತಕ್ಕಂತೆ ಪತ್ರಕರ್ತರೂ ತಂತ್ರಜ್ಞಾನದ ಜೊತೆಯಲ್ಲಿ ಸಾಗಬೇಕು. ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜನರಿಗೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.

ಸಂಘಕ್ಕೆ ನಿವೇಶನದ ಭರವಸೆ

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಈ ಹಿಂದೆ ಪತ್ರಿಕೆಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಪತ್ರಿಕೆಗಳ ಸಂಖ್ಯೆ ಹೆಚ್ಚಾಗಿದೆ. ಒಳ್ಳೆಯ ಸುದ್ದಿ ನೀಡಿದಾಗ ಜನರು ಇಷ್ಟು ಪಡುತ್ತಾರೆ. ಎಲೆಕ್ಟ್ರಾನಿಕ್‌ ಮಾಧ್ಯಮಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಜನರಿಗೆ ಮತ್ತಷ್ಟು ವಿಶ್ವಾಸ ಬರಲಿದೆ. ಜಿಬಿಎ ವ್ಯಾಪ್ತಿಯಲ್ಲಿ ನಗರ ಜಿಲ್ಲಾ ಪತ್ರಕರ್ತರ ಸಂಘಕ್ಕೆ ನಿವೇಶನ ನೀಡುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚಿಸಿ ನಿವೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಹಾಗೂ ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿದರು. ಈ ವೇಳೆ ಹಿರಿಯ ಪತ್ರಕರ್ತರಾದ ಸಂಗಮದೇವ್, ಪ್ರಭುದೇವ್‌ ಶಾಸ್ತ್ರಿ ಮಠ್‌, ರಂಗನಾಥ ಭಾರದ್ವಾಜ್, ಕೆ.ಎಸ್.ನಾಗೇಶ್ ಕುಮಾರ್, ಮಧು ಎಂ.ಉತ್ತವಳ್ಳಿ, ಹೆಚ್.ಸಿ.ಶೋಭ, ಬಿ.ಎಸ್.ಮಹೇಂದ್ರ, ವೀರಣ್ಣಗೌಡ, ಜಿ.ವಿ.ರಾಮರಾವ್ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಸಚಿವ ವಿ.ಸೋಮಣ್ಣ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ನಗರ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್‌ ಇದ್ದರು.