ಪತ್ರಿಕೋಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಪತ್ರಕರ್ತರ ಜವಾಬ್ದಾರಿ ಹೆಚ್ಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ತಡೆಯಲು ಪತ್ರಕರ್ತರು ಮುಂದಾಗಬೇಕು
ಕನ್ನಡಪ್ರಭ ವಾರ್ತೆ ಕೋಲಾರ
ಪತ್ರಿಕೋಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಪತ್ರಕರ್ತರ ಜವಾಬ್ದಾರಿ ಹೆಚ್ಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ತಡೆಯಲು ಪತ್ರಕರ್ತರು ಮುಂದಾಗಬೇಕು ಎಂದು ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ತಿಳಿಸಿದರು.ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು ಹಾಗೂ ಕೋಲಾರ ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗುರುವಾರ ನಗರದ ಜಿಪಂ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಾರ್ತಾಲಾಪ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಸರ್ಕಾರದ ಪುರಸ್ಕೃತ ಯೋಜನೆಗಳನ್ನು ಜನರಿಗೆ ತಲುಪಿಸಲು ಪತ್ರಕರ್ತರ ಪಾತ್ರ ಮುಖ್ಯವಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪಿಐಬಿಯ ಸಹಾಯಕ ನಿರ್ದೇಶಕ ಮಧು.ಎಂ, ಸರ್ಕಾರದ ಯೋಜನೆಗಳ ಲಾಭವು ಕಟ್ಟಕಡೆಯ ವ್ಯಕ್ತಿಗೂ ತಲುಪಿದಾಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂಬ ಆಶಯದೊಂದಿಗೆ ಕಾರ್ಯಾಗಾರ ಆಯೋಜಿಸಿದೆ.
ಸರ್ಕಾರದ ವಿವಿಧ ಯೋಜನೆಗಳ ಕುರಿತು ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು, ಅದನ್ನು ಪತ್ರಿಕೆಗಳು ಹಾಗೂ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮತ್ತು ತಳ ಮಟ್ಟದ ಫಲಾನುಭವಿಗಳಿಗೆ ತಲುಪಿಸುವುದು ವಾರ್ತಾಲಾಪ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತವೆ. ಆದರೆ, ಈ ಯೋಜನೆಗಳು ಕೇವಲ ಅಧಿಕಾರಿಗಳ ಮಟ್ಟದಲ್ಲೇ ಉಳಿದರೆ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ.ಮಾಧ್ಯಮಗಳ ಮೂಲಕ ಈ ಯೋಜನೆಗಳನ್ನು ಪ್ರಸಾರ ಮಾಡಿದಾಗ ಮಾತ್ರ ಅವು ಹಳ್ಳಿಗಾಡಿನ ಕಟ್ಟಕಡೆಯ ವ್ಯಕ್ತಿಗೂ ತಲುಪಲು ಸಾಧ್ಯವಾಗುತ್ತದೆ ಎಂದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರ ಗಣೇಶ್ ಕೆ.ಎಸ್ ಮಾತನಾಡಿ, ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಈ ರೀತಿ ಜಿಲ್ಲಾ ಮಟ್ಟಕ್ಕೆ ಬಂದು ವಾರ್ತಾಲಾಪ ಕಾರ್ಯಕ್ರಮ ಆಯೋಜಿಸಿರುವುದು ಇದೇ ಮೊದಲು ಎಂದು ಶ್ಲಾಘಿಸಿದರು. ಕಳೆದ ಒಂದು ವರ್ಷದಿಂದ ಸಣ್ಣ ಪತ್ರಿಕೆಗಳ ನಿಯಮಿತ ಅಪ್‌ಲೋಡ್ ಪ್ರಕ್ರಿಯೆಯಿಂದಾಗಿ ಪತ್ರಕರ್ತರು ಮತ್ತು ಪಿಐಬಿ ನಡುವೆ ಉತ್ತಮ ಸಂಪರ್ಕ ಬೆಳೆದಿದೆ ಎಂದರು.ವಾರ್ತಾ ಇಲಾಖೆಯ ಮಾದರಿಯಲ್ಲಿಯೇ ಪಿಐಬಿ ಕೂಡ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇಮೇಲ್ ಗ್ರೂಪ್ ಅಥವಾ ವಾಟ್ಸಾಪ್ ಗ್ರೂಪ್ ಮೂಲಕ ಕೋಲಾರ ಜಿಲ್ಲೆಯ ಪತ್ರಕರ್ತರಿಗೆ ಪ್ರತಿನಿತ್ಯ ಸುದ್ದಿ ಮತ್ತು ಯೋಜನೆಗಳ ವಿವರಗಳನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕೆಂದು ವಿನಂತಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಎಂ.ಎನ್. ಮಂಜುಳಾ ’ಸಮೃದ್ಧ ರಾಷ್ಟ್ರಕ್ಕಾಗಿ ರೈತ ಕಾರ್ಯಕ್ರಮಗಳು’ ಕುರಿತ ಮಾಹಿತಿ ಸೇರಿದಂತೆ ಕೇಂದ್ರ ಸರ್ಕಾರದ ಕೃಷಿ ಇಲಾಖೆಯಡಿ ಬರುವ ಯೋಜನೆಗಳ ಬಗ್ಗೆ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಾಧಿಕಾರಿ ಮುನಿರಾಜು, ಮಹಿಳಾ ಸಶಕ್ತೀಕರಣ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ವ್ಯವಸ್ಥಾಪಕ ಆರ್.ಶಿವಕುಮಾರ್, ಆರ್ಥಿಕ ಸೇರ್ಪಡೆ ಕುರಿತ ಅಟಲ್ ಪೆನ್ಷನ್ ಯೋಜನೆ, ಪಿಎಂಜೆಜೆವೈ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮಾಹಿತಿ ನೀಡಿದರು.ಯುವಜನ ಮತ್ತು ಕ್ರೀಡಾ ಸಚಿವಾಲಯ, ಮೈಭಾರತ್, ಜಿಲ್ಲಾ ಯುವ ಅಧಿಕಾರಿ ಎ. ಮಹೇಂದ್ರ ರೆಡ್ಡಿ ಯುವ ಶಕ್ತಿಗೆ ಪ್ರೋತ್ಸಾಹ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಮಾಜಿ ಅಧ್ಯಕ್ಷ ಬಿ.ವಿ. ಗೋಪಿನಾಥ್, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮೈಲಾರಪ್ಪ, ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಾಧಿಕಾರಿಗಳಾದ ಮುನಿರಾಜು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್. ಶಿವಕುಮಾರ್, ಜಿಲ್ಲಾ ಯುವ ಅಧಿಕಾರಿ ಎ.ಮಹೇಂದ್ರ ರೆಡ್ಡಿ, ಪತ್ರಕರ್ತ ಓಂಕಾರ್ ಮೂರ್ತಿ ಇದ್ದರು.