ಪಶ್ಚಿಮ ಘಟ್ಟದ ಎಡಕುಮೇರಿ-ಕಡಗರವಳ್ಳಿ ನಡುವೆ ಮಣ್ಣಿನ ರಾಶಿ ತೆರವು : ಆ.6ರಿಂದ ಮಂಗಳೂರು- ಬೆಂಗಳೂರು ರೈಲು ಸಂಚಾರ ಪುನಾರಂಭ

KannadaprabhaNewsNetwork |  
Published : Aug 05, 2024, 12:36 AM ISTUpdated : Aug 05, 2024, 12:31 PM IST
ಗುಡ್ಡಕುಸಿತಗೊಂಡು ಮಣ್ಣು ತೆರವಾದ ಹಳಿಯಲ್ಲಿ ಸಂಚರಿಸಿದ ತಾಂತ್ರಿಕ ಉಪಕರಣಗಳ ರೈಲು | Kannada Prabha

ಸಾರಾಂಶ

ಆ.6ರಿಂದ ಎಲ್ಲ ರೈಲುಗಳ ಓಡಾಟ ಪುನಾರಂಭಗೊಳ್ಳುವ ಸಾಧ್ಯತೆ ಇದೆ. ಈ ಕುರಿತು ನೈಋತ್ಯ ರೈಲ್ವೆ ಅಧಿಕೃತ ಮಾಹಿತಿ ನೀಡಬೇಕಷ್ಟೆ.

 ಮಂಗಳೂರು : ಪಶ್ಚಿಮ ಘಟ್ಟದ ಎಡಕುಮೇರಿ-ಕಡಗರವಳ್ಳಿ ನಡುವೆ ರೈಲು ಹಳಿಗೆ ಗುಡ್ಡ ಕುಸಿದಿದ್ದು, ಭಾರಿ ಪ್ರಮಾಣದ ಮಣ್ಣಿನ ರಾಶಿಯನ್ನು ಒಂದು ವಾರದ ಅಹರ್ನಿಶಿ ಕಾರ್ಯಾಚರಣೆಯಲ್ಲಿ ಶನಿವಾರ ರಾತ್ರಿ ವೇಳೆಗೆ ಸಂಪೂರ್ಣ ತೆರವುಗೊಳಿಸಲಾಗಿದೆ. ಭಾನುವಾರದಿಂದ ಎರಡು ದಿನಗಳ ಕಾಲ ಗೂಡ್ಸ್‌ ರೈಲು ಸಂಚರಿಸಲಿದ್ದು, ಮಂಗಳವಾರದಿಂದ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕ ರೈಲು ಓಡಾಟ ಪುನಾರಂಭಗೊಳ್ಳುವ ನಿರೀಕ್ಷೆ ಇದೆ. 

ಇಲ್ಲಿ ಹಳಿಗೆ ಗುಡ್ಡು ಕುಸಿತದ ಪ್ರಾಕೃತಿಕ ಅವಘಡದ ಬಳಿಕ ಜು.26ರಿಂದ ಈ ಮಾರ್ಗದಲ್ಲಿ ಮಂಗಳೂರು-ಬೆಂಗಳೂರು ನಡುವಿನ ರೈಲು ಓಡಾಟ ಸಂಪೂರ್ಣ ರದ್ದುಗೊಳಿಸಲಾಗಿತ್ತು. ಸುಮಾರು 500ಕ್ಕೂ ಅಧಿಕ ರೈಲ್ವೆ ತಾಂತ್ರಿಕ ಅಧಿಕಾರಿ, ಸಿಬ್ಬಂದಿ ಹಗಲು ರಾತ್ರಿ ಭಾರಿ ಮಳೆಯ ಅಡಚಣೆಯ ನಡುವೆಯೂ ಕಾರ್ಯಾಚರಣೆ ನಡೆಸಿದ್ದರು. ರೈಲು ಸೇತುವೆಯ ಬಳಿ ಮಣ್ಣು ಪ್ರಪಾತದಂಚಿಗೆ ಕುಸಿದಿತ್ತು. ಅಲ್ಲಿ ರಕ್ಷಣಾತ್ಮಕ ತಡೆಗೋಡೆ ನಿರ್ಮಿಸುವುದು ದೊಡ್ಡ ಸವಾಲಾಗಿತ್ತು. ಅದನ್ನು ಯಶಸ್ವಿಯಾಗಿ ರೈಲ್ವೆ ತಾಂತ್ರಿಕ ವರ್ಗ ನಿಭಾಯಿಸಿದೆ. ರೈಲ್ವೆ ಉನ್ನತಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಇದ್ದು ಇಡೀ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು.

ಇದೀಗ ಹಳಿ ಯಥಾಸ್ಥಿತಿಗೆ ತರುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಅಲ್ಲದೆ ಪರೀಕ್ಷಾರ್ಥ ತಾಂತ್ರಿಕ ರೈಲು ಓಡಾಟವನ್ನೂ ಯಶಸ್ವಿಯಾಗಿ ನಡೆಸಲಾಗಿದೆ. ತುರ್ತು ಸಂದರ್ಭ ನಿಭಾಯಿಸಲು ರೈಲ್ವೆ ತಾಂತ್ರಿಕ ತಂಡ ಸ್ಥಳದಲ್ಲೇ ಬೀಡುಬಿಟ್ಟಿದೆ. ಇನ್ನು ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಬಾಕಿ ಇದ್ದು, ಸದ್ಯ ಪರೀಕ್ಷಾರ್ಥ ಗೂಡ್ಸ್‌ ರೈಲು ಸಂಚಾರ ನಡೆಸಲಾಗುತ್ತಿದೆ. ಈಗಾಗಲೇ ಈ ಮಾರ್ಗದಲ್ಲಿ ಎಲ್ಲ ರೈಲುಗಳ ಓಡಾಟವನ್ನು ಆ.5ರ ವರೆಗೆ ರದ್ದುಪಡಿಸಿದ್ದು, ಆ.6ರಿಂದ ಎಲ್ಲ ರೈಲುಗಳ ಓಡಾಟ ಪುನಾರಂಭಗೊಳ್ಳುವ ಸಾಧ್ಯತೆ ಇದೆ. ಈ ಕುರಿತು ನೈಋತ್ಯ ರೈಲ್ವೆ ಅಧಿಕೃತ ಮಾಹಿತಿ ನೀಡಬೇಕಷ್ಟೆ.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು