ಕೇಂದ್ರದ ತ್ರಿಭುವನ್‌ ಸಹಕಾರ ವಿವಿ ಶಾಖೆ ಕರ್ನಾಟಕಕ್ಕೆ: ಕೋಟ ಆಗ್ರಹ

KannadaprabhaNewsNetwork |  
Published : Nov 21, 2026, 02:30 AM IST
ಎಸ್‌ಸಿಡಿಸಿಸಿ ಬ್ಯಾಂಕ್‌ ವಠಾರದಲ್ಲಿ ಮೆರವಣಿಗೆಗೆ ಚಾಲನೆ ನೀಡುತ್ತಿರುವ ಸಹಕಾರಿ ಸಚಿವ ಲಕ್ಷ್ಮಣ ಸವದಿ  | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ತರುತ್ತಿರುವ ತ್ರಿಭುವನ್‌ ಸಹಕಾರಿ ವಿಶ್ವವಿದ್ಯಾಲಯದ ಶಾಖೆಯನ್ನು ಕರ್ನಾಟಕದಲ್ಲಿ ತೆರೆಯಲು ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳೂರು: ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ತರುತ್ತಿರುವ ತ್ರಿಭುವನ್‌ ಸಹಕಾರಿ ವಿಶ್ವವಿದ್ಯಾಲಯದ ಶಾಖೆಯನ್ನು ಕರ್ನಾಟಕದಲ್ಲಿ ತೆರೆಯಲು ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉತ್ತಮ ಸ್ವಸಹಾಯ ಸಂಘಗಳಿಗೆ ಪುರಸ್ಕಾರ ನೆರವೇರಿಸಿ ಮಾತನಾಡಿದ ಅವರು, ತ್ರಿಭುವನ ವಿವಿ ಮೂಲಕ ಸಹಕಾರ ಕ್ಷೇತ್ರದ 18 ಲಕ್ಷ ಸಿಬ್ಬಂದಿ ತರಬೇತಿ ಪಡೆಯಲಿದ್ದಾರೆ. ಮುಂದಿನ ನಾಲ್ಕೈದು ವರ್ಷದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಹೊಸ ರಕ್ತದ ಸಂಚಲನವಾಗಲಿದೆ ಎಂದರು.

ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಡಾ.ಎಂ.ಎನ್‌.ಆರ್‌., ಲಕ್ಷ್ಮಣ ಸವದಿ ಹಾಗೂ ಜಿ.ಟಿ. ದೇವೇಗೌಡ ಈ ಮೂರು ಮಂದಿಯೇ ಸಾಕು. ಇವರು ಸಹಕಾರಿ ಕ್ಷೇತ್ರದ ಗಣಿಯಾಗಿದ್ದಾರೆ. ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ 113 ಶಾಖೆ ಹೊಂದಿದ್ದು, 21 ಸಾವಿರ ಕೋಟಿ ರು. ವಹಿವಾಟು ಹೊಂದಿದೆ. 15 ಸಾವಿರ ಕೋಟಿ ರು. ಠೇವಣಿ ಹೊಂದಿದ್ದು, ಡಿಸಿಸಿ ಬ್ಯಾಂಕ್‌ ಅಭ್ಯುದಯಕ್ಕೆ ಡಾ.ಎಂ.ಎನ್‌.ಆರ್‌. ಅಭಿವೃದ್ಧಿ ಮಾದರಿಯಾಗಿದೆ. ಡಾ.ಎಂ.ಎನ್‌.ಆರ್‌.ಗೆ ಅನಾರೋಗ್ಯ ಬಂದಾಗ ಇಡೀ ಸಹಕಾರಿ ಕ್ಷೇತ್ರಕ್ಕೆ ಜ್ವರ ಬಂದಂತಾಗಿತ್ತು. ಸಹಕಾರಿಗಳ ಹಾರೈಕೆಯಿಂದ ಈಗ ಆರೋಗ್ಯವಂತರಾಗಿದ್ದು, ಲವಲವಿಕೆಯಿಂದ ಚಟುವಟಿಕೆ ನಡೆಸುತ್ತಿದ್ದಾರೆ ಎಂದರು.

ವಸ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದ ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಸಹಕಾರಿಗಳ ತರಬೇತಿ ವಿವಿಯ ಕೇಂದ್ರ ಗುಜರಾತ್‌ನಲ್ಲಿ ಇದ್ದರೂ ಮಂಗಳೂರಿನಲ್ಲಿ ಡಾ.ಎಂ.ಎನ್‌.ಆರ್. ನೇತೃತ್ವದಲ್ಲಿ ಶಾಖೆ ತೆರೆಯುವಂತಾಗಲಿ. ಈ ಮೂಲಕ ದ.ಕ. ಸಹಕಾರಿ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಶುರುವಾಗಲಿ ಎಂದರು.

ಕೃಷ್ಯುತ್ಪನ್ನ ಮಾರಾಟಕ್ಕೆ ಅವಕಾಶ ಬೇಕು:

ಸಹಕಾರಿ ಧ್ವಜಾರೋಹಣ ನೆರವೇರಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕ್‌, ಹಾಲು ಒಕ್ಕೂಟ ಹಾಗೂ ಕ್ಯಾಂಪ್ಕೋ ಸಂಸ್ಥೆಗಳು ಕರಾವಳಿ ಜಿಲ್ಲೆಗೆ ಅಭೂತಪೂರ್ವ ಕೊಡುಗೆ ನೀಡಿವೆ. ಬರ, ಬೆಳೆ ಹಾನಿಯಿಂದ ಕಂಗಾಲಾಗುವ ರೈತರಿಗೆ ಸಹಕಾರ ಕ್ಷೇತ್ರ ಆರ್ಥಿಕ ಚೈತನ್ಯವನ್ನು ನೀಡಬೇಕು. ಸಹಕಾರಿ ಸಂಘಗಳಲ್ಲಿ ಇತರೆ ಕೃಷ್ಯುತ್ಪನ್ನಗಳ ಮಾರಾಟಕ್ಕೂ ಅವಕಾಶ ಸಿಗಬೇಕು ಎಂದು ಆಶಿಸಿದರು.

ನವೋದಯಕ್ಕೆ 25 ಲಕ್ಷ ರು. ಕೊಡುಗೆ:

ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ, ಡಾ.ಎಂ.ಎನ್‌.ಆರ್‌. ಅವರು ಸಹಕಾರಿ ಕ್ಷೇತ್ರದ ಬಲಾಢ್ಯ ನಾಯಕನಾಗಿದ್ದಾರೆ. ಮಹಾ ಮಂಡಳದಿಂದ ನವೋದಯ ಸಂಘಕ್ಕೆ 25 ಲಕ್ಷ ರು. ನೀಡುವುದಾಗಿ ಪ್ರಕಟಿಸಿದರು. ಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ, ಕಿಶೋರ್‌ ಕುಮಾರ್‌ ಪುತ್ತೂರು, ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್‌ ಹೆಗ್ಡೆ, ಎಂಡಿ ರಂಗಸ್ವಾಮಿ, ಉಡುಪಿ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರ ಸಂಘಗಳ ನಿಬಂಧಕ ವೆಂಕಟೇಶ್‌ ಎಂ.ವಿ., ಸಹಕಾರ ಮಹಾಮಂಡಳ ಉಪಾಧ್ಯಕ್ಷ ಶಿವಕುಮಾರ್‌, ಎಂಡಿ ಕೆ.ಎಸ್‌.ನವೀನ್‌, ಸಹಕಾರ ಮಾರಾಟ ಮಹಾಮಂಡಳ ಎಂಡಿ ಡಾ. ಸುರೇಶ್ ಗೌಡ, ಸಹಕಾರ ಸಂಘಗಳ ಅಪರ ನಿಬಂಧಕ ಪ್ರಸಾದ್‌ ರೆಡ್ಡಿ, ಜಂಟಿ ನಿಬಂಧಕ ಶಶಿಧರ್‌, ಉಡುಪಿ ಜಿಲ್ಲಾ ಉಪನಿಬಂಧಕ ಲಾವಣ್ಯ ಕೆ.ಆರ್‌., ದ.ಕ. ಜಿಲ್ಲಾ ಉಪನಿಬಂಧಕ ರಮೇಶ್‌ ಎಚ್‌.ಎನ್‌., ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜಾರಾಮ ಭಟ್‌, ಭಾಸಕರ್‌ ಎಸ್‌. ಕೋಟ್ಯಾನ್‌, ಎಂ.ವಾದಿರಾಜ ಶೆಟ್ಟಿ, ಅಶೋಕ್‌ ಕುಮಾರ್‌ ಶೆಟ್ಟಿ, ಜೈರಾಜ್‌ ಬಿ.ರೈ, ಎಸ್‌.ಬಿ.ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಎಂ.ಮಹೇಶ್‌ ಹೆಗ್ಡೆ, ಸದಾಶಿವ ಉಳ್ಳಾಲ್‌, ರಾಜೇಶ್‌ ರಾವ್‌, ಎಸ್‌.ಎನ್‌.ಮನ್ಮಥ, ಕುಶಾಲಪ್ಪ ಗೌಡ, ಸಿಇಒ ಕೆ.ಗೋಪಾಲಕೃಷ್ಣ ಭಟ್‌, ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ಸಿಇಒ ಪೂರ್ಣಿಮಾ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಎಲ್ಲ ನಿರ್ದೇಶಕರು ಇದ್ದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು ವಂದಿಸಿದರು. ನಿತೀಶ್‌ ಶೆಟ್ಟಿ ಎಕ್ಕಾರು ನಿರೂಪಿಸಿದರು. ಹಾಲು ಒಕ್ಕೂಟದ 2 ನಂದಿನಿ ಉತ್ಪನ್ನ ಮಾರ್ಕೆಟ್‌ಗೆ

ದ.ಕ. ಸಹಕಾರಿ ಹಾಲು ಒಕ್ಕೂಟದ ಎರಡು ನಂದಿನಿ ಉತ್ಪನ್ನಗಳನ್ನು ಇದೇ ಸಂದರ್ಭ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್‌ ಅವರು ನಂದಿನಿ ಕಾಜು ಕಟ್ಲೆ ಹಾಗೂ ನಂದಿನಿ ಬಟರ್‌ ಸಾಲ್ಟ್‌ ಉತ್ಪನ್ನವನ್ನು ಮ್ಯಾಜಿಕ್‌ ಕೈಚಳಕ ಮೂಲಕ ಸಚಿವ ಲಕ್ಷ್ಮಣ ಸವದಿ, ಜಿ.ಟಿ. ದೇವೇಗೌಡರಿಂದ ಬಿಡುಗಡೆಗೊಳಿಸಿದರು.

ನವೋದಯ ಶಿಕ್ಷಣ ನಿಧಿಗೆ ಕೋಟಿ ರು.ಗಳ ನೆರವು

ನವೋದಯ ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳ ಶೈಕ್ಷಣಿಕ ಉದ್ದೇಶಕ್ಕೆ 1 ಕೋಟಿ ರು.ಗಳ ಮೊತ್ತದ ನೆರವನ್ನು ಘೋಷಿಸಲಾಯಿತು.

ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅವರು ನವೋದಯ ಟ್ರಸ್ಟ್‌ಗೆ ವೈಯಕ್ತಿಕವಾಗಿ 1 ಕೋಟಿ ರು. ನೆರವು ಘೋಷಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಶಿಕ್ಷಣ ನಿಧಿಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ 1.53 ಕೋಟಿ ರು. ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದಿಂದ 21.94 ಲಕ್ಷ ರು.ಗಳ ಚೆಕ್‌ನ್ನು ಮಂಡಲದ ಅಧ್ಯಕ್ಷ ಜಿ.ಟಿ.ದೇವೇ ಗೌಡರಿಗೆ ಹಸ್ತಾಂತರಿಸಲಾಯಿತು.ಅಭೂತಪೂರ್ವ ಸಹಕಾರ ಮೆರವಣಿಗೆ

73ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪಕ್ಕೆ ಮುನ್ನ ನಗರ ಪ್ರಮುಖ ಬೀದಿಗಳಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ಅದ್ದೂರಿಯಾಗಿ ಆಕರ್ಷಕವಾಗಿ ನಡೆಯಿತು.

ಚೆಂಡೆ, ಕೊಂಬು, ಬ್ಯಾಂಡ್‌ ವೇಷಭೂಷಣ ತಂಡಗಳು, ವಿವಿಧ ಕಲಾತಂಡಗಳ ಪ್ರದರ್ಶನ, ರಥದಲ್ಲಿ ಸಾಗಿದ ಮೊಳಹಳ್ಳಿ, ಸಹಕಾರಿ ರತ್ನಗಳ ಸ್ತಬ್ಧಚಿತ್ರಗಳು ವಿಶೇಷ ಮೆರುಗು ನೀಡಿತು.

ಕರಾವಳಿ ಉತ್ಸವ ಮೈದಾನದಲ್ಲಿ ಸಹಕಾರಿ ಸಪ್ತಾಹದ ಅಂಗವಾಗಿ ವಿವಿಧ ಮಳಿಗೆಗಳು ಸಹಕಾರಿಗಳ ಗಮನ ಸೆಳೆಯುತ್ತಿತ್ತು. ಕರಾವಳಿ ಉತ್ಸವ ಮೈದಾನದಲ್ಲಿ ಸುಮಾರು 10 ಸಾವಿರ ಮಂದಿಗೆ ಉಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.

‘ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ, ವೃತ್ತಿಪರ ಸೇವೆ’ ಎಂಬ ಧ್ಯೇಯದಡಿ ಈ ಸಹಕಾರ ಸಪ್ತಾಹ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಗೆ ನೀರು ಆಪೋಶನ: ಜಲಕ್ಷಾಮ ಭೀತಿ !
371ಜೆ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಬೆಂಬಲ