ಒಣಗುತ್ತಿರುವ ಕಬ್ಬು ಕಟಾವಿಗೆ ಆದ್ಯತೆ ನೀಡಿ-ಶಿಡ್ಲಾಪುರ ಆಗ್ರಹ

KannadaprabhaNewsNetwork |  
Published : Nov 21, 2026, 02:30 AM IST
ಭುವನೇಶ್ವರ ಶಿಡ್ಲಾಪುರ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮಳೆ ಕೊರತೆ, ಅಂತರ್ಜಲ ಮಟ್ಟ ಕುಸಿತ ಹಾಗೂ ವಿದ್ಯುತ್ ಸಮಸ್ಯೆಯಿಂದ ಕಬ್ಬಿನ ಬೆಳೆ ಒಣಗುತ್ತಿದ್ದು, ಹಲವು ಕಡೆ ಬೆಂಕಿಗೆ ಆಹುತಿಯಾಗುತ್ತಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸಕ್ಕರೆ ಕಾರ್ಖಾನೆಗಳು ಧಾವಿಸಬೇಕು.

ಹಾವೇರಿ: ಜಿಲ್ಲೆಯಲ್ಲಿ ಮಳೆ ಕೊರತೆ, ಅಂತರ್ಜಲ ಮಟ್ಟ ಕುಸಿತ ಹಾಗೂ ವಿದ್ಯುತ್ ಸಮಸ್ಯೆಯಿಂದ ಕಬ್ಬಿನ ಬೆಳೆ ಒಣಗುತ್ತಿದ್ದು, ಹಲವು ಕಡೆ ಬೆಂಕಿಗೆ ಆಹುತಿಯಾಗುತ್ತಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸಕ್ಕರೆ ಕಾರ್ಖಾನೆಗಳು ಧಾವಿಸಬೇಕು. ಸುಟ್ಟ ಹಾಗೂ ಒಣಗುತ್ತಿರುವ ಕಬ್ಬನ್ನು ಕಾರ್ಖಾನೆಗಳೇ ಕಾರ್ಮಿಕರು ಮತ್ತು ಯಂತ್ರಗಳ ಮೂಲಕ ಮೊದಲು ಕಟಾವು ಮಾಡಿಸಿ ಖರೀದಿಸಬೇಕು. ಸುಟ್ಟ ಕಬ್ಬಿಗೆ ಶೇ.25ರಷ್ಟು ಹಣ ಕಡಿತ ಮಾಡದೆ ಪೂರ್ಣ ಹಣ ಪಾವತಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಾವೇರಿ ಜಿಲ್ಲೆಯಲ್ಲಿ ರೈತರು 20 ಲಕ್ಷ ಟನ್‌ಗೂ ಅಧಿಕ ಕಬ್ಬು ಬೆಳೆದಿದ್ದಾರೆ. ಆದರೆ ಈ ಬಾರಿ ಮಳೆಯ ಅಭಾವದಿಂದ ಬೆಳೆಗಳ ಇಳುವರಿ ಗಣನೀಯವಾಗಿ ಕುಸಿದಿದೆ. ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕಡಿಮೆಯಾಗಿದ್ದು, ವಿದ್ಯುತ್ ಸಮಸ್ಯೆಯಿಂದ ಬೆಳೆಗಳಿಗೆ ಸಮರ್ಪಕವಾಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಹೊಲದಲ್ಲಿನ ಕಬ್ಬು ಒಣಗುತ್ತಿದ್ದು, ಅಲ್ಲಲ್ಲಿ ಬೆಂಕಿಗೂ ಆಹುತಿಯಾಗುತ್ತಿದೆ. ಕಬ್ಬು ಸುಟ್ಟುಹೋದಾಗ ರೈತರ ಬದುಕು ಕೂಡ ಸಂಕಷ್ಟಕ್ಕೆ ಸಿಲುಕುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಖಾನೆಗಳು ರೈತರ ನೆರವಿಗೆ ನಿಲ್ಲಬೇಕು ಎಂದು ತಿಳಿಸಿದ್ದಾರೆ.

ಜಿಲ್ಲೆಯ ಜಿ.ಎಂ. ಶುಗರ್ಸ್ ಹಾಗೂ ವಿಐಎನ್‌ಪಿ ಶುಗರ್ಸ್ ಕಾರ್ಖಾನೆಗಳ ಮಾಲೀಕರು ರೈತರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಸುಟ್ಟ ಹಾಗೂ ಒಣಗುತ್ತಿರುವ ಕಬ್ಬನ್ನು ಸಾಮಾನ್ಯ ಕಬ್ಬಿಗಿಂತ ಮೊದಲು ಕಟಾವು ಮಾಡಿಸಿ ಕಾರ್ಖಾನೆಗೆ ಸಾಗಿಸಬೇಕು. ಸುಟ್ಟ ಕಬ್ಬಿಗೆ ಶೇ.25ರಷ್ಟು ಕಡಿತ ಮಾಡುವ ಪದ್ಧತಿಯನ್ನು ಕೈಬಿಟ್ಟು, ಯಾವುದೇ ಕಡಿತವಿಲ್ಲದೆ ರೈತರಿಗೆ ಪೂರ್ಣ ಹಣ ಪಾವತಿಸಬೇಕು. ಈಗಾಗಲೇ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸುಟ್ಟ ಕಬ್ಬಿಗೆ ಕಡಿತ ಮಾಡದಿರುವ ಕ್ರಮ ಅನುಸರಿಸಲಾಗುತ್ತಿದೆ. ಅದೇ ಮಾದರಿಯನ್ನು ಹಾವೇರಿ ಜಿಲ್ಲೆಯ ಕಾರ್ಖಾನೆಗಳೂ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕಬ್ಬು ಸುಟ್ಟುಹೋಗುತ್ತಿರುವುದರಿಂದ ರೈತರು ಆರ್ಥಿಕ ನಷ್ಟದ ಜತೆಗೆ ಆತ್ಮಸ್ಥೈರ್ಯವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಖಾನೆಗಳು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಈ ವರ್ಷ ಕಬ್ಬಿನ ಇಳುವರಿ ಕಡಿಮೆಯಾಗಿದ್ದು, ಮೆಕ್ಕೆಜೋಳದ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಮುಂದಿನ ವರ್ಷ ಕಬ್ಬು ಬೆಳೆಯುವ ರೈತರ ಸಂಖ್ಯೆ ಮತ್ತಷ್ಟು ಕಡಿಮೆಯಾಗುವ ಆತಂಕವಿದೆ.

ಕಾರ್ಖಾನೆಗಳು ಮುಂದಿನ ಹಂಗಾಮಿನಲ್ಲಿ ಕಬ್ಬಿನ ಕೊರತೆ ಎದುರಿಸಬಾರದೆಂದರೆ ಈಗಿನಿಂದಲೇ ರೈತರ ಹಿತ ಕಾಪಾಡಬೇಕು. ರೈತರಿಗೆ ಉಚಿತ ಕಬ್ಬಿನ ಬೀಜ ವಿತರಣೆ ಹಾಗೂ ರಿಯಾಯಿತಿ ದರದಲ್ಲಿ ರಸಗೊಬ್ಬರ ಒದಗಿಸುವ ಮೂಲಕ ಪ್ರೋತ್ಸಾಹಿಸಬೇಕು. ರೈತರ ಸಂಕಷ್ಟಕ್ಕೆ ಸ್ಪಂದಿಸಿ ನೆರವಾದರೆ ಮಾತ್ರ ಮುಂದಿನ ವರ್ಷವೂ ರೈತರು ಕಬ್ಬು ಬೆಳೆಯಲು ಆಸಕ್ತಿ ತೋರುತ್ತಾರೆ. ಇಲ್ಲದಿದ್ದರೆ ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಕಬ್ಬು ದೊರೆಯುವುದು ಕಷ್ಟವಾಗಲಿದೆ ಎಂದು ಭುವನೇಶ್ವರ ಶಿಡ್ಲಾಪುರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಗೆ ನೀರು ಆಪೋಶನ: ಜಲಕ್ಷಾಮ ಭೀತಿ !
371ಜೆ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಬೆಂಬಲ