ಮೇ 31ರೊಳಗೆ ಪಿಲಿಕುಳದಲ್ಲಿ ಗಾಲ್ಫ್‌ ಎಕ್ಸಲೆನ್ಸ್‌ ಅಕಾಡೆಮಿ

KannadaprabhaNewsNetwork |  
Published : Feb 05, 2026, 04:15 AM IST
ಗಾಲ್ಫ್‌ ಟೂರ್ನಮೆಂಟ್‌ಗಾಗಿ ಪಿಲಿಕುಳ ಗಾಲ್ಫ್‌ ಕ್ಲಬ್‌ಗೆ ಆಗಮಿಸಿದ ಅಂತಾರಾಷ್ಟ್ರೀಯ ವೃತ್ತಿಪರ ಆಟಗಾರರು. | Kannada Prabha

ಸಾರಾಂಶ

ಪಿಲಿಕುಳ ಗಾಲ್ಫ್ ಕ್ಲಬ್ ವತಿಯಿಂದ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಶೀಘ್ರದಲ್ಲೇ ಗಾಲ್ಫ್ ಎಕ್ಸಲೆನ್ಸ್ ಅಕಾಡೆಮಿ ಸ್ಥಾಪಿಸಲಿದ್ದು, ಮೇ 31ರೊಳಗೆ ಇದು ಸಾಕಾರವಾಗುವ ನಿರೀಕ್ಷೆಯಿದೆ ಎಂದು ಗಾಲ್ಫ್‌ ಕ್ಲಬ್‌ನ ಕ್ಯಾಪ್ಟನ್ ಮನೋಜ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರು: ಪಿಲಿಕುಳ ಗಾಲ್ಫ್ ಕ್ಲಬ್ ವತಿಯಿಂದ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಶೀಘ್ರದಲ್ಲೇ ಗಾಲ್ಫ್ ಎಕ್ಸಲೆನ್ಸ್ ಅಕಾಡೆಮಿ ಸ್ಥಾಪಿಸಲಿದ್ದು, ಮೇ 31ರೊಳಗೆ ಇದು ಸಾಕಾರವಾಗುವ ನಿರೀಕ್ಷೆಯಿದೆ ಎಂದು ಗಾಲ್ಫ್‌ ಕ್ಲಬ್‌ನ ಕ್ಯಾಪ್ಟನ್ ಮನೋಜ್ ಶೆಟ್ಟಿ ತಿಳಿಸಿದ್ದಾರೆ.ಪಿಲಿಕುಳ ನಿಸರ್ಗಧಾಮದ ಘಟಕಗಳಲ್ಲೊಂದಾದ ಪಿಲಿಕುಳ ಗಾಲ್ಫ್ ಕ್ಲಬ್‌ನ್ನು 1999ರಲ್ಲಿ ಆರಂಭಿಸಲಾಗಿದ್ದು, ಇತ್ತೀಚೆಗೆ ಇದನ್ನು 18- ಹೋಲ್‌ಗಳ ಫ್ಲಡ್‌ಲೈಟ್ ಗಾಲ್ಫ್ ಕೋರ್ಸ್‌ ಆಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದೀಗ ಗಾಲ್ಫ್‌ ಎಕ್ಸಲೆನ್ಸ್‌ ಅಕಾಡೆಮಿ ಸ್ಥಾಪನೆಯನ್ನು ಮೈಕೆಲ್ ಡಿಸೋಜಾ ಕುಟುಂಬವು ಪ್ರಾಯೋಜಿಸಿದ್ದು, ಮೇ 31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.

ಅಕಾಡೆಮಿಯು 20- ಬೇ ಗಾಲ್ಫ್ ತರಬೇತಿ ಸೌಲಭ್ಯವನ್ನು ಒಳಗೊಂಡಿರುತ್ತದೆ. ಅಲ್ಲಿ ಗಾಲ್ಫ್ ಆಟಗಾರರು ಅತ್ಯುನ್ನತ ದರ್ಜೆಯ ಅಭ್ಯಾಸ ಮತ್ತು ವೃತ್ತಿಪರ ತರಬೇತಿ ಪಡೆಯಬಹುದು. ಅಕಾಡೆಮಿ ಸ್ಥಾಪನೆಗೆ ಈಗಾಗಲೇ 2-3 ಪ್ರಸಿದ್ಧ ಗಾಲ್ಫ್ ಕೋಚಿಂಗ್ ಅಕಾಡೆಮಿಗಳನ್ನು ಸಂಪರ್ಕಿಸಲಾಗಿದ್ದು, ಅವರು ಪಿಲಿಕುಳ ಗಾಲ್ಫ್ ಕ್ಲಬ್‌ಗೆ ಭೇಟಿ ನೀಡಿ ತಮ್ಮ ಪರಿಣತಿಯನ್ನು ಹಂಚಿಕೊಳ್ಳಲಿದ್ದಾರೆ. ಬಳಿಕ ಅಕಾಡೆಮಿಯ ವಿನ್ಯಾಸ ಮತ್ತು ಯೋಜನೆಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದರು.

ಅಕಾಡೆಮಿಯಲ್ಲಿ ತರಬೇತಿ ಪಡೆಯುವವರಿಗೆ ವಸತಿ ನಿಲಯದಲ್ಲಿ ವಸತಿ ಸೌಕರ್ಯವನ್ನೂ ಒದಗಿಸಲಾಗುವುದು. ಮುಂದಿನ 10 ವರ್ಷಗಳಲ್ಲಿ ಈ ಪ್ರದೇಶದಿಂದ ಕನಿಷ್ಠ ಇಬ್ಬರಾದರೂ ವೃತ್ತಿಪರ ಗಾಲ್ಫ್ ಆಟಗಾರರನ್ನು ಉತ್ಪಾದಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಮನೋಜ್‌ ಶೆಟ್ಟಿ ಹೇಳಿದರು.

ಅಂತಾರಾಷ್ಟ್ರೀಯ ಪ್ರೊ ಗಾಲ್ಫ್‌ ಆಟಗಾರರ ಜತೆಗೆ ಗಿರೀಶ್‌ ರಾವ್‌, ನಿತಿನ್‌ ಶೆಟ್ಟಿ, ಗೌತಮ್‌ ಪಡಿವಾಳ ಮತ್ತಿತರರು ಇದ್ದರು.

-----------

ಬಾಕ್ಸ್‌

ದೇಶದ ಪ್ರಥಮ ಹೊನಲು ಬೆಳಕಿನ ಪ್ರೊ-ಆಮ್ ಗಾಲ್ಫ್‌ ಟೂರ್ನಮೆಂಟ್‌

ಕರಾವಳಿ ಉತ್ಸವದ ಭಾಗವಾಗಿ ಪಿಲಿಕುಳ ಗಾಲ್ಫ್ ಕ್ಲಬ್ ವತಿಯಿಂದ ಶನಿವಾರ ದೇಶದ ಪ್ರಥಮ ಹೊನಲು ಬೆಳಕಿನ ಪ್ರೊ-ಆಮ್ ಮಂಗಳೂರು ಕಪ್ ಟೂರ್ನಮೆಂಟ್‌ ಆಯೋಜಿಸಲಾಗಿತ್ತು.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾರ್ಗದರ್ಶನದಲ್ಲಿ ಈ ಪಂದ್ಯಾವಳಿಯನ್ನು ಏರ್ಪಡಿಸಲಾಗಿದ್ದು, ದೇಶದ ವಿವಿಧ ಭಾಗಗಳಿಂದ ವಿಶ್ವದರ್ಜೆಯ ವೃತ್ತಿಪರ ಗಾಲ್ಫ್‌ ಆಟಗಾರರಾದ ಅಂತಾರಾಷ್ಟ್ರೀಯ ವೃತ್ತಿಪರ ಆಟಗಾರರಾದ ಅಮನ್ ರಾಜ್, ಆರ್ಯನ್ ರೂಪ ಆನಂದ್, ದಿವ್ಯಾಂಶು ಬಜಾಜ್, ಎಂ. ಧರ್ಮ, ಆಲಾಪ್ ಐ.ಎಲ್, ಯಶಸ್ ಚಂದ್ರ ಎಂ.ಎಸ್., ಉದಯನ್ ಮಾನೆ, ಖಾಲಿನ್ ಜೋಶಿ, ಸ್ನೇಹ ಸಿಂಗ್, ಅವನಿ ಪ್ರಶಾಂತ್, ಚಿಕ್ಕರಂಗಪ್ಪ ಎಸ್. ಮತ್ತು ಸಮರ್ಥ್ ದ್ವಿವೇದಿ ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಚಿಕ್ಕರಂಗಪ್ಪ, ಮಂಗಳೂರಿನಲ್ಲಿ ಗಾಲ್ಫ್‌ ಕ್ರೀಡಾ ಬೆಳವಣಿಗೆಯಲ್ಲಿ ಅತ್ಯಾಧುನಿಕ ಸೌಲಭ್ಯದ ಪಿಲಿಕುಳ ಗಾಲ್ಫ್‌ ಕ್ರೀಡಾಂಗಣ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ