ಮಂಗಳೂರು: ಕಳೆದ ಹಲವು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಮಂಗಳೂರು ಭಾಗದ ವಿವಿಧ ರೈಲ್ವೆ ಬೇಡಿಕೆಗಳ ಶೀಘ್ರ ಈಡೇರಿಕೆಗಾಗಿ ರೈಲ್ವೇಗೆ ಮನವಿ ನೀಡಲಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಅತ್ಯಂತ ಕಡಿಮೆ ಪ್ರಯಾಣ ವೆಚ್ಚದಲ್ಲಿ ಸಂಪರ್ಕ ಕಲ್ಪಿಸುವ ಹಗಲು ರೈಲನ್ನು (ಗೋಮಟೇಶ್ವರ ಎಕ್ಸ್‌ಪ್ರೆಸ್) ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸುವ ಬೇಡಿಕೆ ಈವರೆಗೂ ಈಡೇರಿಸಲಿಲ್ಲ. ಮಂಗಳೂರು ಸೆಂಟ್ರಲ್‌ನಲ್ಲಿ 4 ಮತ್ತು 5 ಪ್ಲಾಟ್ ಫಾರಂ ಅದ ಬಳಿಕ, ಈ ರೈಲನ್ನು ಕೇಂದ್ರ ನಿಲ್ದಾಣಕ್ಕೆ ವಿಸ್ತರಿಸಲಾಗುವುದು ಎಂದು ಈ ಭಾಗದ ಜನಪ್ರತಿನಿಧಿಗಳಿಗೆ, ರೈಲ್ವೆ ಸಲಹಾ ಸಮಿತಿ ಸದಸ್ಯರಿಗೆ ರೈಲ್ವೆ ಅಧಿಕಾರಿಗಳು ಈ ಹಿಂದೆ ಭರವಸೆ ನೀಡಿದ್ದರು. ಮಂಗಳೂರು ಸೆಂಟ್ರಲ್‌ನಲ್ಲಿ ಹೆಚ್ಚುವರಿ ಪ್ಲಾಟ್ ಫಾರಂ ಆದ ಬಳಿಕವೂ ಬೇಡಿಕೆ ಈಡೇರಿಲ್ಲ. ಆದುದರಿಂದ ಈ ರೈಲನ್ನು ಶೀಘ್ರ ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಣೆ ಮಾಡುವಂತೆ ಅಥಾವ ಒಂದು ವೇಳೆ ಇದು ಸದ್ಯಕ್ಕೆ ಅಸಾಧ್ಯವಾದರೇ, ವಾರಕ್ಕೆ ಒಮ್ಮೆ ಸಂಚರಿಸುವ 16539/40 ಯಶವಂತಪುರ-ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಯಿತು.
ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಹಳಿ ಡಬ್ಲಿಂಗ್, ಮಂಗಳೂರಿನಿಂದ ಬೆಂಗಳೂರು ಹಾಗೂ ಮುಂಬಯಿ ಭಾಗಕ್ಕೆ ರಜಾ ಕಾಲದ ವಿಶೇಷ ರೈಲು ವ್ಯವಸ್ಥೆ, ಮಂಗಳೂರು - ಸುಬ್ರಹ್ಮಣ್ಯಕ್ಕೆ ಮೆಮು (MEMU) ರೈಲು, ಮಂಗಳೂರು ಸೆಂಟ್ರಲ್ ನಿಲ್ದಾಣ ನವೀಕರಣ, ವಾರಕ್ಕೊಮ್ಮೆ ಸಂಚರಿಸುವ ರಾಮೇಶ್ವರ ರೈಲಿನ ಭೋಗಿಗಳನ್ನು ಬಳಸಿ ಮುಂಬೈ ಅಥಾವ ಭಾವ ನಗರಕ್ಕೆ ಹೊಸ ರೈಲಿನ ಆರಂಭ ಇತ್ಯಾದಿ ಬೇಡಿಕೆಗಳನ್ನು ಸಲ್ಲಿಸಲಾಯಿತು.ಮನವಿ ಸ್ವೀಕರಿಸಿದ ಡಿ.ಆರ್.ಎಂ. ಅವರು ಬೇಡಿಕೆಗಳನ್ನು ಪರಿಶೀಲಿಸಿ ಆದ್ಯತೆಯ ಮೇಲೆ ಪರಿಗಣಿಸಲಾಗುವುದು ಎಂಬ ಭರವಸೆ ನೀಡಿದರು. ಮಂಗಳೂರು ಸೆಂಟ್ರಲ್‌ನಲ್ಲಿ ಇನ್ನೂ ಹೆಚ್ಚುವರಿಯಾಗಿ ಎರಡು ಪ್ಲಾಟ್ ಫಾರಂಗಳ ನಿರ್ಮಾಣಕ್ಕೆ ಅನುಮತಿ ದೊರಕಿದ್ದು, ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎ೦ಬ ಮಾಹಿತಿ ನೀಡಿದರು.