ಮಂಗಳೂರು: ಕೇವಲ ಕಾಲ್ಪನಿಕ ವಿವರಣೆಗಳನ್ನು ನೀಡುವ ಎಐ ಆಲ್ಗಾರಿದಮ್ ಗಳಿಗಿಂತ ಭಿನ್ನವಾಗಿ, ರೋಗಿಗಳ ಭಯ ಮತ್ತು ಭರವಸೆಗಳನ್ನು ಅರ್ಥಮಾಡಿಕೊಳ್ಳುವ ಮಾನವೀಯ ಅನುಕಂಪದಲ್ಲೇ ನಿಮ್ಮ ನಿಜವಾದ ಶಕ್ತಿ ಅಡಗಿದೆ ಎಂದು ಟಾಟಾ ಮೆಮೋರಿಯಲ್ ಸೆಂಟರ್ ನಿರ್ದೇಶಕ ಪ್ರೊ.ಸುದೀಪ್ ಗುಪ್ತಾ ಹೇಳಿದರು.
ಮಂಗಳೂರಿನ ಡಾ.ಟಿ.ಎಂ.ಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ 33ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತವು ವಿಕಸಿತ ಭಾರತದತ್ತ ವೇಗವಾಗಿ ಮುನ್ನಡೆಯುತ್ತಿದೆ. ಸ್ವಾತಂತ್ರ್ಯದ ನಂತರ ದೇಶದಲ್ಲಿ ಸರಾಸರಿ ಜೀವಿತಾವಧಿ ದುಪ್ಪಟ್ಟಾಗಿದ್ದು, ಪ್ರಸ್ತುತ 72 ವರ್ಷಗಳಿಗೆ ತಲುಪಿದೆ. 2047ರ ವೇಳೆಗೆ ಭಾರತದ ಜಿಡಿಪಿ ಮತ್ತು ತಲಾ ಆದಾಯ ನಾಲ್ಕು ಪಟ್ಟು ಹೆಚ್ಚಾಗಲಿದೆ. ಮಾಹೆ ಮತ್ತು ಟಾಟಾ ಸ್ಮಾರಕ ಕೇಂದ್ರದಂತಹ ಸಂಸ್ಥೆಗಳು ಈಗ ಕೈಗೊಳ್ಳುವ ಕೆಲಸಗಳು, ಭಾರತವು 2050ರಲ್ಲಿ ಎಲ್ಲಿಗೆ ತಲುಪಲಿದೆ ಎಂಬುದನ್ನು ನಿರ್ಧರಿಸುತ್ತವೆ. ಕೇವಲ ಸಾಂಪ್ರದಾಯಿಕ ಸಂಪತ್ತಾಗಿರುವ ಚಿನ್ನದ ಮೇಲಲ್ಲದೆಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ ಹಾಗೂ ನಾವೀನ್ಯಯುತ ಆರೋಗ್ಯ ಕ್ಷೇತ್ರದ ಜ್ಞಾನದ ಆಧಾರದ ಮೇಲೆ ಹೊಸ ರಾಷ್ಟ್ರೀಯ ಸಂಪತ್ತನ್ನು ರೂಪಿಸಬೇಕಿದೆ ಎಂದರು.ನಿಟ್ಟೆ ಎಜುಕೇಷನ್ ಟ್ರಸ್ಟ್ ಸಹ ಕುಲಾಧಿಪತಿ ಡಾ.ಎಂ. ಶಾಂತಾರಾಮ್ ಶೆಟ್ಟಿ ಮಾತನಾಡಿ, ನೀವು ಇಲ್ಲಿಯವರೆಗೆ ಬರೆದ ಯಶಸ್ಸಿನ ಕಥೆಯೇ ಇನ್ಮುಂದೆ ನಿಮಗೆ ದಾರಿದೀಪ. ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಮಾಹೆಯ ಶ್ರೀಮಂತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ. ವರ್ಷದಿಂದ ವರ್ಷಕ್ಕೆ ಇಂತಹ ಶ್ರೀಮಂತ ಪ್ರತಿಭೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿರುವ ಮಾಹೆ ಸಂಸ್ಥೆಯ ಶ್ರಮ ಶ್ಲಾಘನೀಯ ಎಂದರು.
ಮಾಹೆಯ ಸಹ ಕುಲಾಧಿಪತಿ ಡಾ.ಹೆಚ್.ಎಸ್. ಬಲ್ಲಾಳ್ ಪದವಿ ಪ್ರದಾನ ಮಾಡಿದರು. ಈ ವರ್ಷ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳಲ್ಲಿ ಒಟ್ಟು 1,258 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಇವರಲ್ಲಿ 576 ವಿದ್ಯಾರ್ಥಿಗಳು ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ಮಣಿಪಾಲದ ಎಂ.ಸಿ.ಒ.ಡಿ.ಎಸ್. ವಿದ್ಯಾರ್ಥಿ ನವಲ್‌ಪ್ರೀತ್ ಸಿಂಗ್ ಭಮ್ರಾ, ಮಂಗಳೂರಿನ ಎಂ.ಸಿ.ಒ.ಡಿ.ಎಸ್. ವಿದ್ಯಾರ್ಥಿನಿ ಅದೀಬಾ ಅಲಿ ಮತ್ತು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (2021-22ರ ಎಂಬಿಬಿಎಸ್ ಬ್ಯಾಚ್) ವಿದ್ಯಾರ್ಥಿನಿ ಚೈತ್ರಾ ಶೆಣೈ ಅವರಿಗೆ ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕನೀಡಿ ಗೌರವಿಸಲಾಯಿತು.ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ-ಕುಲಪತಿ ಡಾ.ನಾರಾಯಣ ಸಭಾಹಿತ್, ಕುಲಸಚಿವ ಡಾ. ಗಿರಿಧರ್ ಕಿಣಿ, ಮೌಲ್ಯಮಾಪನ ಕುಲಸಚಿವ ಡಾ. ವಿನೋದ್ ಥಾಮಸ್ ಇದ್ದರು.