ಕನ್ನಡಪ್ರಭ ವಾರ್ತೆ ಮಂಗಳೂರು
ಹಿರಿಯ ರಂಗಕರ್ಮಿ, ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರಾಜ್ ನೇತೃತ್ವದ ನಿರ್ದಿಗಂತ ತಂಡದಿಂದ ನಾಟಕ, ಕಲೆ, ಸಾಂಸ್ಕೃತಿಕ, ವೈಚಾರಿಕ ಉತ್ಸವವಾದ ‘ನಿರ್ದಿಗಂತ ಉತ್ಸವ’ ನಗರದ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿ ಶುಕ್ರವಾರ ಆರಂಭಗೊಂಡಿತು. ಮಾ.3ರವರೆಗೆ ಈ ಉತ್ಸವ ನಡೆಯಲಿದೆ. ಕಾಲೇಜಿನ ಮರಗಳ ನೆರಳಿನಲ್ಲಿರುವ ಬಯಲು ರಂಗ ವೇದಿಕೆಯಲ್ಲಿ ನಿರ್ದಿಗಂತ ಉತ್ಸವವನ್ನು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ವಂ.ಡಾ. ಪ್ರವೀಣ್ ಮಾರ್ಟಿಸ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ನಾಡಿನ ಇತಿಹಾಸವನ್ನು ಪೀಳಿಗೆಯಿಂದ ಪೀಳಿಗೆಗೆ ಸಾಗಿಸುವ ಕೆಲಸವಾಗಬೇಕು. ಇಲ್ಲವಾದರೆ ಇತಿಹಾಸವನ್ನು ಮರೆತುಬಿಡುವ ಅಪಾಯ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಕಲೆಯ ಮೂಲಕ ಮಾನವೀಯತೆಯ ಸಂಬಂಧ ಬೆಸೆಯುವ ಕಾರ್ಯ ಮುಂದುವರಿಯಬೇಕು. ಕರಾವಳಿಯ ಭಿನ್ನತೆಯಲ್ಲಿನ ಏಕತೆಯ ಪರಂಪರೆಯನ್ನು ಮುಂದುವರಿಸಲು ಈ ವೇದಿಕೆ ಕಾರಣವಾಗಲಿ ಎಂದು ಆಶಿಸಿದರು. ನಟ ಪ್ರಕಾಶ್ ರಾಜ್ ಮಾತನಾಡಿ, ಮನುಷ್ಯನ ವಿಕಾಸದಲ್ಲಿ ಸೌಹಾರ್ದತೆ ಅತಿ ಮುಖ್ಯವಾಗಿದ್ದು, ಅದನ್ನು ವಿಚ್ಛೇದಿಸುವ ಕಾರ್ಯ ಆಗಬಾರದು. ಕರಾವಳಿಯ ಸೌಹಾರ್ದತೆಯನ್ನು ಮರುಚಿಂತನೆಗೆ ಹಚ್ಚುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ನಿರ್ದಿಗಂತ ಉತ್ಸವವನ್ನು ‘ಸೌಹಾರ್ದದ ಬಳಿ: ನಮ್ಮ ಕರಾವಳಿ’ ಎಂಬ ಧ್ಯೇಯದೊಂದಿಗೆ ನಡೆಸುತ್ತಿದ್ದೇವೆ. ಕರಾವಳಿಯ ಭಾಷೆಗಳ ವೈವಿಧ್ಯತೆಯಂತೆಯೇ ಸೌಹಾರ್ದತೆಯೂ ಇಲ್ಲಿ ಹಾಸು ಹೊಕ್ಕಾಗಿದೆ. ಹಾಗಾಗಿ ತುಳು, ಕೊಂಕಣಿ, ಮಲಯಾಳಂ ಸೇರಿ 8 ನಾಟಕಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಇದ್ದರು. ಸನ್ನುತ ನಿರೂಪಿಸಿದರು.ಬಯಲು ರಂಗ ವೇದಿಕೆಯ ಪಕ್ಕದಲ್ಲಿ ವಿವಿಧ ಕಲಾಕೃತಿಗಳ ಪ್ರದರ್ಶನ, ಕೊರಗರ ಸಾಂಪ್ರದಾಯಿಕ ಕೌಶಲ್ಯಗಳ ಪ್ರಾತ್ಯಕ್ಷಿಕೆ, ಹತ್ತಿಯಿಂದ ಕೈಮಗ್ಗದ ಬಟ್ಟೆಗಳನ್ನು ನೇಯುವ ಪ್ರಾತ್ಯಕ್ಷಿಕೆ ಇತ್ಯಾದಿಗಳನ್ನು ಏರ್ಪಡಿಸಲಾಗಿದೆ.............
ಇತಿಹಾಸದ ಮೇಲಿನ ಬೌದ್ಧಿಕ ದಾಳಿಯಿಂದ ಸಣ್ಣ ಸಂಸ್ಕೃತಿಗಳಿಗೆ ಅಪಾಯ: ಪ್ರೊ.ಬಿಳಿಮಲೆಪುರಾಣವನ್ನು ಇತಿಹಾಸವಾಗಿ ತಿರುಚುವ ಪ್ರಯತ್ನದ ಮೂಲಕ ನಾಡಿನ ವಿವೇಕ ನಾಶವಾಗುತ್ತಿದೆ. ನಾಡಿನ ಮೂಲ ಕಲ್ಪನೆಗಳನ್ನು ನಾಶ ಮಾಡಿ ಇತಿಹಾಸದ ಮೇಲೆ ಬೌದ್ಧಿಕ ದಾಳಿ ನಡೆಸುತ್ತಿರುವುದು ದೇಶದಲ್ಲಿ ಹೆಚ್ಚುತ್ತಿದ್ದು, ಇದರಿಂದ ಸಣ್ಣ ಸಂಸ್ಕೃತಿಗಳು ದೊಡ್ಡ ಅಪಾಯಕ್ಕೆ ಒಳಗಾಗಲಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದ್ದಾರೆ.
ನಿರ್ದಿಗಂತ ಉತ್ಸವದಲ್ಲಿ ‘ಸೌಹಾರ್ದದ ಬಳಿ- ನಮ್ಮ ಕರಾವಳಿ’ ಎಂಬ ವಿಚಾರದ ಕುರಿತು ಅವರು ಉಪನ್ಯಾಸ ನೀಡಿದರು.ನಾಡಿನ ಇತಿಹಾಸವನ್ನು ತಿರುಚುವ ತಂತ್ರಗಳ ಮೂಲಕ ರಾಜಕಾರಣಿಗಳು ತಮ್ಮ ಅಧಿಕಾರದ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಜನರು ರಾಜಕಾರಣಿಗಳ ಇಂತಹ ತಂತ್ರಗಾರಿಕೆಗೆ ಬಲಿಯಾಗಬಾರದು ಎಂದು ಹೇಳಿದರು.
ಬೊಬ್ಬರ್ಯ ಎನ್ನುವುದು ಮುಸ್ಲಿಂ ದೈವ. ಅವನ ತಂದೆ ಸುಲಕಲ್ಲ ಮುರವ ಬ್ಯಾರಿ, ತಾಯಿ ಫಾತಿಮಾ. ಎಲ್ಲ ದಾಖಲೆಗಳಲ್ಲೂ ಹೀಗೇ ಇದೆ. ಆದರೆ ಇದನ್ನು ಅರಗಿಸಿಕೊಳ್ಳಲಾರದ ಕೆಲವರು ಇತ್ತೀಚೆಗೆ ಬಬ್ರುವಾಹನನ ಅವತಾರವೇ ಬೊಬ್ಬರ್ಯ ಎನ್ನುತ್ತಿದ್ದಾರೆ. ರಾಮ, ವಿಷ್ಣುವಿಗೆ ಅವತಾರಗಳಿವೆ. ಬಬ್ರುವಾಹನನಿಗೆ ಅವತಾರ ಇದೆಯೇ ಎಂದು ಪ್ರಶ್ನಿಸಿದ ಪ್ರೊ.ಪುರುಷೋತ್ತಮ ಬಿಳಿಮಲೆ, ಇಂತಹ ಬೌದ್ಧಿಕ ದಾಳಿಗಳಿಂದ ನಾಡಿನ ಸಣ್ಣ ಸಂಸ್ಕೃತಿಗಳಿಗೆ ಅಪಾಯ ಎದುರಾಗುತ್ತಿದೆ. ದೈವ ಪರಂಪರೆಯನ್ನು ಇದ್ದುದನ್ನು ಇದ್ದ ಹಾಗೆಯೇ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ, ಹೀಗಾದರೆ ಮಾತ್ರ ಸಂಸ್ಕೃತಿಯ ಉಳಿವು ಸಾಧ್ಯ ಎಂದರು.ಈಗಾಗಲೇ ಕರಾವಳಿಯ ಮೂಲನಿವಾಸಿ ತಳ ಸಮುದಾಯಗಳ ಸಂಖ್ಯೆ, ಭಾಷೆ, ಸಂಸ್ಕೃತಿ ನಶಿಸುತ್ತಿದೆ. ಈ ಸಮುದಾಯಗಳೀಗ ಬೌದ್ಧಿಕ ದಾಳಿಯ ಪರಿಣಾಮವಾಗಿ ಹಿಂದುತ್ವದ ಕಡೆಗೆ ಸಾಗುತ್ತಿವೆ ಎಂದು ಖೇದ ವ್ಯಕ್ತಪಡಿಸಿದರು.
ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ ಸ್ಥಾಪಿಸಿ ಪರಶುರಾಮನ ಕಾಲಬುಡದಲ್ಲಿ ಭೂತಗಳನ್ನಿಟ್ಟು ಭೂತಗಳಿಗೆ ಅವಮಾನ ಮಾಡಲಾಗಿದೆ. ಈ ಮೂಲಕ ಕೋಮುವಾದಿಗಳು ಸಂಸ್ಕೃತಿ ನಾಶ ಮಾಡುವ ಕೆಲಸ ಮಾಡಿದ್ದಾರೆ ಎಂದು ಪ್ರೊ.ಬಿಳಿಮಲೆ ಆರೋಪಿಸಿದರು.18ನೇ ಶತಮಾನದಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಕರಾವಳಿಗೆ ಬಂದು ವಿದ್ಯಾಸಂಸ್ಥೆಗಳನ್ನು ಕಟ್ಟಿದ್ದರಿಂದ ಹೆಚ್ಚಿನವರು ವಿದ್ಯಾವಂತರಾದರು. ಇತ್ತೀಚಿನ ವರ್ಷಗಳಲ್ಲಿ ಚರ್ಚ್‌ಗಳಿಗೆ ದಾಳಿ ನಡೆಸಿದ ಜನರಿಗೆ ಅವರ ಪೂರ್ವಜರು ಕ್ರಿಶ್ಚಿಯನ್ ಶಾಲೆಗಳಲ್ಲಿ ಕಲಿತದ್ದು ಎಂಬ ಅರಿವು ಇರುತ್ತಿದ್ದರೆ ಹೀಗೆ ಮಾಡುತ್ತಿರಲಿಲ್ಲ ಎಂದರು.