ಮಂಗಳೂರು ರೈಲ್ವೆ ವ್ಯಾಪ್ತಿ ಇನ್ನು ನೈಋತ್ಯ ವಲಯಕ್ಕೆ

KannadaprabhaNewsNetwork |  
Published : Aug 22, 2026, 01:45 AM IST
Mangaluru

ಸಾರಾಂಶ

ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಕೇರಳದ ಪಾಲಕ್ಕಾಡ್ ವಿಭಾಗದಿಂದ ಹಿಂಪಡೆದು, ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ.

 ಮಂಗಳೂರು: ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಕೇರಳದ ಪಾಲಕ್ಕಾಡ್ ವಿಭಾಗದಿಂದ ಹಿಂಪಡೆದು, ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ. ಇದರೊಂದಿಗೆ ಕಳೆದ 23 ವರ್ಷಗಳಿಂದ ನಡೆಯುತ್ತಿದ್ದ ಕರಾವಳಿ ಭಾಗದ ರೈಲು ಪ್ರಯಾಣಿಕರ ಬೇಡಿಕೆ ಕೊನೆಗೂ ಈಡೇರಿದೆ.

ಈ ಕುರಿತಂತೆ ರೈಲ್ವೆ ಮಂಡಳಿಯ ನೈಋತ್ಯ, ದಕ್ಷಿಣ ಹಾಗೂ ಕೊಂಕಣ ರೈಲ್ವೆ ವಿಭಾಗಗಳ ಉನ್ನತಾಧಿಕಾರಿಗಳಿಗೆ ಶುಕ್ರವಾರ ಅಧಿಕೃತ ಸುತ್ತೋಲೆ ಕಳುಹಿಸಲಾಗಿದೆ. ರೈಲ್ವೆ ಮಂಡಳಿಯ ಈ ಹೊಸ ನಿರ್ಧಾರದ ಪ್ರಕಾರ, ಉಳ್ಳಾಲವರೆಗಿನ (ಉಳ್ಳಾಲ ಸೇರಿದಂತೆ) ಮಂಗಳೂರು ರೈಲ್ವೆ ವ್ಯಾಪ್ತಿ ಮೈಸೂರು ವಿಭಾಗದ ಸುಪರ್ದಿಗೆ ಬರಲಿದೆ. ಇದರೊಂದಿಗೆ ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆಯ ಇಂಟರ್‌ಚೇಂಜ್ (ಬದಲಾವಣೆ) ಪಾಯಿಂಟ್ ಇದುವರೆಗೆ ಪಡೀಲ್‌ನಲ್ಲಿದ್ದುದು, ಇನ್ನು ಮುಂದೆ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ. ತೊಕೂರು ರೈಲ್ವೆ ನಿಲ್ದಾಣ ಪ್ರಸ್ತುತ ಇರುವಂತೆ ಕೊಂಕಣ ರೈಲ್ವೆ ವ್ಯಾಪ್ತಿಯಲ್ಲೇ ಮುಂದುವರಿಯಲಿದ್ದು, ಕೊಂಕಣ ಹಾಗೂ ನೈರುತ್ಯ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಇದು ಕಾರ್ಯ ನಿರ್ವಹಿಸಲಿದೆ. ಅಕ್ಟೋಬರ್ 1ರಿಂದ ಈ ಆದೇಶ ಜಾರಿಗೆ ಬರಲಿದೆ.

ಹುದ್ದೆಗಳೊಂದಿಗೆ ವರ್ಗಾವಣೆ ಆದೇಶ ಮುಂದಿನ ಹಂತದಲ್ಲಿ

ವ್ಯಾಪ್ತಿ ಬದಲಾವಣೆ ಹಿನ್ನೆಲೆಯಲ್ಲಿ ಗೆಜೆಟೆಡ್ ಅಧಿಕಾರಿಗಳ ವಲಯ ಬದಲಾವಣೆಗೆ ಸಂಬಂಧಿಸಿದಂತೆ ಹುದ್ದೆಗಳೊಂದಿಗೆ ವರ್ಗಾವಣೆ ಆದೇಶಗಳನ್ನು ಮುಂದಿನ ಹಂತದಲ್ಲಿ ಹೊರಡಿಸಲಾಗುವುದು. ಗ್ರೂಪ್-ಬಿ ಅಧಿಕಾರಿಗಳ ವಿಚಾರದಲ್ಲಿ ಚಾಲ್ತಿಯಲ್ಲಿರುವ ನಿಯಮಗಳಂತೆ ಕ್ರಮ ಕೈಗೊಳ್ಳಲಾಗುತ್ತದೆ.

ಗೆಜೆಟೆಡ್ ಅಲ್ಲದ ಸಿಬ್ಬಂದಿ ಮತ್ತು ಹುದ್ದೆಗಳನ್ನು ‘ಯಥಾಸ್ಥಿತಿ’ ಆಧಾರದ ಮೇಲೆ ವರ್ಗಾಯಿಸಲಾಗುವುದು. ಆದರೆ ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲೇ ಮುಂದುವರಿಯುವ ಅಥವಾ ನೈರುತ್ಯ ರೈಲ್ವೆಗೆ ವರ್ಗಾವಣೆಯಾಗುವ ಆಯ್ಕೆ ನೀಡಲಾಗಿದೆ. ನೈರುತ್ಯ ರೈಲ್ವೆಯನ್ನು ಆಯ್ಕೆ ಮಾಡುವ ಸಿಬ್ಬಂದಿಯನ್ನು ಆಡಳಿತಾತ್ಮಕ ಕಾರಣಗಳ ಮೇರೆಗೆ ವರ್ಗಾಯಿಸಲಾಗುವುದು. ಅವರ ಹಿರಿತನವನ್ನು ಪ್ರಸ್ತುತ ದರ್ಜೆಯಲ್ಲಿ ಸಲ್ಲಿಸಿರುವ ಸೇವಾವಧಿಯ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ.ಕೋಟ್‌:

ನನ್ನ ಯತ್ನಕ್ಕೆ ಫಲ

ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ನೈಋತ್ಯ ರೈಲ್ವೆಗೆ ಹಸ್ತಾಂತರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರಾವಳಿ ಜನತೆಯ ಹಲವು ದಶಕಗಳ ಬೇಡಿಕೆಯನ್ನು ಈಡೇರಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೂ ಆದಾಯ ಬರಲಿದೆ. ನಾನು ರೈಲ್ವೆ ರಾಜ್ಯ ಸಚಿವನಾದ ಎರಡೇ ವರ್ಷದಲ್ಲಿ ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಮರು ಸೇರ್ಪಡೆಗೊ‍ಳಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದೆ. ಇದಕ್ಕೆ ಈಗ ಯಶ ಸಿಕ್ಕಿದೆ.

- ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕಾವಲುಗಾರನೇ ಮತ ಕದ್ದರೆ ಹೇಗೆ?
ಓಟ್‌ ಚೋರಿ ವಿರುದ್ಧ ದೆಹಲಿಯಲ್ಲಿ ಕೆಪಿಸಿಸಿ ಧರಣಿ