ಕದ್ರಿ ಕ್ಷೇತ್ರಕ್ಕೆ 1 ಲಕ್ಷ ರು. ಮೌಲ್ಯದ ಸಂಸ್ಕರಿಸಿದ ಲೋಹ ಸಮರ್ಪಣೆ

KannadaprabhaNewsNetwork |  
Published : Apr 30, 2026, 02:45 AM IST
ಕದ್ರಿ ಕ್ಷೇತ್ರಕ್ಕೆ 1 ಲಕ್ಷ ರು. ಮೌಲ್ಯದ ಸಂಸ್ಕರಿಸಿದ ಲೋಹ ಸಮರ್ಪಣೆ ಮಾಡಲಾಯಿತು | Kannada Prabha

ಸಾರಾಂಶ

mangalore, ramakrishna, mutt, government, state, clean, drive,

ಮಂಗಳೂರು: ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್‌, ಸ್ವಚ್ಛ ಮಂಗಳೂರು ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ ಧಾರ್ಮಿಕ ತ್ಯಾಜ್ಯ ವಿಲೇವಾರಿ ‘ವಿಸರ್ಜನೆʼ ಅಭಿಯಾನದ ಸಮಾರೋಪ ಸಮಾರಂಭ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಮಂಗಳವಾರ ನಡೆಯಿತು.

ಸ್ವಚ್ಛ ಮಂಗಳೂರು ಅಭಿಯಾನದ ಸ್ವಯಂ ಸೇವಕರು ಧಾರ್ಮಿಕ ತ್ಯಾಜ್ಯ ವಿಲೇವಾರಿ ವಿಸರ್ಜನೆ ಅಭಿಯಾನದ ವೇಳೆ ಸಂಗ್ರಹಿಸಿ, ಸಂಸ್ಕರಿಸಿದ ಸುಮಾರು 1 ಲಕ್ಷ ರು. ಮೌಲ್ಯದ ಬೆಳ್ಳಿ, ತಾಮ್ರ ಮತ್ತು ಪಿತ್ತಳದ ಲೋಹಗಳನ್ನು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ ಅವರು ಕದ್ರಿ ಕ್ಷೇತ್ರಕ್ಕೆ ಸಮರ್ಪಿಸಿದರು.ಈ ವೇಳೆ ಮಾತನಾಡಿದ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ, ವಿಸರ್ಜನೆ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಅಭಿಯಾನಕ್ಕೆ ಮಾರ್ಚ್ ನಲ್ಲಿ ಚಾಲನೆ ನೀಡಲಾಗಿತ್ತು. 10 ದಿನಗಳ ಕಾಲ ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಪಾಂಡೇಶ್ವರದ ಫಿಜಾ ಬೈ ನೆಕ್ಸಸ್ ಮಾಲ್ , ಕೆ.ಎಸ್.ರಾವ್‌ ರಸ್ತೆಯ ಸಿಟಿ ಸೆಂಟರ್ ಮಾಲ್ ಮತ್ತು ಸುರತ್ಕಲ್ ಗೋವಿಂದದಾಸ್ ಕಾಲೇಜು ಸಂಗ್ರಹ ಕಾರ್ಯ ನಡೆಯಿತು. ಸುಮಾರು 6,000 ಮನೆ ಮಂದಿ ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ನಿರೀಕ್ಷೆಗೂ ಮೀರಿ ಜನರಿಂದ ಸ್ಪಂದನೆ ವ್ಯಕ್ತವಾಗಿತ್ತು ಎಂದರು.\

ಅಭಿಯಾನದ ಮುಖ್ಯ ಸಂಯೋಜಕ ರಂಜನ್‌ ಬೆಳ್ಳರ್ಪಾಡಿ ಮಾತನಾಡಿ, 10 ದಿನಗಳಲ್ಲಿ ಒಟ್ಟು 12,500 ಕಿಲೋಗ್ರಾಂ (12.5 ಟನ್) ಧಾರ್ಮಿಕ ತ್ಯಾಜ್ಯ ಸಂಗ್ರಹಿಸಲಾಯಿತು. ನಂತರ ಈ ತ್ಯಾಜ್ಯವನ್ನು 9 ವಿಭಾಗಗಳಲ್ಲಿ ವೈಜ್ಞಾನಿಕವಾಗಿ ವಿಂಗಡಿಸಿದ್ದು, ಇದರಲ್ಲಿ ಸುಮಾರು 15,000 ದೇವರ ಫೋಟೋ ಫ್ರೇಮ್‌ಗಳು (4,500 ಕೆಜಿ), ಮೂರ್ತಿಗಳು ಮತ್ತು ಸ್ಮರಣಿಕೆಗಳು (2,500 ಕೆಜಿ), ಕಾಗದ ಮತ್ತು ಪುಸ್ತಕಗಳು (1,500 ಕೆಜಿ), ಮರುಬಳಕೆ ಆಗದ ವಸ್ತುಗಳು (1,200 ಕೆಜಿ), ಕುಂಕುಮ ಮತ್ತು ಪ್ರಸಾದ (800 ಕೆಜಿ), ಪ್ಲಾಸ್ಟಿಕ್ (700 ಕೆಜಿ), ಲೋಹ ವಸ್ತುಗಳು (500 ಕೆಜಿ), ಮರದ ವಸ್ತುಗಳು (500 ಕೆಜಿ), ಹಾಗೂ ಬಟ್ಟೆ (300 ಕೆಜಿ) ಸೇರಿವೆ. 10 ಸಂಸ್ಥೆಗಳ 150 ಕ್ಕೂ ಹೆಚ್ಚು ಸ್ವಯಂಸೇವಕರು, ಸುಮಾರು 2,250 ಗಂಟೆಗಳ ಶ್ರಮದಾನದ ಮೂಲಕ ಈ ಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.ಈ ಅಭಿಯಾನದ ವಿಶೇಷತೆಯಾಗಿ ಏ.3ರಂದು ರಾಮಕೃಷ್ಣ ಮಠದಲ್ಲಿ ಉದ್ವಾಸನ ಪೂಜೆ ನೆರವೇರಿಸಲಾಯಿತು. ಈ ಪೂಜೆಯ ಮೂಲಕ ಪವಿತ್ರ ವಸ್ತುಗಳ ಧಾರ್ಮಿಕ ಗೌರವವನ್ನು ಕಾಪಾಡಲಾಯಿತು. ಕಾಗದದ ದೇವರ ಚಿತ್ರಗಳನ್ನು ಸಂಸ್ಕಾರಪೂರ್ವಕವಾಗಿ ವಿಲೇವಾರಿ ಮಾಡಿ, ಅದರ ಶೇಷಗಳನ್ನು ಭೂಮಿಗೆ ಹಿಂತಿರುಗಿಸಲಾಯಿತು ಮತ್ತು ತುಳಸಿ ಗಿಡಗಳನ್ನು ನೆಡಲಾಯಿತು ಎಂದರು.ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಟ್ರಸ್ಟಿ ದಿಲ್‌ರಾಜ್‌ ಆಳ್ವ ಮಾತನಾಡಿ, ಮರುಬಳಕೆ ಸಾಧ್ಯವಾದ ಗಾಜು, ಕಾಗದ, ಮರ ಮತ್ತು ಲೋಹಗಳನ್ನು ಮರುಬಳಕೆ ಘಟಕಗಳಿಗೆ ಕಳುಹಿಸಲಾಗಿದೆ. ಮರುಬಳಕೆ ಸಾಧ್ಯವಿಲ್ಲದ ತ್ಯಾಜ್ಯವನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಸಂಗ್ರಹವಾದ 1 ಲಕ್ಷ ರು. ಮೌಲ್ಯದ ಬೆಳ್ಳಿ, ತಾಮ್ರ ಮತ್ತು ಹಿತ್ತಾಳೆಯ ಗಟ್ಟಿಯನ್ನುಕದ್ರಿ ದೇವಸ್ಥಾನಕ್ಕೆ ನೀಡಲಾಗಿದೆ ಎಂದು ವಿವರಿಸಿದರು.

ಕದ್ರಿ ಕ್ಷೇತ್ರದ ಟ್ರಸ್ಟಿಗಳಾದ ರಾಜೇಂದ್ರ ಚಿಲಿಂಬಿ, ಕಿರಣ್ ಕುಮಾರ್, ಉಷಾ ಪ್ರಭಾಕರ್, ಪ್ರೀತಾ ನಂದನ್, ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸ್ವಯಂಸೇವಕರಾದ ಕಮಲಾಕ್ಷ ಪೈ, ಅನಿರುದ್ಧ ನಾಯಕ್, ಯೋಗೇಶ್ ಕಾರ್ಯತಡ್ಕ, ಉದಯ್ ಕೆ. ಪಿ., ಸೌರಜ್ ಮಂಗಳೂರು, ಅಭಿ ಕಾರ್ಕಳ, ಸುನಂದಾ ಶಿವರಾಮ್, ರಾಜೀವಿ ಚಂದ್ರಶೇಖರ್, ಸಚಿನ್ ಶೆಟ್ಟಿ, ನವನೀತ್ ಶೆಟ್ಟಿ, ಪ್ರಜ್ವಲ್, ಪ್ರಥಮ್ ಸಹಿತ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಬಹಿರಂಗ ಸಭೆ, ಅದ್ಧೂರಿ ಜಯಂತ್ಯುತ್ಸವ
ಶಿವಬೋಧರಂಗ ಸೊಸೈಟಿಗೆ ₹7.30 ಕೋಟಿ ಲಾಭ