ಮಂಗಳೂರು: ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಎಸ್‌ಸಿಡಿಸಿಸಿ) ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಸಣ್ಣ ಹಳ್ಳಿಯಿಂದ ಬಂದು ವಿಶ್ವ ಸ್ವರೂಪದ ಸಹಕಾರಿ ಕ್ಷೇತ್ರವನ್ನು ಕಟ್ಟಿದವರು. ಲಕ್ಷಾಂತರ ಸಹಕಾರಿಗಳನ್ನು ಸೃಷ್ಟಿಸಿದ ಅವರು ‘ಸಹಕಾರಿ ಬ್ರಹ್ಮ’ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಬಣ್ಣಿಸಿದ್ದಾರೆ.ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಭಿವಂದನಾ ಸಮಿತಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬ ಸಂಭ್ರಮ, ಅಭಿವಂದನಾ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.
ಪಕ್ಷಗಳು ಕಲಿಯುವುದು ಬಹಳಷ್ಟಿದೆ: ಜನ ಸಂಘಟನೆ ಯಾವ ರೀತಿ ಮಾಡಬೇಕು, ಜನರ ಹೃದಯ ತಲುಪುವುದು ಹೇಗೆ ಅಂತ ರಾಜಕೀಯ ಪಕ್ಷಗಳು ಕೂಡ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಂದ ಕಲಿಯುವುದು ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟ ವೀರಪ್ಪ ಮೊಯ್ಲಿ, ಸಹಕಾರಿ ಕ್ಷೇತ್ರವನ್ನು ಇಷ್ಟು ಸಮರ್ಥವಾಗಿ ಕಟ್ಟುವುದು ಸುಲಭದ ಮಾತಲ್ಲ. ಜತೆಗೆ ರಾಜೇಂದ್ರ ಕುಮಾರ್ ಅವರು ಈ ಕ್ಷೇತ್ರದಲ್ಲಿ ಅನೇಕ ಪ್ರತಿಭಾವಂತರನ್ನು ಸೃಷ್ಟಿಸಿದ್ದಾರೆ. ಸಹಕಾರಿ ಚಳವಳಿ ಯಶಸ್ವಿಯಾಗಲು ಮುಖ್ಯವಾಗಿ ಬೇಕಾದದ್ದು ಪ್ರಾಮಾಣಿಕತೆ, ಈ ಮಹಾನ್ ತತ್ವವನ್ನು ಅಳವಡಿಸಿಕೊಂಡು ಡಾ.ಎಂಎನ್‌ಆರ್ ಮುಂದುವರಿಯುತ್ತಿರುವುದು ಸಹಕಾರಿ ಕ್ಷೇತ್ರದ ದೊಡ್ಡ ಶಕ್ತಿ ಎಂದು ಶ್ಲಾಘಿಸಿದರು.
ಡಾ. ರಾಜೇಂದ್ರ ಕುಮಾರ್ ಅವರು ಸಹಕಾರ ಕ್ಷೇತ್ರದ ಸಾಧನೆಯ ಜತೆಗೆ ಸ್ವಸಹಾಯ ಗುಂಪುಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡದಿರುವಂತೆ ಅವರಿಗೆ ವಿಶೇಷ ಶಕ್ತಿ ನೀಡಿದ ಕೀರ್ತಿ ಡಾ.ರಾಜೇಂದ್ರ ಕುಮಾರ್ ಅವರಿಗೆ ಸಲ್ಲುತ್ತದೆ. ಈ ಎಲ್ಲ ಕಾರಣಗಳಿಂದಲೇ ಡಾ.ರಾಜೇಂದ್ರ ಕುಮಾರ್ ಅವರನ್ನು ಅಭಿನವ ಮೊಳಹಳ್ಳಿ ಎಂದು ಕರೆಯಲಾಗಿದೆ ಎಂದು ಮೊಯ್ಲಿ ಶ್ಲಾಘಿಸಿದರು.ಯುವ ಜನಾಂಗಕ್ಕೆ ಪ್ರೇರಣೆ- ಖಾದರ್:
ಅನೇಕ ಕಡೆಗಳಲ್ಲಿ ಸಹಕಾರಿ ಕ್ಷೇತ್ರ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸಹಕಾರಿ ಕ್ಷೇತ್ರವನ್ನು ಒಗ್ಗಟ್ಟಾಗಿಸಿ ಕರಾವಳಿಯ ಗೌರವವನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ತಮ್ಮ ಸಾಮರ್ಥ್ಯದಿಂದಲೇ ಕರಾವಳಿ ಸಹಕಾರಿ ಕ್ಷೇತ್ರವನ್ನು ದೇಶದಲ್ಲೇ ನಂ.1 ಸ್ಥಾನಕ್ಕೇರಿಸುವಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ಪಾತ್ರ ಬಹು ದೊಡ್ಡದು. ಎಸ್‌ಸಿಡಿಸಿಸಿ ಬ್ಯಾಂಕ್ ಇಷ್ಟು ಎತ್ತರಕ್ಕೇರಬೇಕಾದರೆ ಸುಲಭವಾಗಿ ಸಾಧ್ಯವಾಗಿಲ್ಲ. ಡಾ.ಎಂ.ಎನ್.ಆರ್. ಅವರ ಶಕ್ತಿ, ಸಾಮರ್ಥ್ಯ, ಅವರ ನೇರ ನಡೆ- ನುಡಿ, ಪಾಲಿಸಿಕೊಂಡು ಬಂದ ಮೌಲ್ಯಗಳಿಂದಾಗಿ ಇದು ಸಾಧ್ಯವಾಗಿದೆ. ಡಾ.ರಾಜೇಂದ್ರ ಕುಮಾರ್ ಅವರ ಸಾಮಾಜಿಕ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಕಾರ್ಯ ಆಗಬೇಕು, ಸಹಕಾರಿ ಕ್ಷೇತ್ರ ಇನ್ನಷ್ಟು ಬಲಗೊಳಿಸಲು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗುವ ಅಗತ್ಯವಿದೆ ಎಂದು ಯು.ಟಿ. ಖಾದರ್ ಹೇಳಿದರು.
ಗ್ರಾಮೀಣ ಜನರಿಗೆ ಶಕ್ತಿ- ಕಾಮತ್:ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಗ್ರಾಮೀಣ ಜನರಿಗೆ ಶಕ್ತಿ ನೀಡುವ ಕೆಲಸವನ್ನು ಸಹಕಾರ ಕ್ಷೇತ್ರದ ಮೂಲಕ ಮಾಡಿದ್ದಾರೆ. ಕೊರೋನಾದ ಸಂಕಷ್ಟದ ಸಮಯದಲ್ಲಿ ಜಿಲ್ಲಾಡಳಿತಕ್ಕೆ ಹೆಗಲು ಕೊಟ್ಟು 8-10 ಆಂಬ್ಯುಲೆನ್ಸ್‌ಗಳು, ಕೊರೋನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲು ಕಟ್ಟಡಗಳ ವ್ಯವಸ್ಥೆ, ಆಕ್ಸಿಜನ್ ಪ್ಲ್ಯಾಂಟ್‌ಗಳನ್ನು ಮಾಡುವ ಮೂಲಕ ಜನರ ಜೀವ ಉಳಿಸುವ ಪುಣ್ಯದ ಕೆಲಸ ಮಾಡಿದ್ದಾರೆ. ಅವರ ಸಾಮಾಜಿಕ ಸೇವೆ ಅನನ್ಯವಾದುದು ಎಂದು ಶ್ಲಾಘಿಸಿದರು.
77 ಫಲಾನುಭವಿಗಳಿಗೆ ಸಹಾಯ:ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಪ್ರಯುಕ್ತ ಸಮಾಜದ 77 ಮಂದಿ ಬಡ ಕುಟುಂಬಗಳಿಗೆ ವಿವಿಧ ಸೌಲಭ್ಯ, ಸಹಾಯಹಸ್ತ ವಿತರಿಸಲಾಯಿತು. ಡಾ.ರಾಜೇಂದ್ರ ಕುಮಾರ್ ಅವರನ್ನು ವೇದಿಕೆಯಲ್ಲಿದ್ದ ಗಣ್ಯರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಬಳಿಕ ಅವಿಭಜಿತ ಜಿಲ್ಲೆಯ ನೂರಾರು ಗಣ್ಯರು, ಸಹಕಾರಿಗಳು, ಅಭಿಮಾನಿಗಳು ಡಾ.ಎಂಎನ್‌ಆರ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಆಕಾಶ್ ಎಜುಕೇಶನ್ ಟ್ರಸ್ಟ್ ಬೆಂಗಳೂರು ಸಿಎಂಡಿ ಮುನಿರಾಜು, ಕಣಚೂರು ಎಜುಕೇಶನ್ ಟ್ರಸ್ಟ್ ಸಿಎಂಡಿ ಕಣಚೂರು ಮೋನು, ಸಹಕಾರ ಇಲಾಖೆ ಅಪರ ನಿಬಂಧಕ ಬಾಲಶೇಖರ್, ನಬಾರ್ಡ್ ಡಿಜಿಎಂ ಕೆ.ಜಗದೀಶ, ಅಪೆಕ್ಸ್ ಬ್ಯಾಂಕ್ ಬೆಂಗಳೂರು ಎಂಡಿ ದೇವರಾಜ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಎಂಡಿ ಲಿಂಗರಾಜು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮ್ಯಾನೆಜಿಂಗ್ ಟ್ರಸ್ಟಿ ಮೇಘರಾಜ್ ಜೈನ್, ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೋಟ್ಟು, ದೇವಿಪ್ರಸಾದ್ ಶೆಟ್ಟಿ ಬೆಳಪು, ಮಹೇಶ್ ಹೆಗ್ಡೆ ಎಂ., ಅಶೋಕ್ ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು, ಎಸ್.ಬಿ. ಜಯರಾಮ್ ರೈ, ರಾಜೇಶ್ ರಾವ್, ಜೈರಾಜ್ ಬಿ. ರೈ, ಎಸ್.ಎನ್. ಮನ್ಮಥ, ಕುಶಲಪ್ಪ ಗೌಡ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್., ಮಂಗಳೂರು ಕೆಎಂಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ, ಕಟೀಲು ದೇವಸ್ಥಾನದ ಮುಖ್ಯ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಮತ್ತಿತರರು ಇದ್ದರು.ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ನಿತೇಶ್ ಎಕ್ಕಾರು ನಿರೂಪಿಸಿದರು.
ಜನಸೇವೆಯ ಮೂಲಕ ನಿಮ್ಮವನಾಗಿ ಬಾಳುತ್ತೇನೆ: ಡಾ.ಎಂಎನ್ಆರ್ನಮ್ಮದು ಸಹಕಾರಿ ಪಕ್ಷ, ಜನರಿಗಾಗಿ ಕೆಲಸ ಮಾಡುತ್ತೇವೆ. ಇನ್ನು ಮುಂದೆ ಇರುವಷ್ಟು ದಿನವೂ ಜನಸೇವೆ ಮಾಡುತ್ತೇನೆ, ನಿಮ್ಮವನಾಗಿ ಬಾಳುತ್ತೇನೆ. ಜನರ ಕಣ್ಣೊರೆಸುವ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ತಮ್ಮ 77ನೇ ಹುಟ್ಟುಹಬ್ಬದ ಪ್ರಯುಕ್ತ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿರುವ 459 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಪೈಕಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ನಂ.1 ಸ್ಥಾನದಲ್ಲಿದೆ ಎಂದು ನಬಾರ್ಡ್‌ನವರೇ ತಿಳಿಸಿದ್ದಾರೆ. ಜನರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ವಿಲೀನಗೊಂಡು ಸಂಕುಚಿತಗೊಳ್ಳುತ್ತಿದ್ದರೆ, ಸಹಕಾರಿ ಕ್ಷೇತ್ರ ಮಾತ್ರ ಹಳ್ಳಿ ಹಳ್ಳಿಗಳಿಗೆ ತೆರಳಿ ಶಾಖೆಗಳನ್ನು ಮಾಡಿ ಜನರಿಗೆ ಸೇವೆ ನೀಡುತ್ತಿದೆ. ಜನರ ಜತೆಗೇ ಇದ್ದು ಅವರ ಕಷ್ಟಕ್ಕೆ ಹಗಲು ನೀಡುತ್ತಿದೆ ಎಂದರು.ಮಗಳ ಮದುವೆ- ಸಾಲ ಕೊಡಿ ಎಂದರೆ ವಾಣಿಜ್ಯ ಬ್ಯಾಂಕ್‌ಗಳು ಕೊಡಲ್ಲ. ಅದೇ ಸಹಕಾರಿ ಬ್ಯಾಂಕ್‌ಗಳಿಗೆ ಹೋದರೆ ಅತಿ ಕಡಿಮೆ ಅವಧಿಯಲ್ಲಿ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸ್ವಸಹಾಯ ಗುಂಪುಗಳಿಗೆ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವುದನ್ನು ಮೈಕ್ರೋ ಫೈನಾನ್ಸ್ ಎಂದು ಪರಿಗಣಿಸಬಾರದು ಎಂದು ಹೇಳಿದ ಡಾ.ರಾಜೇಂದ್ರ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ರಾಜ್ಯದ ಹೆಚ್ಚಿನ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುತ್ತಿದ್ದು, ಈ ಮೂಲಕ ರಾಜ್ಯದ ಇತರೆಡೆಯ ರೈತರಿಗೂ ಸಹಾಯ ಮಾಡುತ್ತಿದೆ ಎಂದು ಹೇಳಿದರು.