ಹರಪನಹಳ್ಳಿ: ಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಿ. ಈ ವಿಚಾರದಲ್ಲಿ ಬೇಜವಾಬ್ದಾರಿ ತೋರಬಾರದು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ಎಲ್ಲ ಗ್ರಾಪಂಗಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಮಾಹಿತಿಯನ್ನು ಪಿಡಿಒಗಳಿಗೆ ಕೇಳಿದಾಗ ಎಲ್ಲ ಮಾಹಿತಿ ಇರಬೇಕು. ನೀರಿನ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ವಹಿಸಬಾರದು. ಜನರು ಮಧ್ಯರಾತ್ರಿ ನೀರಿನ ಸಮಸ್ಯೆ ಬಗ್ಗೆ ಕೇಳಿದರೂ ಕ್ರಮ ಕೈಗೊಳ್ಳಬೇಕು. ಮಾಧ್ಯಮಗಳಲ್ಲಿ ಈ ಬಾರಿ ಅತೀ ಹೆಚ್ಚು ಬಿಸಿಲು ಶೀಘ್ರವೇ ಆರಂಭವಾಗಲಿದೆ ಎಂಬ ವರದಿಗಳು ಬಂದಿವೆ. ಇದರಿಂದ ನೀರಿನ ಹಾಹಾಕಾರ ಉಂಟಾಗಲಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿ ಕ್ರಮ ಕೈಗೊಂಡಿರಬೇಕು. ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸವಾಗಬಾರದು. ಸರ್ಕಾರಿ ಕೊಳವೆಬಾವಿಗಳು ಸಾಕಾಗದಿದ್ದರೆ ಖಾಸಗಿ ಕೊಳವೆಬಾವಿಗಳು, ಅಲ್ಲಿಯೂ ಲಭ್ಯವಾಗದಿದ್ದರೆ ನೀರಿನ ಟ್ಯಾಂಕರ್‌ಗಳ ಸಿದ್ಧತೆಯೂ ಮಾಡಿಕೊಂಡಿರಬೇಕು ಎಂದು ತಿಳಿಸಿದರು.
ಅಡವಿಹಳ್ಳಿ ಪಿಡಿಒ ರುಬಿನಾ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ 31 ಕೊಳವೆಬಾವಿಗಳಿವೆ. ಈ ಪೈಕಿ 15 ಬೋರ್‌ವೆಲ್‌ಗಳು ಉತ್ತಮವಾಗಿದ್ದು, 16 ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಈಗಾಗಲೇ ಅಡವಿಹಳ್ಳಿ-2, ದೇವರತಿಮ್ಲಾಪುರ-1, ಹೊಂಬಳಗಟ್ಟಿ-10 ಬೋರ್‌ವೆಲ್‌ಗಳಲ್ಲಿ ಅರ್ಧ ಇಂಚು ನೀರು ಕಡಿಮೆಯಾಗಿದೆ. ಈ ಗ್ರಾಮಗಳಲ್ಲಿ ರೈತರಿಂದ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದೇವರತಿಮ್ಲಾಪುರ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿ ಪೂರ್ಣಗೊಂಡಿಲ್ಲವೆಂದು ಪಿಡಿಒಗಳು ಸಭೆಗೆ ತಿಳಿಸಿದರು. ಇದಕ್ಕೆ ಇಲಾಖೆಯ ಎಇಇ ಮಂಜ್ಯಾ ನಾಯ್ಕ ವಿಚಾರಿಸಿದ ಶಾಸಕರು ಆದಷ್ಟು ಶೀಘ್ರ ಕ್ರಮ ಕೈಗೊಳ್ಳಿ ಎಂದರು.ಹಿರೇಮೇಗಳಗೆರೆ ಪಿಡಿಒ ಯಮುನನಾಯ್ಕ ಮಾತನಾಡಿ, ಗ್ರಾಪಂ ವ್ಯಾಪ್ತಿಯ 6 ಗ್ರಾಮಗಳಲ್ಲಿ 25 ಬೋರ್‌ವೆಲ್‌ಗಳು ಇದ್ದು, ಅದರಲ್ಲಿ 9 ಬೋರ್‌ವೆಲ್‌ಗಳಲ್ಲಿ ಒಂದು ಇಂಚು ನೀರು ಕಡಿಮೆಯಾಗಿದೆ. ರೈತರಿಂದ ಖಾಸಗಿ ಬೋರ್‌ವೆಲ್‌ಗಳನ್ನು ಪಡೆಯಲು ಅಗತ್ಯ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಅಣಜಿಗೆರೆ, ಹನುಮನಹಳ್ಳಿ, ಶ್ರೀಕಂಠಪುರ, ಹುಣಸಿಕಟ್ಟೆ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ. ರೈತರಿಂದ ಖಾಸಗಿ ಬೋರ್‌ವೆಲ್‌ಗಳನ್ನು ಪಡೆಯಲಾಗುವುದು ಎಂದು ಪಿಡಿಒ ಸಾಗರ್ ಉತ್ತರಿಸಿದರು.
ಕೂಲಹಳ್ಳಿಯಲ್ಲಿ ಗೋಣಿಬಸವೇಶ್ವರ ಜಾತ್ರೆ ಫೆ.27ರಂದು ಇದೆ. ಜಾತ್ರೆಗೆ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪಿಡಿಒಗೆ ಶಾಸಕರು ಸೂಚಿಸಿದರು.
ಸಹಾಯಕ ಆಯುಕ್ತ ಟಿ.ಸುರೇಶಕುಮಾರ್, ತಾಪಂ ಇಒ ಚಂದ್ರಶೇಖರ್ ವೈ.ಎಚ್., ತಹಸೀಲ್ದಾರ್ ಗಿರೀಶ್ ಬಾಬು, ಆರ್‌ಡಬ್ಲುಎಸ್ ಎಇಇ ಮಂಜ್ಯಾ ನಾಯ್ಕ, ಪಂ.ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣವರ್, ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ್ ಯು.ಎಚ್. ಇದ್ದರು.