ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ವಿ.ವಿ.ಯ ನಾಲ್ಕು ಘಟಕ ಕಾಲೇಜುಗಳ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಸ್ಥಗಿತಗೊಳಿಸಲಾಗುವುದು ಎಂದು ವಿ.ವಿ. ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟಕ ಕಾಲೇಜುಗಳಲ್ಲಿ ಕೆಲವೊಂದು ಪಿಜಿ ತರಗತಿಗಳನ್ನು ನುರಿತ ಪ್ರಾಧ್ಯಾಪಕರ ಕೊರತೆಯಿಂದ ನಡೆಸಲು ಕಷ್ಟ ಸಾಧ್ಯವಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣವಾಗಿ ತರಗತಿ ನಿಲ್ಲಿಸಲು ನಿರ್ಧರಿಸಲಾಗಿದೆ. ಇಂತಹ ಘಟಕ ಕಾಲೇಜುಗಳಲ್ಲಿನ ಸ್ನಾತಕೋತ್ತರ ಪದವಿಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಬದಲು ಮಂಗಳೂರು ವಿಶ್ವವಿದ್ಯಾಲಯದಲ್ಲಿಯೇ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಕಾಲೇಜಾಗಿ ಪರಿವರ್ತನೆಗೆ ಮನವಿ:ಈ ಘಟಕ ಕಾಲೇಜುಗಳ ಸ್ನಾತಕೋತ್ತರ ವಿಭಾಗಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇದೆ. ಅತಿಥಿ ಉಪನ್ಯಾಸಕರು ಉತ್ತಮವಾಗಿ ನಿರ್ವಹಣೆ ತೋರುತ್ತಿದ್ದರೂ, ಹಿರಿಯ ಅನುಭವಿ ಅಧ್ಯಾಪಕರ ಅಗತ್ಯ ಇದೆ. ಅದಕ್ಕಾಗಿ ಈ ಘಟಕ ಕಾಲೇಜುಗಳನ್ನು ಸರ್ಕಾರಿ ಕಾಲೇಜು ಆಗಿ ಪರಿವರ್ತಿಸಲು ಮನವಿ ಮಾಡಲಾಗಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಂಧ್ಯಾ ಕಾಲೇಜು, ಮಂಗಳ ಗಂಗೋತ್ರಿ, ಬನ್ನಡ್ಕ, ನೆಲ್ಯಾಡಿ ಸೇರಿ ನಾಲ್ಕು ಘಟಕ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಮಂಗಳೂರು ವಿವಿಯ ಸಂಧ್ಯಾ ಕಾಲೇಜಿಗೆ ಅಧಿಕೃತ ಸ್ಥಾನಮಾನವೇ ದೊರಕಿಲ್ಲ. ಅಲ್ಲಿ ಕಾರ್ಯ ನಿರ್ವಹಿಸುತ್ತಿರುವವವರು ಅತಿಥಿ ಉಪನ್ಯಾಸಕರು, ಪ್ರಾಂಶುಪಾಲರಾಗಿ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಿದ್ದಾರೆ. ಆದರೆ ಕಾಯಂ ಅಧ್ಯಾಪಕರನ್ನು ನೇಮಕ ಮಾಡದೆ, ಕಾಲೇಜಿಗೆ ಅಧಿಕೃತ ಸ್ಥಾನಮಾನ ಇಲ್ಲದೆ ಕಾಲೇಜು ನಡೆಸುವುದು ವಿದ್ಯಾರ್ಥಿಗಳಿಗೂ ಮಾಡುವ ಅನ್ಯಾಯವಾಗುತ್ತದೆ ಎಂದರು.ವಿಶ್ವವಿದ್ಯಾನಿಲಯ ಕ್ಯಾಂಪಸ್ ಒಳಗಿರುವ ಇನ್ನೂ ಬಳಕೆಯಾದ ಅಂತಾರಾಷ್ಟ್ರೀಯ ಹಾಸ್ಟೆಲ್ ಕಟ್ಟಡವನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಉಪಯೋಗಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.ಗುತ್ತಿಗೆದಾರರಿಗೆ ಪಾವತಿಗೆ ಹಣದ ಕೊರತೆ:
ಅಂತಾರಾಷ್ಟ್ರೀಯ ಹಾಸ್ಟೆಲ್ ಕಟ್ಟಡದ ಕಾಮಗಾರಿಯ ಗುತ್ತಿಗೆ ಪಾವತಿ ಸೇರಿದಂತೆ ಮಂಗಳೂರು ವಿವಿ ಕ್ಯಾಂಪಸ್‌ನ ವಿವಿಧ ಕಾಮಗಾರಿಗಳ ಸುಮಾರು 35 ರಿಂದ 40 ರಷ್ಟು ಗುತ್ತಿಗೆದಾರರಿಗೆ ಅಂದಾಜು 40 ಕೋಟಿ ರು. ಪಾವತಿಗೆ ಬಾಕಿ ಇದೆ. ಇದರಲ್ಲಿ ಅಂತಾರಾಷ್ಟ್ರೀಯ ಹಾಸ್ಟೆಲ್ ಕಟ್ಟಡದ ಬಾಕಿ ಸುಮಾರು 20 ಕೋಟಿ ರು.ಗಳು. ಮಂಗಳೂರು ವಿವಿ ಹಣಕಾಸಿನ ತೊಂದರೆ ಎದುರಿಸುತ್ತಿದೆ. ವಿವಿಯ ಶೇ. 72 ರಷ್ಟು ತಾತ್ಕಾಲಿಕ ಉದ್ಯೋಗಿಗಳಿಗೆ ವೇತನ ನೀಡಬೇಕು. ಕೆಲವು ಸಮಯದ ಹಿಂದೆ ಐದಾರು ತಿಂಗಳು ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಆದರೆ ಇದೀಗ ಪ್ರತಿ ತಿಂಗಳು ವೇತನ ಪಾವತಿ ಹಂತಕ್ಕೆ ಬಂದಿದ್ದೇವೆ. ಸರ್ಕಾರದಿಂದ ನಾವು 24 ಕೋಟಿ ರು. ಅನುದಾನ ಕೇಳಿದ್ದೆವು. ಅದು ಸಿಕ್ಕಿದ್ದರೆ ಒಂದಷ್ಟು ಗುತ್ತಿಗೆದಾರರ ಪಾವತಿಯನ್ನೂ ಮಾಡಬಹುದಿತ್ತು. ಆದರೆ ಸರ್ಕಾರದಿಂದ 11.30 ಕೋಟಿ ರು. ಅನುದಾನ ಬಂದಿರುವುದು. ಅದನ್ನು ಪರಿವರ್ತನೆ ಮಾಡುವಂತಿಲ್ಲ. ಮುಂದೆ ಸರ್ಕಾರದಿಂದ ಅನುದಾನದ ಭರವಸೆ ಇದೆ ಎಂದರು.ಗ್ರಾ.ಪಂ. ತೆರಿಗೆ ಹಂತದಲ್ಲಿ ಪಾವತಿ: ಸ್ಥಳೀಯ ಗ್ರಾಮ ಪಂಚಾಯತ್ ಮಂಗಳೂರು ವಿವಿ ಕ್ಯಾಂಪಸ್‌ನ ವಿಶ್ವ ಮಂಗಳ ಟ್ರಸ್ಟ್‌ಗೂ ತೆರಿಗೆ ವಿಧಿಸಿದೆ. ಅದು ವಿವಿ ಕ್ಯಾಂಪಸ್‌ನಲ್ಲಿ ಇದೆಯಾದರೂ ಅದರ ವ್ಯವಹಾರ ವಿವಿ ವ್ಯಾಪ್ತಿಗೊಳಪಟ್ಟಿಲ್ಲ. ಅದು ಟ್ರಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಅಂತಾರಾಷ್ಟ್ರೀಯ ಹಾಸ್ಟೆಲ್ ಕಟ್ಟಡವನ್ನು ವಾಣಿಜ್ಯ ಕಟ್ಟಡವಾಗಿ ಪರಿಗಣಿಸಲಾಗಿದೆ. ಆದರೆ ಆ ಕಟ್ಟಡ ಬಳಕೆಯಾಗದ ಸೊತ್ತಾಗಿದ್ದು, ಅದನ್ನು ಕಮರ್ಶಿಯಲ್ ಆಗಿ ಪರಿಗಣಿಸಿರಿರುವುದರಿಂದ ಅಧಿಕ ತೆರಿಗೆ ವಿಧಿಸಲಾಗಿದೆ. ಈ ಬಗ್ಗೆ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಬಳಕೆ ಆಗದ ಇವೆರಡೂ ಕಟ್ಟಡಗಳನ್ನು ಹೊರತುಪಡಿಸಿ ತೆರಿಗೆ ವಿಧಿಸುವಂತೆ ಕೋರಲಾಗಿದೆ. ಆ ಬಗ್ಗೆ ಕ್ರಮ ಕೈಗೊಂಡ ತಕ್ಷಣವೇ ಹಂತ ಹಂತವಾಗಿ ತೆರಿಗೆ ಪಾವತಿಸುವ ಒಡಂಬಡಿಕೆ ಮಾಡಲಾಗಿದೆ ಎಂದವರು ಹೇಳಿದರು.