ಸಂಜೀವಿನಿ ವಿದ್ಯಾಸಂಸ್ಥೆ ವಿಶಿಷ್ಟ ಸಂಪ್ರದಾಯಕ್ಕೆ ಸಾಕ್ಷಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಕ್ಕಳಲ್ಲಿ ಸಂಸ್ಕಾರ ತುಂಬಿ ಸದ್ಗುಣಗಳನ್ನು ರೂಢಿಸುವ ಸಲುವಾಗಿ ಮಾತಾ ಪಿತೃಗಳಿಗೆ ವಂದನೆ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಿದ್ದ ನಗರದ ಸಂಜೀವಿನಿ ವಿದ್ಯಾಸಂಸ್ಥೆ ವಿಶಿಷ್ಟ ಸಂಪ್ರದಾಯಕ್ಕೆ ಸಾಕ್ಷಿಯಾಯಿತು. ಮಕ್ಕಳು ವಿದ್ಯೆ ಕಲಿತರೆ ಸಾಲದು. ಮಾತೃ ದೇವೋ ಭವ ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎನ್ನುವ ಮೌಲ್ಯ ವನ್ನು ಆ ಪುಟ್ಟ ಮಕ್ಕಳ ಮನಸ್ಸಿನಲ್ಲಿ ಬಿತ್ತಿ ಮುಂದೆ ಅವರು ಸಂಸ್ಕಾರಯುತ ಜೀವನ ರೂಪಿಸಿ ಕೊಳ್ಳಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಜನ್ಮ ನೀಡಿರುವ ತಂದೆ-ತಾಯಿಗೆ ನಾವು ಜನ್ಮ ಜನ್ಮಾಂತರಕ್ಕೂ ಋಣಿಯಾಗಿರಬೇಕು. ಈ ಜ್ಞಾನ ಸಂಪದ ಬೋಧಿಸುವ ಸಲುವಾಗಿ ನಡೆದ ಈ ಕಾರ್ಯಕ್ರಮದಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ ಪಾದ ಪೂಜೆ ನೆರವೇರಿಸುವ ಮೂಲಕ ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಂದೆ-ತಾಯಿಯನ್ನು ಪೂಜಿಸು ಎಂಬ ಮಾತಿನಂತೆ ಕೃತಾರ್ಥಭಾವ ಹೊಂದಿದರು. ಜೊತೆಯಲ್ಲೇ ಪೋಷಕರಿಂದ ಪ್ರೀತಿಪೂರ್ವಕ ಆಶೀರ್ವಾದ ಪಡೆದರು. ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಿ ಕಲಿತ ವಿಷಯಗಳು ಪರೀಕ್ಷಾ ವೇಳೆ ಸ್ಮರಣೆಗೆ ಬರಲಿ ಎಂದು ಪ್ರಾರ್ಥಿಸಿ ತಾಯಿ ಸರಸ್ವತಿ ಪೂಜೆ ಸಹ ಇದೇ ಸಂದರ್ಭದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಅರ್ಚಕ ಕೃಷ್ಣಭಟ್ ಪೂಜಾ ವಿಧಿ - ವಿಧಾನಗಳನ್ನು ನೆರವೇರಿಸಿದರು. 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ವಿತರಿಸಲಾಯಿತು. ಸಂಸ್ಥೆ ಎಲ್ಲ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪ್ರಸಾದ ವಿನಿಯೋಗ ನಡೆಯಿತು. ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗೆ ನೆನಪಿನ ಕಾಣಿಕೆಯಾಗಿ ದೀಪ ಸಮರ್ಪಿಸಿದರು. ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಎಂ.ಪಿ.ಉಡುಪ, ಪ್ರಾಚಾರ್ಯೆ ಎಸ್.ಆರ್.ಹೇಮ, ಮುಖ್ಯ ಶಿಕ್ಷಕಿ ಕುಮುದಾ ಎಂ.ಕಿಣಿ ಭಾಗವಹಿಸಿದ್ದರು.

-- ಕೋಟ್‌---


ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಹೊರ ಬಂದು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಅಂಕಗಳನ್ನು ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಆಶಯ ವ್ಯಕ್ತಪಡಿಸಿದರು. ತಂದೆ-ತಾಯಿ ಸಹ ಮಕ್ಕಳ ಕನಸಿಗೆ ಬೆನ್ನೆಲುಬಾಗಿ ನಿಂತು, ಅವರ ಸಕಾರಾತ್ಮಕ ಆಕಾಂಕ್ಷೆಗಳಿಗೆ ನೀರೆರೆಯಬೇಕು.

- ಎಸ್.ಶಾಂತಕುಮಾರಿ, ಅಧ್ಯಕ್ಷೆ, ಸಂಜೀವಿನಿ ವಿದ್ಯಾಸಂಸ್ಥೆಫೋಟೋ----ಸಂಜೀವಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮಾತಾ ಪಿತೃಗಳ ಪಾದಪೂಜೆ ಮಾಡಿದರು.