ಮಂಗಳೂರು ವಿಶ್ವವಿದ್ಯಾನಿಲಯ 2026-27ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಗೋವಾ ಮಾದರಿಯಲ್ಲಿ ‘ಸ್ಕೂಲ್ ಸಿಸ್ಟಮ್’ ಮಾದರಿಯ ಪಠ್ಯಕ್ರಮ ಪರಿಚಯಲು ಚಿಂತನೆ ನಡೆಸಿದೆ.
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ 2026-27ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಗೋವಾ ಮಾದರಿಯಲ್ಲಿ ‘ಸ್ಕೂಲ್ ಸಿಸ್ಟಮ್’ ಮಾದರಿಯ ಪಠ್ಯಕ್ರಮ ಪರಿಚಯಲು ಚಿಂತನೆ ನಡೆಸಿದೆ. ಈ ಸಂಬಂಧ ವಿವಿಯ ನಿಯೋಗ ಶೀಘ್ರವೇ ಗೋವಾಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ. ಈಗಾಗಲೇ ಹೊಸ ಪಠ್ಯಕ್ರಮ ರಚನೆಯ ಚಟುವಟಿಕೆಗಳು ಹಿರಿಯ ಡೀನ್‌ಗಳ ಉಸ್ತುವಾರಿಯಲ್ಲಿ ಪ್ರಾರಂಭವಾಗಿವೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದ್ದಾರೆ.ಮಂಗಳೂರು ವಿವಿ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಮಂಗಳವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಈ ವಿಚಾರ ತಿಳಿಸಿದರು. ಮಂಗಳೂರು ವಿವಿಯಲ್ಲಿ ಕಾಯಂ ಪ್ರಾಧ್ಯಾಪಕರ ಕೊರತೆ ಇದೆ. ಪ್ರಸಕ್ತ ಹೊಸ ನೇಮಕಾತಿ ಆಗುತ್ತಿಲ್ಲ. ಎಲ್ಲ ವಿದ್ಯಾರ್ಥಿಗಳಿಗೆ ಹಿರಿಯ ಪ್ರಾಧ್ಯಾಪಕರ ಬೋಧನೆ ಲಭ್ಯವಾಗಬೇಕು ಎಂಬ ಹಿನ್ನೆಲೆಯಲ್ಲಿ ವಾಣಿಜ್ಯ, ರಸಾಯನ ವಿಜ್ಞಾನ, ಮಾನವಿಕ ವಿಭಾಗ, ಜೀವ ವಿಜ್ಞಾನ ಹೀಗೆ ನಾಲ್ಕು ಮುಖ್ಯ ವಿಭಾಗಗಳನ್ನು ಮಾಡಿ, ಅವುಗಳಿಗೆ ಸಂಬಂಧಿತ ಉಪ ವಿಷಯಗಳನ್ನು ಆಯಾ ವಿಭಾಗಕ್ಕೆ ಜೋಡಿಸಿ ಅದಕ್ಕೆ ಪ್ರತ್ಯೇಕ ಪಠ್ಯಕ್ರಮ ರೂಪಿಸಲಾಗುವುದು ಎಂದರು.
‘ಪೆನ್ಶನ್ ಟ್ರಸ್ಟ್ ಫಂಡ್’ ಸ್ಥಾಪನೆ: ಭವಿಷ್ಯದಲ್ಲಿ ನಿವೃತ್ತರಿಗೆ ಪಿಂಚಣಿಯನ್ನು ನಿಯಮಿತವಾಗಿ ಒದಗಿಸುವ ಉದ್ದೇಶದಿಂದ ಪೆನ್ಶನ್ ಟ್ರಸ್ಟ್ ಫಂಡ್ (ಪಿಇಎಸ್) ಸ್ಥಾಪಿಸಲಾಗಿದೆ. ಆರಂಭದಲ್ಲಿ 50 ಲಕ್ಷ ರು. ಸಂಗ್ರಹಿಸಲಾಗಿದೆ. ಕರ್ನಾಟಕ ನೋಂದಣಿ ಕಾಯ್ದೆ ಅಡಿಯಲ್ಲಿ ನೋಂದಾಯಿಸಿರುವ ಟ್ರಸ್ಟ್‌ಗೆ ಕುಲಪತಿ ಅಧ್ಯಕ್ಷರಾಗಿದ್ದು, 11 ಮಂದಿ ಸದಸ್ಯರು ಇರುತ್ತಾರೆ. ವಿವಿಯಲ್ಲಿ ಹಣ ಕ್ರೋಢೀಕರಣ ಆದಾಗ ಹೆಚ್ಚುವರಿ ಮೊತ್ತವನ್ನು ಈ ಖಾತೆಗೆ ವರ್ಗಾಯಿಸಿ ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಮುಂದೆ ಪಿಂಚಣಿ ಪಾವತಿಗೆ ಅನುಕೂಲವಾಗಲಿದೆ ಎಂದರು. ಪ್ರಸ್ತುತ ನಿವೃತ್ತರಿಗೆ ಮಾಸಿಕ ಪಿಂಚಣಿ ನೀಡಲು ಸರ್ಕಾರದಿಂದ 1.3 ಕೋಟಿ ರು. ಅನುದಾನ ದೊರೆಯುತ್ತದೆ. ಉಳಿದ 1.4 ಕೋಟಿ ರು. ಮೊತ್ತವನ್ನು ವಿವಿಯ ಆಂತರಿಕ ಸಂಪನ್ಮೂಲ ನಿಧಿಯಿಂದ ಭರಿಸಬೇಕು. ಭವಿಷ್ಯದಲ್ಲಿ ವಿವಿ ಮೇಲಿನ ಆರ್ಥಿಕ ಹೊರೆ ತಗ್ಗಿಸುವ ಪರಿಕಲ್ಪನೆಯಲ್ಲಿ ರಚಿಸಿರುವ ಟ್ರಸ್ಟ್ ಬಗ್ಗೆ ಸರ್ಕಾರದಿಂದಲೂ ಪ್ರಶಂಸೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.
ಅರ್ಧಕ್ಕೇ ನಿಂತ ಬೆಳಪು ಕೇಂದ್ರ:ಬೆಳಪುವಿನಲ್ಲಿ ಮಂಗಳೂರು ವಿವಿಯ ಅತ್ಯಾಧುನಿಕ ಸಂಶೋಧನ ಕೇಂದ್ರ ಕಟ್ಟಡ ಅರ್ಧಕ್ಕೇ ನಿಂತಿದ್ದು, ಅದನ್ನು ಪೂರ್ಣಗೊಳಿಸಲು ಹಣಕಾಸು ಕೊರತೆಯಾಗಿದೆ. ಹಾಗಾಗಿ ಅದನ್ನು ಸರ್ಕಾರವೇ ಸ್ವಾಧೀನಪಡಿಸಿಕೊಂಡು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಾಡಬಹುದು ಎಂದು ಪತ್ರ ಬರೆಯಲಾಗಿದೆ ಎಂದು ಪ್ರೊ.ಪಿ.ಎಲ್. ಧರ್ಮ ತಿಳಿಸಿದರು.
ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಕುಲಸಚಿವ ಗಣೇಶ್ ಸಂಜೀವ ಇದ್ದರು.
68.34 ಕೋಟಿ ರು. ಕೊರತೆ ಬಜೆಟ್ ಮಂಡನೆ
ಮಂಗಳೂರು ವಿಶ್ವವಿದ್ಯಾಲಯ 2026-27ನೇ ಸಾಲಿನಲ್ಲಿ ಯೋಜನೆಯ ಆದಾಯ 54.90 ಕೋಟಿ ರು. ಅಂದಾಜಿಸಲಾಗಿದ್ದು, 95.71 ಕೋಟಿ ರು. ವೆಚ್ಚ ನಿರೀಕ್ಷಿಸಲಾಗಿದೆ. ಒಟ್ಟು 194.09 ಕೋಟಿ ರು. ಸ್ವೀಕೃತಿ ಅಂದಾಜಿಸಲಾಗಿದ್ದು, 262.43 ಕೋಟಿ ರು. ಖರ್ಚು ಅಂದಾಜಿಸಲಾಗಿದೆ. 68.34 ಕೋಟಿ ರು. ಆದಾಯ ಕೊರತೆ ಕಾಣಿಸಲಾಗಿದೆ.
ಮಂಗಳೂರು ವಿವಿ ಡೆಪ್ಯೂಟಿ ರಿಜಿಸ್ಟ್ರಾರ್ ಲಲಿತಾ ಅವರು ಬಜೆಟ್ ಮಂಡಿಸಿದರು. ಹಾಲಿ ಶೈಕ್ಷಣಿಕ ಸಾಲಿನಲ್ಲಿ ಪಿಎಂ-ಉಷಾ ಯೋಜನೆಯಡಿ 19.95 ಕೋಟಿ ರು. ಬಿಡುಗಡೆಯಾಗಿದೆ. ಬ್ರಹ್ಮಶ್ರೀ ನಾರಾಯಣಗುರು ಪೀಠಕ್ಕೆ ಸರ್ಕಾರ 1 ಕೋಟಿ ರು. ಬಿಡುಗಡೆ ಮಾಡಿದೆ. 2024-25ನೇ ಸಾಲಿನಲ್ಲಿ 0.67 ಕೋಟಿ ರು. ಅಭಿವೃದ್ಧಿ ಅನುದಾನಕ್ಕೆ ವೆಚ್ಚವಾಗಿದೆ. ವಿವಿಯ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಮಾತ್ರ ಬಳಸಿಕೊಳ್ಳಲು ತೀರ್ಮಾನಿಸಲಾಗಿದ್ದು, ವಿವಿಯ ಆಂತರಿಕ ಸಂಪನ್ಮೂಲದಿಂದ ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ ಎಂದರು.
ಹಾಲಿ ಸಾಲಿನಲ್ಲಿ ಯೋಜನೇತರ ಆದಾಯ 133.42 ಕೋಟಿ ರು. ಆಗಿದ್ದು, ಈ ಸಾಲಿನಲ್ಲಿ 3.54 ಕೋಟಿ ರು. ಹೆಚ್ಚಳವಾಗಿದೆ. ಯೋಜನೇತರದಲ್ಲಿ 163.64 ಕೋಟಿ ರು. ಖರ್ಚು ಅಂದಾಜಿಸಲಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ 0.50 ಕೋಟಿ ರು. ಕಡಿಮೆಯಾಗಿದೆ. ಯೋಜನೆಯ ಆದಾಯದಲ್ಲಿ ಕಳೆದ ಸಾಲಿಗೆ ಹೋಲಿಸಿದರೆ 26.23 ಕೋಟಿ ರು. ಹೆಚ್ಚಾಗಿದೆ. ಕೊರತೆಯನ್ನು ಗಮನಿಸಿದರೆ, ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ 31.36 ಕೋಟಿ ರು. ಕೊರತೆ ಹೆಚ್ಚಾಗಿದೆ ಎಂದರು.
ಪಿಂಚಣಿ ಅನುದಾನ ನಿರೀಕ್ಷೆ: ಹಾಲಿ ಸಾಲಿಗೆ ಸರ್ಕಾರದಿಂದ 48.52 ಕೋಟಿ ರು. ಪಿಂಚಣಿ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ ಸರ್ಕಾರ 20 ಕೋಟಿ ರು. ಅನುದಾನ ಮಾತ್ರ ಬಿಡುಗಡೆ ಮಾಡಿದೆ. ವಿವಿಗೆ 28.52 ಕೋಟಿ ರು. ಅನುದಾನ ಕೊರತೆ ಆಗಿದೆ. ವಿವಿಯಲ್ಲಿ ಪ್ರಸ್ತುತ 447 ಮಂದಿ ಪಿಂಚಣಿದಾರರಿದ್ದು, 362 ಮಂದಿ ಪಿಂಚಣಿದಾರರು ಹಾಗೂ 85 ಮಂದಿ ಕುಟುಂಬ ಪಿಂಚಣಿದಾರರಿದ್ದಾರೆ. ಇವರಿಗೆ ಒಟ್ಟು 31.20 ಕೋಟಿ ರು. ಮೊತ್ತವನ್ನು ಪಿಂಚಣಿಗಾಗಿ ವ್ಯಯಿಸಲಾಗುತ್ತಿದೆ. ಈ ಸಾಲಿನಲ್ಲಿ 18 ಮಂದಿ ಸಿಬ್ಬಂದಿ ವಯೋನಿವೃತ್ತಿ ಹೊಂದಲಿದ್ದು, ನಿವೃತ್ತಿ ಸೌಲಭ್ಯ ಮತ್ತು ಗಳಿಕೆ ರಜೆ ನಗದೀಕರಣ ಪಾವತಿಸಲು 17.32 ಕೋಟಿ ರು. ಬೇಕಾಗಿದೆ. ಇದೇ ಸಾಲಿನಲ್ಲಿ ವಿಶ್ರಾಂತಿ ವೇತನಕ್ಕಾಗಿ 48.52 ಕೋಟಿ ರು.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ 20 ಕೋಟಿ ರು. ಮಾತ್ರ ಮಂಜೂರು ಮಾಡಲಾಗಿದೆ ಎಂದರು. ಮಂಜೂರು ಮಾಡಲು ಬಾಕಿ ಇರುವ 28.52 ಕೋಟಿ ಗಳನ್ನು ವಿಶ್ರಾಂತಿ ವೇತನಕ್ಕಾಗಿ ಮಂಜೂರು ಮಾಡಲು ಮರು ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಅಭಿವೃದ್ಧಿ ಯೋಜನೆಯಡಿ 42.94 ಕೋಟಿ ರು. ಬಿಡುಗಡೆಯಾಗದಿದ್ದರೆ ಈ ಪ್ರಸ್ತಾವನೆ ಕೈಗೆತ್ತಿಕೊಳ್ಳಲು ಸಾಧ್ಯವಾಗದು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.