ಮಂಗಳೂರು: ಕಲಾವಿದರಿಗೆ ವೇದಿಕೆ ಕಲ್ಪಿಸುವುದು ಶ್ರೇಷ್ಠ ಕಾರ್ಯ ಎಂದು ಖ್ಯಾತ ಭರತನಾಟ್ಯ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಹೇಳಿದರು.ಅವರು ಡೊಂಗರಕೇರಿಯಲ್ಲಿರುವ ಕೆನರಾ ಹಿರಿಯ ಪ್ರಾರ್ಥಮಿಕ ಶಾಲೆಯ ಶ್ರೀ ಕೃಷ್ಣ ಮಂದಿರದ ವೇದಿಕೆಯಲ್ಲಿ ನಿತ್ಯ ಕಲಾ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ವಿದ್ವಾನ್ ಉಪೇಂದ್ರ ಮಲ್ಯ ಮಾತನಾಡಿ, ನಿತ್ಯ ಕಲಾ ವೇದಿಕೆಯಲ್ಲಿ ಕಲಾ ಪ್ರದರ್ಶನ ನೀಡಲು ಹೆಚ್ಚೆಚ್ಚು ಮಕ್ಕಳು ಉತ್ಸಾಹ ತೋರುವಂತಾಗಲಿ ಎಂದರು.
ಕೆನರಾ ಕಲ್ಚರಲ್ ಅಕಾಡೆಮಿ ಸಂಚಾಲಕ ಮಂಗಲ್ಪಾಡಿ ನರೇಶ್ ಶೆಣೈ ಮಾತನಾಡಿ, ಪ್ರತಿ ದಿನ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ನೃತ್ಯ, ಸಂಗೀತ, ಗಾಯನ, ಲಲಿತಕಲೆ ಸಹಿತ ಸಾಂಪ್ರದಾಯಿಕ ಕಲಾಪ್ರದರ್ಶನ ನೀಡಲು ಈ ವೇದಿಕೆ ರಚನೆಯಾಗಿದೆ. ನಾಡಿನ ಯಾವುದೇ ಭಾಗದ, ಯಾವುದೇ ಶಿಕ್ಷಣ ಸಂಸ್ಥೆಯ ಮಕ್ಕಳು ಇಲ್ಲಿ ಕಲಾಪ್ರದರ್ಶನ ನೀಡಲು ಸುಸಜ್ಜಿತ ಧ್ವನಿ, ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.ಪ್ರತಿ ದಿನದ ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಸ್ವಾಗತವಿದೆ. ಕೆನರಾ ಯೂಟ್ಯೂಬ್ ವಾಹಿನಿಯಲ್ಲಿ ಕಾರ್ಯಕ್ರಮ ನೇರಪ್ರಸಾರವಿರುತ್ತದೆ. ಕೆನರಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮ ಭವಿಷ್ಯದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುವಂತಾಗಲಿ. ಅದಕ್ಕೆ ಎಲ್ಲಾ ಕಲಾಗುರುಗಳು, ಮಕ್ಕಳ ಪೋಷಕರು ಸಹಕರಿಸಬೇಕು. ಕಲಾ ಪ್ರದರ್ಶನ ನೀಡುವ ಮಕ್ಕಳು ಮುಂಚಿತವಾಗಿ ಹೆಸರು ನೋಂದಾಯಿಸಬೇಕು ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಅನನ್ಯ ರಂಜನಿ ಭರತನಾಟ್ಯ ಪ್ರದರ್ಶನ ನೀಡಿದರು.