ಭಾರಿ ಮಳೆಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೇರೇಬೈಲು ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಒಂದು ಸಂಪೂರ್ಣ ಹಾಗೂ 2 ಭಾಗಶಃ ಮನೆಹಾನಿಯಾಗಿರುತ್ತದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರೀ ಮಳೆಗೆ ಸೋಮವಾರ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ವಿವಿಧೆಡೆ ಹಾನಿ ಸಂಭವಿಸಿದೆ.ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ರಸ್ತೆ- ಬಜಪೆಯಿಂದ ಅದ್ಯಪಾಡಿಗೆ ಹೋಗುವ ಬೈಲು ಬೀಡು ರಸ್ತೆಯಲ್ಲಿ ಮಳೆನೀರು ಇಂಗಿ ರಸ್ತೆಯಲ್ಲಿ ಬಿರುಕು ಮೂಡಿದ್ದು, ರಸ್ತೆಯಲ್ಲಿ ಉಬ್ಬುತಗ್ಗುಗಳಾಗಿರುವುದರಿಂದ ಪಂಚಾಯತ್ ರಾಜ್ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಈ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಮೇರ್ಲಪದವು- ಅಡ್ಯಾರ್ ಪದವು ಕಾಂಕ್ರಿಟ್ ರಸ್ತೆಯ ತಳಭಾಗದಲ್ಲಿ ಮಣ್ಣು ಕೊಚ್ಚಿಹೋಗಿದ್ದು, ರಸ್ತೆಯಲ್ಲಿ ಬಿರುಕು ಮೂಡಿ ರಸ್ತೆ ಕುಸಿಯುವ ಸಂಭವವಿರುವುದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇಲಂತಬೆಟ್ಟು ಗ್ರಾಮದಲ್ಲಿ ನಂದಿನಿ ನದಿ ನೀರು ತುಂಬಿ ಹರಿಯುತ್ತಿರುವುದರಿಂದ ಕೃತಕ ನೆರೆ ಉಂಟಾಗಿ ಅಗ್ನಿ ಶಾಮಕ ದಳದ ಸಹಕಾರದೊಂದಿಗೆ ಮೂರು ಕುಟುಂಬದವರನ್ನು ಸ್ಥಳಾಂತರಗೊಳಿಸಲಾಗಿದೆ. ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಮ್ಮಂಜೂರು ಗ್ರಾಮದಲ್ಲಿ ಕೃತಕ ನೆರೆ ಉಂಟಾಗಿ ಹಲವಾರು ಮನೆಗಳಿಗೆ ಮಳೆನೀರು ನುಗ್ಗಿರುತ್ತದೆ.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೇರೇಬೈಲು ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಒಂದು ಸಂಪೂರ್ಣ ಹಾಗೂ 2 ಭಾಗಶಃ ಮನೆಹಾನಿಯಾಗಿರುತ್ತದೆ. ಮಂಗಳೂರು ತಾಲೂಕು ವ್ಯಾಪ್ತಿಯ ಅತ್ತಾವರ, ಅರ್ಕುಳ, ಮೂಳೂರು ಹಾಗೂ ಪಡುಕೋಡಿ ಗ್ರಾಮದಲ್ಲಿ ತಲಾ ಒಂದರಂತೆ ಒಟ್ಟು ನಾಲ್ಕು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮೂಳೂರು ಗ್ರಾಮದ ವಿಕಾಸ ನಗರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಭಾರೀ ಮಳೆಯಿಂದಾಗಿ ಮೂರು ಮನೆಗಳಿಗೆ ನೀರು ನುಗ್ಗಿದೆ. ಕಣ್ಣೂರು ಗ್ರಾಮದ ದಯಂಬು ಎಂಬಲ್ಲಿ ಗುಡ್ಡ ಕುಸಿತದಿಂದಾಗಿ ಮಳೆನೀರು ಹಾಗೂ ಮಣ್ಣು ಮನೆಗೆ ನುಗ್ಗಿದ್ದರಿಂದ ಎರಡು ಕುಟುಂಬಗಳನ್ನು ಸ್ಥಳಾಂತರಗೊಳಿಸಲಾಗಿದೆ. ಇಲ್ಲಿನ ಎಸ್‌ಎಚ್ ನಗರದಲ್ಲಿ ಮೈಮೂನ ಎಂಬವರ ಮನೆ ಗುಡ್ಡ ಕುಸಿತದಿಂದ ಸಂಪೂರ್ಣ ಹಾನಿಗೀಡಾಗಿದೆ. ಮನೆಯವರು ಮದುವೆ ಸಮಾರಂಭಕ್ಕೆ ತೆರಳಿದ ಸಂದರ್ಭ ಗುಡ್ಡ ಕುಸಿದು ಮನೆಗೆ ಬಿದ್ದಿತ್ತು. ಸಂಜೆ ವೇಳೆಗೆ ಭಾರಿ ಮಳೆಯಾದ ಕಾರಣ ಮತ್ತೆ ನಾಲ್ಕು ಮನೆಗಳು ಅಪಾಯದ ಅಂಚಿನಲ್ಲಿವೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಜೀವಹಾನಿ ಹಾಗೂ ಜಾನುವಾರು ಹಾನಿಯಾಗಿಲ್ಲ ಎಂದು ಮಂಗಳೂರು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ನೇತ್ರಾವತಿ ನದಿ 6.2 ಮೀಟರ್, ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿ 27.30 ಮೀಟರ್‌ನಲ್ಲಿ ಹರಿಯುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.