ಮಂಗೇಶ ಮೇಯರ್‌, ವಾಣಿ ಜೋಶಿ ಉಪಮೇಯರ್‌

KannadaprabhaNewsNetwork | Published : Mar 16, 2025 1:45 AM

ಸಾರಾಂಶ

ನಿರೀಕ್ಷೆಯಂತೆಯೇ ಬೆಳಗಾವಿ ಮಹಾನಗರ ಪಾಲಿಕೆಯನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಪಾಲಿಕೆಯ 23ನೇ ಅವಧಿಗೆ ಬಿಜೆಪಿಯ ಮಂಗೇಶ ಪವಾರ ಮೇಯರ್‌ ಆಗಿ ಮತ್ತು ವಾಣಿ ವಿಲಾಸ ಜೋಶಿ ಉಪಮೇಯರ್‌ ಆಗಿ ಚುನಾಯಿತರಾದರು. ಈ ಮೂಲಕ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತದಲ್ಲಿ ಬಿಜೆಪಿ ಮತ್ತೆ ಬಿಗಿ ಹಿಡಿತ ಸಾಧಿಸಿತು.ಪಾಲಿಕೆಯ ಸಭಾಭವನದಲ್ಲಿ ಶನಿವಾರ ಮೇಯರ್‌, ಉಪಮೇಯರ್‌ ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಿರೀಕ್ಷೆಯಂತೆಯೇ ಬೆಳಗಾವಿ ಮಹಾನಗರ ಪಾಲಿಕೆಯನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಪಾಲಿಕೆಯ 23ನೇ ಅವಧಿಗೆ ಬಿಜೆಪಿಯ ಮಂಗೇಶ ಪವಾರ ಮೇಯರ್‌ ಆಗಿ ಮತ್ತು ವಾಣಿ ವಿಲಾಸ ಜೋಶಿ ಉಪಮೇಯರ್‌ ಆಗಿ ಚುನಾಯಿತರಾದರು. ಈ ಮೂಲಕ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತದಲ್ಲಿ ಬಿಜೆಪಿ ಮತ್ತೆ ಬಿಗಿ ಹಿಡಿತ ಸಾಧಿಸಿತು.ಪಾಲಿಕೆಯ ಸಭಾಭವನದಲ್ಲಿ ಶನಿವಾರ ಮೇಯರ್‌, ಉಪಮೇಯರ್‌ ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆ ನಡೆಯಿತು. ಮೇಯರ್‌ ಸ್ಥಾನ ಸಾಮಾನ್ಯ ಮತ್ತು ಉಪಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 40 ಸದಸ್ಯರನ್ನು ಹೊಂದಿರುವ ಬಿಜೆಪಿ ಮತ್ತೆ ಮೇಯರ್, ಉಪಮೇಯರ್‌ ಎರಡೂ ಸ್ಥಾನಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ವಾರ್ಡ್ ನಂ.41ರ ಸದಸ್ಯ ಮಂಗೇಶ ಪವಾರ ಮರಾಠಿ ಭಾಷಿಕರಾಗಿದ್ದರೆ, 43ನೇ ವಾರ್ಡ್ ಸದಸ್ಯೆ ವಾಣಿ ವಿಲಾಸ ಜೋಶಿ ಕನ್ನಡತಿ ಆಗಿದ್ದಾರೆ.

1 ಗಂಟೆಗೆ ಆರಂಭವಾದ ಚುನಾವಣೆ ಪ್ರಕ್ರಿಯೆ:

ಮಧ್ಯಾಹ್ನ 1 ಗಂಟೆಗೆ ಪಾಲಿಕೆ ಸಭಾಭವನದಲ್ಲಿ ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆನ್ನವರ ಅವರು ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಮತದಾರರು ಕೈ ಎತ್ತುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಫಲಿತಾಂಶವನ್ನು ಚುನಾವಣಾಧಿಕಾರಿ ಘೋಷಣೆ ಮಾಡುತ್ತಿದ್ದಂತೆಯೇ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

ಮೇಯರ್‌ ಸ್ಥಾನಕ್ಕೆ ಬಿಜೆಪಿಯ ಮಂಗೇಶ ಪವಾರ, ರಾಜು ಭಾತಖಾಂಡೆ, ಎಂಇಎಸ್‌ ಬೆಂಬಲಿತ ಸದಸ್ಯ ಬಸವರಾಜ ಮೋದಗೇಕರ, ಎಐಎಂಐಎಂನ ಶಾಹೀದಖಾನ್‌ ಪಠಾಣ ತಲಾ 2 ನಾಮಪತ್ರ ಸಲ್ಲಿಸಿದರು. ಆದರೆ, ಕಾಂಗ್ರೆಸ್‌ನಿಂದ ಯಾವ ಸದಸ್ಯರೂ ನಾಮಪತ್ರ ಸಲ್ಲಿಸಲಿಲ್ಲ. ರಾಜು ಭಾತಕಾಂಡೆ ಮತ್ತು ಶಾಹೀದಖಾನ್‌ ಪಠಾಣ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದರು. ಚುನಾವಣಾ ಕಣದಲ್ಲಿ ಅಂತಿಮವಾಗಿ ಮಂಗೇಶ ಪವಾರ ಮತ್ತು ಬಸವರಾಜ ಮೋದಗೇಕರ ಉಳಿದ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಬಿಜೆಪಿಯ ಮಂಗೇಶ ಪವಾರ 40 ಮತಗಳನ್ನು ಪಡೆದು ಚುನಾಯಿತಗೊಂಡರು. ಅವರ ಪ್ರತಿಸ್ಪರ್ಧಿ ಬಸವರಾಜ ಮೊದಗೇಕರ್ 20 ಮತಗಳನ್ನು ಪಡೆದು ಸೋಲುಂಡರು.ಉಪಮೇಯರ್‌ ಸ್ಥಾನಕ್ಕೆ ಆಯ್ಕೆ ಬಯಸಿ ಬಿಜೆಪಿಯ ವಾಣಿ ವಿಲಾಸ ಜೋಶಿ, ದೀಪಾಲಿ ಟೋಪಗಿ, ಖುರ್ಷಿದ ಮುಲ್ಲಾ ಮತ್ತು ಲಕ್ಷ್ಮೀ ಲೋಕರಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಆದರೆ, ದೀಪಾಲಿ ಟೋಪಗಿ, ಖುರ್ಷಿದ ಮುಲ್ಲಾ ಅವರು ತಮ್ಮ ಉಮೇದುವಾರಿಕೆ ಹಿಂತೆಗೆದುಕೊಂಡರು. ಚುನಾವಣಾ ಕಣದಲ್ಲಿ ಅಂತಿಮವಾಗಿ ವಾಣಿ ಜೋಶಿ ಮತ್ತು ಲಕ್ಷ್ಮೀ ಲೋಕರಿ ಉಳಿದರು. ವಾಣಿ ಜೋಶಿ ಅವರು 40 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಲಕ್ಷ್ಮೀ ಲೋಕರಿ 20 ಮತಗಳನ್ನು ಪಡೆದರು. ಅತೀ ಹೆಚ್ಚು ಮತ ಪಡೆದ ವಾಣಿ ಜೋಶಿ ಅವರು ಉಪಮೇಯರ್‌ ಆಗಿ ಚುನಾಯಿತಗೊಂಡರು ಎಂದು ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆನ್ನವರ ಅವರು ಘೋಷಿಸಿದರು.ಪಾಲಿಕೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ 58. ಇದರ ಜೊತೆಗೆ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಕೂಡ ಪಾಲಿಕೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಹಾಗಾಗಿ ಪಾಲಿಕೆಯ ಮತದಾರರ ಸಂಖ್ಯೆ ಒಟ್ಟು 65 ಇದೆ. ಶನಿವಾರ ನಡೆದ ಮೇಯರ್‌, ಉಪಮೇಯರ್‌ ಚುನಾವಣಾ ಪ್ರಕ್ರಿಯೆಯಲ್ಲಿ 60 ಜನ ಸದಸ್ಯರು ಹಾಜರಾಗಿದ್ದರು. ಈ ಪೈಕಿ 40 ಮತಗಳು ಬಿಜೆಪಿ ಪರವಾಗಿದ್ದವು.ಐವರು ಗೈರು:

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮತದಾನದ ಹಕ್ಕನ್ನು ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಬೆಳಗಾವಿ ಉತ್ತರ ಶಾಸಕ ಆಸೀಫ್‌ ಸೇಠ್‌, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪಾಲಿಕೆ ಸದಸ್ಯ ಅಜೀಂ ಪಟವೇಗಾರ ಅವರು ಗೈರಾಗಿದ್ದರು.ಕಿಂಗ್‌ ಮೇಕರ್‌ ಆದ ಅಭಯ ಪಾಟೀಲ:

ಬೆಳಗಾವಿ ಮಹಾನಗರ ಪಾಲಿಕೆಗೆ 23ನೇ ಅವಧಿಗೆ ನಡೆದ ಮೇಯರ್‌, ಉಪಮೇಯರ್‌ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಕಿಂಗ್‌ಮೇಕರ್‌ ಆಗಿ ಹೊರಹೊಮ್ಮಿದ್ದಾರೆ. ಈ ಬಾರಿಯ ಮೇಯರ್‌, ಉಪಮೇಯರ್‌ ಸ್ಥಾನ ಯಾರು ಅಲಂಕರಿಸುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿತ್ತು. ಆಡಳಿತಾರೂಢ ಬಿಜೆಪಿಯಲ್ಲೇ ಮೇಯರ್‌, ಉಪಮೇಯರ್‌ ಸ್ಥಾನಕ್ಕೆ ಸಹಜವಾಗಿಯೇ ಆಕಾಂಕ್ಷಿಗಳಿದ್ದರು. ಎಲ್ಲ ಆಕಾಂಕ್ಷಿಗಳನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆಯೂ ಶಾಸಕ ಅಭಯ ಪಾಟೀಲ ಅವರ ಪಾತ್ರ ಪ್ರಮುಖವಾಗಿದೆ. ಮೇಯರ್‌, ಉಪಮೇಯರ್‌ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆಗೂ ಕಸರತ್ತು ನಡೆದಿತ್ತು. ಆದರೆ, ಕಣದಲ್ಲಿ ಬೇರೆ ಅಭ್ಯರ್ಥಿಗಳು ಉಳಿದಿರುವುದರಿಂದ ಅನಿವಾರ್ಯವಾಗಿ ಚುನಾವಣೆಯನ್ನು ಎದುರಿಸುವಂತಾಯಿತು. ಆದರೂ ಎರಡೂ ಸ್ಥಾನಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.ಬಿಜೆಪಿ ನಾಯಕರ ಗೌಪ್ಯ ಸಭೆ:

ಮಹಾನಗರ ಪಾಲಿಕೆಯು ಬಿಜೆಪಿ ತೆಕ್ಕೆಗೆ ಬರುವುದು ಖಚಿತವಾಗಿತ್ತು. ಹೀಗಾಗಿ ಬಹುಮತ ಹೊಂದಿದ್ದ ಬಿಜೆಪಿಯಲ್ಲಿ ಮೇಯರ್‌ ಮತ್ತು ಉಪ ಮೇಯರ್‌ಗೆ ಆಕಾಂಕ್ಷಿಗಳು ಕೂಡ ಹೆಚ್ಚಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಚುನಾವಣೆ ವೀಕ್ಷಕ ಹಾಗೂ ವಿಪ ಸದಸ್ಯ ಎನ್‌.ರವಿಕುಮಾರ್‌, ಶಾಸಕ ಅಭಯ ಪಾಟೀಲ, ಸಂಸದ ಜಗದೀಶ ಶೆಟ್ಟರ್‌ ಅವರ ನೇತೃತ್ವದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಕೋರ್‌ ಕಮಿಟಿ ಸಭೆ ನಡೆಯಿತು. ಈ ವೇಳೆ ಮೇಯರ್‌ ಸ್ಥಾನಕ್ಕೆ ಮಂಗೇಶ ಪವಾರ, ಉಪಮೇಯರ್‌ ಸ್ಥಾನಕ್ಕೆ ವಾಣಿ ವಿಲಾಸ ಜೋಶಿ ಅವರನ್ನು ಆಯ್ಕೆ ಮಾಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು. ನೂತನ ಮೇಯರ್‌,ಉಪಮೇಯರ್‌ಗೆ ಶಾಸಕ ಅಭಯ ಪಾಟೀಲ, ಸಂಸದ ಜಗದೀಶ ಶೆಟ್ಟರ್‌, ವಿಧಾನ ಪರಿಷತ್‌ ಸದಸ್ಯರಾದ ಸಾಬಣ್ಣ ತಳವಾರ, ಎನ್‌. ರವಿಕುಮಾರ, ಮಾಜಿ ಶಾಸಕ ಅನಿಲ ಬೆನಕೆ ಸೇರಿದಂತೆ ಬಿಜೆಪಿ ನಾಯಕರು ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು. ನೂತನ ಮೇಯರ್‌ ಮತ್ತು ಉಪ ಮೇಯರ್‌ ಆಯ್ಕೆಯಾದ ನಂತರ ಎಲ್ಲರೂ ಅವರಿಗೆ ಶುಭ ಕೋರಿದರು.

Share this article