ಮುಖ್ಯ) ಇಸ್ಮಾಯಿಲ್‌ ಕಂಡಕೆರೆಗೆ ಪ.ಗೋ. ಪ್ರಶಸ್ತಿ ಪ್ರದಾನ

KannadaprabhaNewsNetwork | Published : May 12, 2024 1:15 AM

ಸಾರಾಂಶ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇಸ್ಮಾಯಿಲ್ ಕಂಡಕೆರೆ, ಪತ್ರಿಕೆಗಳು ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ ಪ.ಗೋ. ಪ್ರಶಸ್ತಿಯನ್ನು ವಾರ್ತಾಭಾರತಿ ಪತ್ರಿಕೆಯ ವಿಶೇಷ ವರದಿಗಾರ ಕೆ.ಎಂ. ಇಸ್ಮಾಯಿಲ್ ಕಂಡಕೆರೆ ಅವರಿಗೆ ಗುರುವಾರ ನಗರದ ಪತ್ರಿಕಾಭವನದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಉತ್ತಮ ಸಮಾಜದ ನಿರ್ಮಾಣದ ಶಕ್ತಿ ಮಾಧ್ಯಮಗಳಿಗೆ ಇದೆ. ಮಾಧ್ಯಮಗಳು ಪರಂಪರೆಯ ಕೊಂಡಿಯಾಗಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿವೆ ಎಂದರು.

ಮಾಧ್ಯಮಗಳು ಪದ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದ ಅವರು, ಸಮಾಜದಲ್ಲಿನ ವಿಕೃತಿಗಳನ್ನು ಮೀರಿ ಮಾಧ್ಯಮಗಳು ಸಮಾಜದ ಉತ್ತಮ ಭವಿಷ್ಯ ರೂಪಿಸುವ ಶಕ್ತಿಯನ್ನು ಹೊಂದಿವೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಗಮನ ಹರಿಸಲು ಮನವಿ ಮಾಡುವುದಾಗಿ ಹೇಳಿದರು.ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು ಹಿರಿಯ ಪತ್ರಕರ್ತ ದಿ. ಪದ್ಯಾಣ ಗೋಪಾಲಕೃಷ್ಣರ ಒಡನಾಟದ ಬಗ್ಗೆ ಮಾತನಾಡಿ, ಪತ್ರಕರ್ತರು ವರ್ತಮಾನ ಕಾಲದಲ್ಲಿದ್ದು ಭೂತಕಾಲದ ಜ್ಞಾನದೊಂದಿಗೆ ಭವಿಷ್ಯದ ಚಿಂತನೆ ಹೊಂದಿರಬೇಕಾದ ಅಗತ್ಯವಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇಸ್ಮಾಯಿಲ್ ಕಂಡಕೆರೆ, ಪತ್ರಿಕೆಗಳು ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್‌ ಬಂಟ್ವಾಳ, ಪದ್ಯಾಣ ಗೋಪಾಲಕೃಷ್ಣ ಅವರ ಪುತ್ರ ವಿಶ್ವೇಶ್ವರ ಭಟ್, ಮ್ಯಾಮ್ ಗೌರವಾಧ್ಯಕ್ಷ ವೇಣು ಶರ್ಮ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್., ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಡಸ್ಥಳ ಇದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆರಿಫ್ ಪಡುಬಿದ್ರಿ ನಿರೂಪಿಸಿದರು.

Share this article