ಕಬ್ಬನ್‌ ಉದ್ಯಾನದಲ್ಲಿ ಮಾವು, ಹಲಸು ಮೇಳಕ್ಕೆ ಚಾಲನೆ

KannadaprabhaNewsNetwork |  
Published : May 09, 2026, 03:45 AM IST
Mango

ಸಾರಾಂಶ

ಕಾರ್ಬೈಡ್‌ ಮುಕ್ತ ಮತ್ತು ಸಹಜವಾಗಿ ಮಾಗಿದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಿರುವ ಮಾವು-ಹಲಸು ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

  ಬೆಂಗಳೂರು :  ಕಾರ್ಬೈಡ್‌ ಮುಕ್ತ ಮತ್ತು ಸಹಜವಾಗಿ ಮಾಗಿದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಿರುವ ಮಾವು-ಹಲಸು ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಶುಕ್ರವಾರ ಕಬ್ಬನ್‌ ಉದ್ಯಾನದಲ್ಲಿ ಮೇಳವನ್ನು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಡಾ.ಬಿ.ಸಿ.ಮುದ್ದು ಗಂಗಾಧರ್‌ ಉದ್ಘಾಟಿಸಿ ಮಾತನಾಡಿ, ಮಾವು-ಹಲಸು ಮೇಳೆ ಮೇ 17ರವರೆಗೆ ನಡೆಯಲಿದೆ. ರಾಮನಗರ, ಮಂಡ್ಯ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮಾವು ಮತ್ತು ಹಲಸು ಬೆಳೆಗಾರರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಹವಾಮಾನ ವೈಪರೀತ್ಯ, ಅಕಾಲಿಕ ಮಳೆ ಹಾಗೂ ಗಾಳಿ ಪರಿಣಾಮದಿಂದ ಮಾವಿನ ಬೆಳೆ ಹಾನಿಗೊಳಗಾದ ಹಿನ್ನೆಲೆಯಲ್ಲಿ ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಮೇಳ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಕಬ್ಬನ್‌ ಪಾರ್ಕ್‌ನಲ್ಲಿ ಈ ಮೇಳ ನಡೆಯುತ್ತಿದ್ದು, ನಗರದ ಗ್ರಾಹಕರು ಉತ್ತಮ ಮತ್ತು ರಾಸಾಯನಿಕ ಮುಕ್ತ ಹಣ್ಣುಗಳನ್ನು ಸವಿಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಕಬ್ಬನ್‌ಪಾರ್ಕ್‌ನಲ್ಲಿ ನಡೆಯುತ್ತಿರುವ ಮೇಳದಲ್ಲಿ ಮಾವಿಗೆ ಮಾವು ಅಭಿವೃದ್ಧಿ ನಿಗಮ ಯಾವುದೇ ದರವನ್ನು ನಿಗದಿ ಮಾಡಿಲ್ಲ. ರೈತರೇ ರಿಯಾಯಿತಿ ದರದಲ್ಲಿ ಗುಣಮಟ್ಟದ ಹಣ್ಣುಗಳನ್ನು ಮಾರಾಟ ಮಾಡಲಿದ್ದಾರೆ. ಹೊರಗೆ ಸಿಗುವ ದರಕ್ಕಿಂತ ಕಡಿಮೆ ಬೆಲೆ ಇಲ್ಲಿಇರಲಿದೆ. ರೈತರೊಂದಿಗೆ ಗ್ರಾಹಕರು ಕೂಡ ಲಾಭ ಪಡೆಯಬೇಕೆಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಲಾಲ್‌ಬಾಗ್‌ನಲ್ಲಿಯೂ ಮೇಳಕ್ಕೆ ನಿರ್ಧಾರ:

ಬೆಂಗಳೂರು ದಕ್ಷಿಣ, ರಾಮನಗರ, ಕೋಲಾರ ಸೇರಿದಂತೆ ಕೊಪ್ಪಳ, ಹಾವೇರಿ, ಧಾರವಾಡ, ತುಮಕೂರು, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ರೈತರಿಗೆ ಅನುಕೂಲವಾಗುವಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮೇ ಅಂತ್ಯದೊಳಗೆ ಲಾಲ್‌ಬಾಗ್‌ನಲ್ಲಿಯೂ ಮಾವು- ಹಲಸು ಮೇಳ ನಡೆಸಲು ನಿರ್ಧರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್‌.ವೇದಮೂರ್ತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ (ಕಬ್ಬನ್‌ಪಾರ್ಕ್‌) ಕುಸುಮಾ ಇದ್ದರು.

ರೈತರು ಬೆಳೆದ ಸ್ಥಳೀಯ ತಳಿಗಳನ್ನು ನಾಗರಿಕರು ಖರೀದಿಸಿ ರೈತರಿಗೆ ಬೆಂಬಲ ನೀಡಬೇಕು. ಇಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ. ರೈತರೇ ನೇರವಾಗಿ ಗ್ರಾಹಕರಿಗೆ ಹಣ್ಣು ಮಾರಾಟ ಮಾಡುತ್ತಿದ್ದಾರೆ. ಮೇಳವು ಶುಕ್ರವಾರದಿಂದ 10 ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕರಿಗೆ ವಿವಿಧ ತಳಿಯ ಸ್ಥಳೀಯ ಮಾವು ಹಾಗೂ ಹಲಸಿನ ಹಣ್ಣುಗಳು ಲಭ್ಯವಾಗಲಿವೆ.

-ಆರ್.ಗಿರೀಶ್, ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಇಂದಿನಿಂದ 3 ದಿನ ರಾಜ್ಯದಲ್ಲಿ ಉತ್ತಮ ಮಳೆಯ ಮುನ್ಸೂಚನೆ
ಸಂತ್ರಸ್ತೆ ಬೇರೆ ಮದುವೆ ಆದರೂ ಪೋಕ್ಸೋ ಕೇಸ್‌ ರದ್ದಿಲ್ಲ : ಕೋರ್ಟ್‌