ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆ ಮಾವಿನ ತೋಟಗಳಿಗೆ ಮಾರಕವಾಗಿದೆ. ಪಟ್ಟಣದ ಹೊರವಲಯದಲ್ಲಿ ರೈತ ನಿಂಗಪ್ಪ ಪೂಜಾರ ಹಾಗೂ ಸಹೋದರರ ಮಾವಿನತೋಟದ ಶೇ. 75ರಷ್ಟು ಮಾವಿನಕಾಯಿಗಳು ನೆಲಸಮವಾಗಿವೆ.
ಲಕ್ಷ್ಮೇಶ್ವರ: ಒಂದು ಕಡೆ ಮಾವಿನ ಹಣ್ಣುಗಳ ಬೆಲೆ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದು, ಇನ್ನೊಂದು ಕಡೆ ಕಳೆದ 2- 3 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಗಾಳಿಗೆ ಮಾವಿನ ಮರಗಳಿಂದ ಮಾವಿನಕಾಯಿ ಉದುರಿ ಬೀಳುತ್ತಿವೆ.ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆ ಮಾವಿನ ತೋಟಗಳಿಗೆ ಮಾರಕವಾಗಿದೆ. ಪಟ್ಟಣದ ಹೊರವಲಯದಲ್ಲಿ ರೈತ ನಿಂಗಪ್ಪ ಪೂಜಾರ ಹಾಗೂ ಸಹೋದರರ ಮಾವಿನತೋಟದ ಶೇ. 75ರಷ್ಟು ಮಾವಿನಕಾಯಿಗಳು ನೆಲಸಮವಾಗಿವೆ.
ಪಟ್ಟಣದ ನಿಂಗಪ್ಪ ಪೂಜಾರ ಹಾಗೂ ಅವರ ಸಹೋದರಿಗೆ ಸೇರಿದ ಒಟ್ಟು 7 ಎಕರೆಯಲ್ಲಿ ಐದನೂರು ಮಾವಿನ ಮರಗಳನ್ನು ನೆಟ್ಟಿದ್ದಾರೆ. ಪ್ರತಿವರ್ಷ 30ರಿಂದ 40 ಟನ್ ಮಾವಿನ ಇಳುವರಿ ಪಡೆಯುತ್ತಿದ್ದರು. ಶನಿವಾರ ಹಾಗೂ ಭಾನುವಾರ ಸಂಜೆ ಸುರಿದ ಭಾರಿ ಮಳೆ ಗಾಳಿಗೆ ಮಾವಿನ ಕಾಯಿಗಳು ಉದುರಿವೆ. ಸಾಕಷ್ಟು ಪ್ರಮಾಣದಲ್ಲಿ ಮಾವಿನಕಾಯಿ ಫಸಲು ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರುಪಾಯಿ ನಷ್ಟ: ನಿಂಗಪ್ಪ ಪೂಜಾರ, ನೀಲಪ್ಪ ಪೂಜಾರ, ನಾಗಪ್ಪ ಪೂಜಾರ, ಶಿವಪ್ಪ ಪೂಜಾರ ಹಾಗೂ ದೇವಪ್ಪ ಪೂಜಾರ ಅವರು ಮಾವಿನ ಮರಗಳನ್ನು ಹಲವು ವರ್ಷಗಳಿಂದ ಸಂರಕ್ಷಿಸಿಕೊಂಡು ಬಂದಿದ್ದಾರೆ. ಸಾವಯವ ಗೊಬ್ಬರದಿಂದ ಮಾವು ಬೆಳೆದು ಅತ್ಯಧಿಕ ಲಾಭ ಗಳಿಸುತ್ತಿದ್ದರು. ಈ ವರ್ಷ ಸಹ ಪ್ರತಿವರ್ಷದಂತೆ ಲಾಭದ ನಿರೀಕ್ಷೆಯಲ್ಲಿರುವ ಇವರಿಗೆ ಅಕಾಲಿಕ ಮಳೆ ಇವರ ಕನಸನ್ನು ನುಚ್ಚು ನೂರು ಮಾಡಿದೆ.ಇವರು ಪ್ರತಿವರ್ಷದಂತೆ ಈ ವರ್ಷ ಮಾವಿನಗಿಡಗಳು ಹೂವು ಬಿಡುವ ಸಂದರ್ಭದಿಂದ ಇಲ್ಲಿಯವರೆಗೆ ಪ್ರತಿ ಎಕರೆಗೆ ಸುಮಾರು ₹60ರಿಂದ ₹70 ಸಾವಿರ ಖರ್ಚು ಮಾಡಿ ಮಾವಿನ ಮರಗಳಿಗೆ ಗೊಬ್ಬರ, ಔಷಧಿ ಸಿಂಪಡಣೆ ಮಾಡುತ್ತಿದ್ದರು. ಈ ವರ್ಷ ಸುರಿದ ಮಳೆ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಅಕಾಲಿಕ ಮಳೆಯಿಂದ ರೈತರ ಜಮೀನಿನಲ್ಲಿನ ಭಾನುವಾರ ಸಂಜೆ ಸುರಿದ ಮಳೆ ಗಾಳಿಗೆ ಮಾವಿನಕಾಯಿಗಳು ನೆಲಕ್ಕೆ ಬಿದ್ದಿದ್ದು, ಸೋಮವಾರ ಹಿರಿಯ ತೋಟಗಾರಿಕಾ ನಿರ್ದೇಶಕರಾದ ಪ್ರಶಾಂತ ಕುಲಕರ್ಣಿ, ಸಹಾಯಕ ತೋಟಗಾರಿಕಾ ಅಧಿಕಾರಿ ಶಂಭುಲಿಂಗಪ್ಪ ನೆಗಳೂರು, ಕಂದಾಯ ಇಲಾಖೆಯ ಸಿಬ್ಬಂದಿ ಶ್ರೀಕಾಂತ ನವಲೆ ಮಾವಿನ ತೋಟಗಳಿಗೆ ಭೇಟಿ ನೀಡಿ ನಷ್ಟವನ್ನು ಪರಿಶೀಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.