ಹವಾಮಾನ ವೈಪರೀತ್ಯದ ಬಗ್ಗೆ ಮಾವು ಬೆಳೆಗಾರರಿಗೆ ತಿಳಿವಳಿಕೆ ಅಗತ್ಯ

KannadaprabhaNewsNetwork |  
Published : Mar 22, 2026, 02:30 AM IST
ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ವಂಶಿ ಫಾರ್ಮ್‌ನಲ್ಲಿ ಮಾವು ಫಸಲು ವೈಫಲ್ಯ ವೀಕ್ಷಿಸುತ್ತಿರುವ ಮಾವು ವಿಜ್ಞಾನಿಗಳು ಹಾಗೂ ರೈತ ಸಂಘದ ಪ್ರತಿನಿಧಿಗಳು. | Kannada Prabha

ಸಾರಾಂಶ

ಹೂಗೊಂಚಲು ಒಣಗುವ ರೋಗಕ್ಕೆ ತುತ್ತಾಗಿ ಹಾವೇರಿ ಜಿಲ್ಲೆಯ ಶೇ. 97ರಷ್ಟು ಮಾವು ಹಾಳಾಗಿದ್ದು, ಶೇ. 3ರಷ್ಟು ಮಾತ್ರ ಮಾವು ಫಸಲು ಉಳಿದಿದೆ. ವಿಜ್ಞಾನಿಗಳ ಸಲಹೆ ಪಡೆದಿದ್ದರೆ ಮಾವು ಫಸಲು ಉಳಿಸಬಹುದಿತ್ತು. ಹವಾಮಾನ ವೈಪರೀತ್ಯದ ಬಗ್ಗೆ ಮಾವು ಬೆಳೆಗಾರರಿಗೆ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ಮಾವು ಬೆಳೆ ವಿಜ್ಞಾನಿ, ಧಾರವಾಡದ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ. ಜೆ.ಬಿ. ಗೋಪಾಲಿ ಹೇಳಿದರು.

ಹಾನಗಲ್ಲ: ಹೂಗೊಂಚಲು ಒಣಗುವ ರೋಗಕ್ಕೆ ತುತ್ತಾಗಿ ಹಾವೇರಿ ಜಿಲ್ಲೆಯ ಶೇ. 97ರಷ್ಟು ಮಾವು ಹಾಳಾಗಿದ್ದು, ಶೇ. 3ರಷ್ಟು ಮಾತ್ರ ಮಾವು ಫಸಲು ಉಳಿದಿದೆ. ವಿಜ್ಞಾನಿಗಳ ಸಲಹೆ ಪಡೆದಿದ್ದರೆ ಮಾವು ಫಸಲು ಉಳಿಸಬಹುದಿತ್ತು. ಹವಾಮಾನ ವೈಪರೀತ್ಯದ ಬಗ್ಗೆ ಮಾವು ಬೆಳೆಗಾರರಿಗೆ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ಮಾವು ಬೆಳೆ ವಿಜ್ಞಾನಿ, ಧಾರವಾಡದ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ. ಜೆ.ಬಿ. ಗೋಪಾಲಿ ಹೇಳಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಹಾನಗಲ್ಲ ತಾಲೂಕಿನ ಮಾವು ತೋಟಗಳಿಗೆ ಮಾವು ತಜ್ಞರ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಆನಂತರ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ವಂಶಿ ಫಾರ್ಮ್‌ನಲ್ಲಿ ಸುದ್ದಿಗಾರರಿಗೆ ವಿವರ ನೀಡಿದ ಅವರು, ಈ ಬಾರಿ ಯಾರೂ ನಿರೀಕ್ಷಿಸಲಾರದಷ್ಟು ರೋಗ ಮಾವು ಬೆಳೆಗೆ ಆವರಿಸಿದೆ. ಧಾರವಾಡ ಹಾಗೂ ಹಾವೇರಿ ಜಿಲ್ಲೆಯಲ್ಲಿ ಒಂದೇ ರೀತಿಯ ರೋಗ ಇದಾಗಿದೆ. ಹೂ ಬಿಟ್ಟ ಮಾವಿಗೆ ಎರಡು ಮೂರು ದಿನಗಳಲ್ಲಿ ಇಡೀ ಹೂ ಹಾಳಾಗಿರುವುದು ಇದು ಇತಿಹಾಸದಲ್ಲೇ ಮೊದಲು. ಔಷಧೋಪಚಾರಕ್ಕೂ ಅವಕಾಶ ಸಿಗದಂತೆ ಮಾವು ಫಸಲು ಹಾಳಾಗಿದೆ. ಇದರ ಆನಂತರ ಬಿಟ್ಟ ಹೂವಿಗೆ ಕೂಡ ಜಿಗಿ ಹಾಗೂ ಬೂದಿ ರೋಗ ತಗಲಿ ಅಂತಹ ಮಾವು ಕೂಡ ಹಾಳಾಗಿದೆ. ವಾತಾವರಣದಲ್ಲಿ ತೇವಾಂಶ ಮತ್ತು ಛಳಿಯ ಕಾರಣದಿಂದಾಗಿ ಮಾವಿಗೆ ಹೆಚ್ಚು ಬಾಧೆಯಾಗಿದೆ ಎಂದರು.

ಹಾವೇರಿ ಜಿಲ್ಲೆಯಲ್ಲಿ 5,300 ಹೆಕ್ಟೇರ್ ಮಾವು ಫಸಲು ಇದೆ. ಅದರಲ್ಲಿ ಬಹುಪಾಲು 3,310 ಹೆಕ್ಟೇರ್ ಹಾನಗಲ್ಲ ತಾಲೂಕಿನಲ್ಲಿದೆ. ಇಲ್ಲಿಯೇ ಒಂದು ಮಾವು ಫಸಲು ತರಬೇತಿ ಕೇಂದ್ರದ ಅಗತ್ಯವಿದೆ. ಹವಾಮಾನ ತಿಳಿವಳಿಕೆ ಕೇಂದ್ರದ ಅಗತ್ಯವೂ ಇಲ್ಲಿದೆ. ರೈತರು ಇಡೀ ಮಾವು ತೋಟಗಳನ್ನು ಗೇಣಿ ನೀಡಿ ಅದರ ಕಡೆಗೆ ಗಮನ ಕೊಡದೇ ಇರುವುದು ಕೂಡ ಮಾವು ತೋಟಗಳು ಹಾಳಾಗಲು ಕಾರಣವಾಗಿದೆ. ತೋಟಗಳ ನಿರ್ವಹಣೆಯ ವಿಷಯದಲ್ಲಿ ರೈತರು ಜಾಗೃತಿ ವಹಿಸಬೇಕು. ಸಕಾಲಿಕವಾಗಿ ಪೋಷಕಾಂಶ ಹಾಗೂ ನೀರು ನಿರ್ವಹಣೆಯೂ ಅಷ್ಟೇ ಮುಖ್ಯವಾದುದು. ಆಪೂಸು ಮಾವಿಗೆ ರೋಗ ಬಾಧೆ ಅಧಿಕ. ಇಲ್ಲಿನ ಕೀಟಗಳೂ ಔಷಧಿ ನಿರೋಧಕ ಶಕ್ತಿ ಹೊಂದಿರುವಂತಿದೆ. ಹೀಗಾಗಿ ಒಮ್ಮೊಮ್ಮೆ ಔಷಧಿ ಸಿಂಪರಣೆಗೂ ರೋಗದ ಹುಳುಗಳು ಸಾಯುತ್ತಿಲ್ಲ. ಪೆಸ್ಟಿಸೈಡ್ಸ್‌ ಸಿಂಪರಣೆಯಿಂದಾಗಿ ಜೇನುಹುಳುಗಳು ಕೂಡ ಮಾವು ತೋಟಕ್ಕೆ ಬರುತ್ತಿಲ್ಲ. ರೈತರಿಗೂ ವರ್ಷದಲ್ಲಿ ಎರಡು ಮೂರು ತರಬೇತಿಗಳು ಬೇಕು. ಮಾವು ಮರಗಳನ್ನು ವೈಜ್ಞಾನಿಕವಾಗಿ ಸವರಬೇಕಾದ ಅಗತ್ಯವೂ ಇದೆ ಎಂದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡೆವೆಪ್ಪ ಆಲದಕಟ್ಟಿ ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ಮಾವು ಸಂಸ್ಕರಣ ಘಟಕದ ಸ್ಥಾಪನೆಗೆ ಯತ್ನ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಾವು ಪ್ರದೇಶವಿರುವ ಹಾನಗಲ್ಲ ತಾಲೂಕಿನಲ್ಲಿ ಮಾವು ಮಾರ್ಗದರ್ಶನ ಕೇಂದ್ರ ಸ್ಥಾಪಿಸಬೇಕು. ಈ ವರ್ಷ ಮಾವು ಬೆಳೆಗಾರರು ತೀರ ಆತಂಕದಲ್ಲಿದ್ದಾರೆ. ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಿ ಮಾವು ನಷ್ಟದ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ತೋಟಗಾರಿಕೆ ಜಂಟಿ ನಿರ್ದೇಶಕ ಸಿದ್ದರಾಮಯ್ಯ ಬರಗೀಮಠ, ಹಣ್ಣು ವಿಭಾಗದ ಸಹ ಪ್ರಾಧ್ಯಾಪಕ ಡಾ. ಅರುಣಕುಮಾರ ಕಾಂಬಳೆ, ದೇವಿಹೊಸೂರಿನ ತೋಟಗಾರಿಕೆ ವಿಸ್ತರಣಾ ಕೇಂದ್ರ ಮುಖ್ಯಸ್ಥ ಡಾ. ರತ್ನಾಕರ ಶೇಟ್, ಕೀಟಶಾಸ್ತ್ರ ವಿಭಾಗದ ಡಾ. ಎಂ.ಎಂ. ವಿನಯಕುಮಾರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವೀರಭದ್ರಸ್ವಾಮಿ, ಎಸ್.ಎಸ್. ಅಂಗಡಿ, ಕೋಟೆಪ್ಪ ಸಂಕಣ್ಣನವರ, ಮೃತ್ಯುಂಜಯ ಹಿರೇಮಠ, ನಾಗನಗೌಡ ಪಾಟೀಲ, ಸೋಮಣ್ಣ ಜಡಗೊಂಡರ ಈ ಸಂದರ್ಭದಲ್ಲಿದ್ದರು.

ಹವಾಮಾನ ವೈಪರೀತ್ಯದಿಂದ ಮಾವು ಬೆಳೆ ಹಾಳಾಗಿರುವುದು ಎಲ್ಲರ ಗಮನದಲ್ಲಿದೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲದೆ ಮಾವು ಬೆಳೆಗಾರರ ಭೇಟಿಗನುಗುಣವಾಗಿ ಹಾನಗಲ್ಲಿನಲ್ಲಿಯೇ ಮಾವು ಮಾರ್ಗದರ್ಶನ ಕೇಂದ್ರವನ್ನು ಸ್ಥಾಪಿಸಲು ಕೂಡ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮುಂದಿನ ವರ್ಷ ಎರಡು ಬಾರಿ ಮಾವು ಬೆಳೆಗಾರರಿಗೆ ತರಬೇತಿ ನೀಡಲಾಗುವುದು ಎಂದು ಜಿಲ್ಲಾ ತೋಟಗಾರಿಕೆ ಜಂಟಿ ನಿರ್ದೇಶಕ ಸಿದ್ದರಾಮಯ್ಯ ಬರಗೀಮಠ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಂಬಳದಲ್ಲಿ ಮೂಲ ಸೌಕರ್ಯ ಇಲ್ಲದೇ ನಿವಾಸಿಗಳ ಪರದಾಟ
ನಾಟಕಗಳು ಇಂದಿಗೂ ಹಳ್ಳಿಗಳ ಜೀವಾಳ