ಕನ್ನಡಪ್ರಭ ವಾರ್ತೆ ಹಳಿಯಾಳ
ಕೃಷಿ ಉತ್ಪನ್ನಗಳ ಮಾರಾಟದ ಮೇಲೆ ತೀವ್ರ ಬಿಸಿ ತಟ್ಟಿದ್ದು, ಇದರ ಪರಿಣಾಮ ಮಾವಿನ ಬೆಳೆಗಾರರಿಗೂ ಮತ್ತು ಮಾವು ವ್ಯಾಪಾರಿಗಳಿಗೂ ಸವಾಲಾಗಿ ಪರಿಣಮಿಸಿದೆ.
ಮಾವಿಗೆ ಕಿಮ್ಮತ್ತಿಲ್ಲ:ಪ್ರಸಕ್ತ ವರ್ಷ ಅದರ ಘನತೆಗೆ ತಕ್ಕಂತ ಬೆಲೆ ಆಕರಣೆ ಆಗದಿರುವುದು ಮಾವು ಬೆಳೆಗಾರರನ್ನು ಚಿಂತೆಗೀಡು ಮಾಡಿತ್ತು. ಕಳೆದ ವರ್ಷ ಕ್ವಿಂಟಲಿಗೆ ₹5 ಸಾವಿರದಷ್ಟಿದ್ದ ದರವು ಈ ವರ್ಷ ಪ್ರತಿ ಕ್ವಿಂಟಲಿಗೆ ₹2400ದಿಂದ ₹2800 ಆಸುಪಾಸಿನಲ್ಲಿಯೇ ಗಿರಕಿ ಹೊಡೆಯುವುದನ್ನು ಕಂಡು ಮಾವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದರು. ಹವಾಮಾನ ವೈಪರೀತ್ಯದಿಂದಾಗಿ ತಾಲೂಕಿನಲ್ಲಿ ಮಾವಿನ ಇಳುವರಿಯು ಶೇ. 85-90 ಕುಸಿದಿದ್ದರಿಂದ ಅಳಿದುಳಿದ ಮಾವು ಮಾರಾಟ ಮಾಡಿ ಸ್ವಲ್ಪವಾದರೂ ಲಾಭ ಪಡೆಯಬಹುದೆಂಬ ರೈತರ ಕನಸಿಗೆ ಕೊಲ್ಲಿ ಯುದ್ಧವು ಕೊಳ್ಳಿ ಹಚ್ಚಿತ್ತೆನ್ನಲಾಗುತ್ತಿದೆ.ಮಾವು ಬೆಳೆಗಾರರಿಂದ ಮುಷ್ಕರ:
ಈ ವರ್ಷದ ಮಾವು ವಹಿವಾಟು ಮೇ 7ರಿಂದ ಆರಂಭಗೊಂಡಿತು. ಅಂದರೆ ಕಳೆದ ವರ್ಷಕ್ಕಿಂತ ಹತ್ತು ದಿನ ತಡವಾಗಿ ಆರಂಭಗೊಂಡಿದೆ. ಆರಂಭದ ದಿನ ₹2400 ಇದ್ದ ದರ ಚೇತರಿಕೆಯನ್ನು ಕಂಡಿಲ್ಲವೆಂಬುವುದು ರೈತರ ದೂರು. ವಹಿವಾಟು ಆರಂಭಗೊಂಡ ಬರೋಬ್ಬರಿ ಐದೇ ದಿನದಲ್ಲಿ ಅಂದರೇ ಮೇ 12ರಿಂದ ಮಾವು ಖರೀದಿ ಸ್ಥಗಿತಗೊಳಿಸಲಾಯಿತು. ಹೀಗೆ ಆರಂಭಗೊಂಡ ಐದೇ ದಿನದಲ್ಲಿ ವಹಿವಾಟು ಬಂದ್ ಆಗಿರುವುದು ಹಳಿಯಾಳ ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಲಾಗುತ್ತಿದೆ. ರಾಜ್ಯ ಹಾಗೂ ದೇಶದ ಮಾರುಕಟ್ಟೆಯಲ್ಲಿ ಮಾವು ವಹಿವಾಟು ಅನಿಶ್ಚಿತತೆಯಿಲ್ಲಿರುವುದರಿಂದ ಮಾವು ಖರೀದಿಯನ್ನು ಮಾಡಲು ಯಾರೂ ಮುಂದಾಗದೇ ಇರುವುದರಿಂದ ಹಳಿಯಾಳದಲ್ಲೂ ಮಾವು ಖರೀದಿಯನ್ನು ನಿಲ್ಲಿಸುತ್ತಿದ್ದೇವೆ ಎಂದು ಮಾವು ಖರೀದಿದಾರರು ತಾಲೂಕಾಡಳಿತದ ಮುಂದೇ ತಮ್ಮ ಅಳಲನ್ನು ತೊಡಿಕೊಂಡು ಮಾವು ಖರೀದಿ ನಿಲ್ಲಿಸಿದ್ದಾರೆ.
ಮಾರುಕಟ್ಟೆಯಲ್ಲಿ ಹಣ್ಣಿನ ಆವಕ ಹೆಚ್ಚಾಗಿ ಬೆಲೆ ಇನ್ನೂ ಕುಸಿಯಬಾರದು ಎಂಬ ದೃಷ್ಟಿಯಿಂದ, ರೈತರು ಮುಂದಿನ ಎರಡು ದಿನಗಳ ಕಾಲ ಮಾವು ಕಟಾವು ಮಾಡುವುದನ್ನು ಸ್ಥಗಿತಗೊಳಿಸಬೇಕು. ಪರಿಸ್ಥಿತಿ ಸುಧಾರಿಸಿದ ನಂತರ ಸುಗಮ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು. ಮಾವು ಬೆಳೆಗಾರ ರೈತರು ಈ ಸಂಕಷ್ಟದ ಸಮಯದಲ್ಲಿ ಸಹಕರಿಸಬೇಕು ಎಂದು ತಾಲೂಕಾಡಳಿತ ಮನವಿ ಮಾಡಿದೆಹಳಿಯಾಳ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮಾವಿನಕಾಯಿ ಧಾರಣೆ ಕುಸಿತದಿಂದಾಗಿ ವ್ಯಾಪಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಬಗ್ಗೆ ನಾವು ರೈತರ ಮತ್ತು ವರ್ತಕರ ಸಭೆಯನ್ನು ನಡೆಸಿ ಚರ್ಚಿಸಿದ್ದೇವೆ. ಸದ್ಯಕ್ಕೆ ಸಗಟು ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಇರುವದರಿಂದ, ರೈತರು ಕಂಗಾಲಾಗಬಾರದೆಂದು ವರ್ತಕರ ಮನವೊಲಿಸಿ ಬಾಕಿಯಿರುವ ಮಾಲು ಖರೀದಿ ಮಾಡಲು ಕ್ರಮ ಕೈಗೊಳ್ಳಲಾಯಿತು ಎಂದು ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ತಿಳಿಸಿದ್ದಾರೆ.