ಸೋಮವಾರಪೇಟೆ: ನಿವೇಶನ ರಹಿತ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ, ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಕುಂಬೂರು ಗ್ರಾಮದ ಪೈಸಾರಿ ಜಾಗದಲ್ಲಿ ವಸತಿ ರಹಿತ ಕಾರ್ಮಿಕರು ನಡೆಸುತ್ತಿರುವ ಆಹೋರಾತ್ರಿ ಧರಣಿ 13ನೇ ದಿನಕ್ಕೆ ಕಾಲಿಟ್ಟಿದೆ.ಬುಧವಾರದಂದು ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಧರಣಿ ನಡೆಯುತ್ತಿರುವ ಕುಂಬೂರು ಸ.ನಂ. 125/1 ಮತ್ತು 22/1 ಜಾಗದ ಸರ್ವೆ ಮಾಡಲು ಬರುತ್ತಾರೆ ಎಂದು ನಿನ್ನೆ ದಿನ ಮಾದಾಪುರ ಪಿಡಿಓ ಅವರು ಧರಣಿ ನಿರತರಿಗೆ ಮಾಹಿತಿ ನೀಡಿದ್ದರು.ಆದರೆ ಬುಧವಾರ ತಹಸೀಲ್ದಾರ್ ಕೃಷ್ಣಮೂರ್ತಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್ ಅವರು, ಸ್ಥಳಕ್ಕೆ ತೆರಳಿ ಧರಣಿ ನಿರತರೊಂದಿಗೆ ಮಾತುಕತೆ ನಡೆಸಿ, ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದನೆ ನೀಡದ ನಿವೇಶನ ರಹಿತರು, ನಮಗೆ ನಿವೇಶನ ನೀಡಿದ ನಂತರವಷ್ಟೇ ಇಲ್ಲಿಂದ ತೆರಳುತ್ತೇವೆ. ಅಲ್ಲಿಯವರೆಗೂ ಯಾವುದೇ ಮನವೊಲಿಕೆ, ಭರವಸೆಗಳಿಗೆ ಮಣಿಯುವುದಿಲ್ಲ ಎಂದರು.ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಮೊಣ್ಣಪ್ಪ ಮಾತನಾಡಿ, ಸುಭದ್ರ ಭಾರತ ದೇಶ ಕಟ್ಟುವಲ್ಲಿ ಶ್ರಮಿಕರ ಕೊಡುಗೆ ಅಪಾರವಾಗಿದೆ. ದುಡಿಯುವ ಜನರಿಗೆ ಸೂರಿಲ್ಲದಂತಹ ಹೀನ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ದೂರಿದ್ದಾರೆ. ಗರಗಂದೂರು ಗ್ರಾಮದ ಸ.ನಂ. 40/1 ರಲ್ಲಿ 46 ಎಕರೆ ಪೈಸಾರಿ ಜಾಗವಿದ್ದು, ಇದರಲ್ಲಿ 12 ಸೆಂಟ್ಸ್ ಜಾಗವನ್ನು ಮಿನಿ ಆರೋಗ್ಯ ಕೇಂದ್ರಕ್ಕೆ ನೀಡಬಹುದು ಎಂದು ತಹಸೀಲ್ದಾರ್ ವರದಿ ನೀಡಿದ್ದಾರೆ. ಉಳಿದಿರುವ ಜಾಗವನ್ನು ಗುರುತಿಸಿ ಧರಣಿ ನಿರತರಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು. ಅಲ್ಲಿಯವರೆಗೂ ಹೋರಾಟ ನಿರಂತರವಾಗಿರಲಿದೆ ಎಂದರಲ್ಲದೆ, ಈ ಸಂಬಂಧಿತ ಮನವಿಯನ್ನು ಅಧಿಕಾರಿಗಳಿಗೆ ಸಲ್ಲಿಸಿ, ಧರಣಿ ಮುಂದುವರೆಸಿದರು.