ಮಾವಿನ ಮರಗಳಲ್ಲಿ ಕಂಗೊಳಿಸುತ್ತಿವೆ ಹೂಗಳ ಗೊಂಚಲು!

KannadaprabhaNewsNetwork |  
Published : Jan 06, 2026, 03:00 AM IST
ಧಾರವಾಡ ಸಮೀಪದ ಕೆಲಗೇರಿ ಬಳಿ ಗಿಡ ತುಂಬೆಲ್ಲಾ ಬಿಟ್ಟಿರುವ ಹೂಗಳು. | Kannada Prabha

ಸಾರಾಂಶ

ಸಾಮಾನ್ಯವಾಗಿ ಚಳಿಗಾಲದ ಡಿಸೆಂಬರ್‌, ಜನವರಿ ಮಾವು ಹೂ ಬಿಡುವ ಸಮಯ. ಆದರೆ, ಈ ಹಿಂದಿನ ಕೆಲವು ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಾವು ಅಲ್ಪಸ್ವಲ್ಪ ಹೂ ಬಿಡುವುದು, ಬಿಟ್ಟ ಹೂ ಕೆಲವೇ ದಿನಗಳಲ್ಲಿ ಮತ್ತೆ ಉದುರಿ ಬೀಳುವುದು ಹಾಗೂ ಚಿಗರೊಡದು ಹೂವೇ ಬಿಡದಂತಹ ಸ್ಥಿತಿ ಉಂಟಾಗಿದೆ.

ಬಸವರಾಜ ಹಿರೇಮಠ

ಧಾರವಾಡ:

ಇತ್ತೀಚಿನ ಹಲವು ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಾವು ಹೂ ಬಿಡುವುದರಿಂದ ಹಿಡಿದು ಕಾಯಿ ಕಟ್ಟಿ ಇಳುವರಿ ಬರುವ ವರೆಗೂ ಮಾವು ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಪ್ರಸ್ತುತ ಹೂ ಬಿಡುವ ಸಮಯದಲ್ಲಿ ಪೂರಕ ಚಳಿಯ ವಾತಾವರಣ ಸೃಷ್ಟಿಯಾಗಿದ್ದು, ಮಾವಿನ ಗಿಡಗಳ ತುಂಬೆಲ್ಲ ಹೂಗಳು ಕಂಗೊಳಿಸುತ್ತಿದ್ದು, ಉತ್ತಮ ಇಳುವರಿ ನಿರೀಕ್ಷಿಸಲಾಗುತ್ತಿದೆ.

ಸಾಮಾನ್ಯವಾಗಿ ಚಳಿಗಾಲದ ಡಿಸೆಂಬರ್‌, ಜನವರಿ ಮಾವು ಹೂ ಬಿಡುವ ಸಮಯ. ಆದರೆ, ಈ ಹಿಂದಿನ ಕೆಲವು ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಾವು ಅಲ್ಪಸ್ವಲ್ಪ ಹೂ ಬಿಡುವುದು, ಬಿಟ್ಟ ಹೂ ಕೆಲವೇ ದಿನಗಳಲ್ಲಿ ಮತ್ತೆ ಉದುರಿ ಬೀಳುವುದು ಹಾಗೂ ಚಿಗರೊಡದು ಹೂವೇ ಬಿಡದಂತಹ ಸ್ಥಿತಿ ಉಂಟಾಗಿದೆ. ಅದೃಷ್ಟವಶಾತ್‌, ಈ ಬಾರಿ ಹೂ ಬಿಡಲು ಪೂರಕವಾದ ಚಳಿಯ ಹಿನ್ನೆಲೆಯಲ್ಲಿ ತಲೆ ತುಂಬ ಹೂ ಮುಡಿದಂತೆ ಬಹುತೇಕ ಎಲ್ಲ ಗಿಡಗಳ ತುಂಬೆಲ್ಲ ಹೂಗಳು ಕಂಗೊಳಿಸುತ್ತಿವೆ. ಹೀಗಾಗಿ, ತೋಟಗಾರಿಕೆ ಇಲಾಖೆ ಜಿಲ್ಲೆಯಲ್ಲಿ ಈ ಬಾರಿ ಸುಮಾರು 65 ಸಾವಿರ ಮೆಟ್ರಿಕ್‌ ಟನ್‌ ಮಾವು ಇಳುವರಿಯ ನಿರೀಕ್ಷೆ ಹೊಂದಲಾಗಿದೆ. ಆಪೂಸ್‌ ತಳಿಯ ನಾಡು:

ರಾಜ್ಯದ ಪೈಕಿ ಹೆಚ್ಚಿನ ಮಾವು ಬೆಳೆಯುವ ಜಿಲ್ಲೆಗಳಲ್ಲಿ ಧಾರವಾಡ ಸಹ ಒಂದು. ಸುಮಾರು 15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ತಳಿಗಳ ಮಾವಿದ್ದರೂ ಶೇ. 99ರಷ್ಟು ಆಪೂಸ್‌ (ಅಲ್ಪಾನ್ಸೋ) ಮಾವು ಇದೆ. ಎಲ್ಲೆಡೆ ಈ ತಳಿಯ ಮಾವಿಗೆ ಬೇಡಿಕೆ ಇರುವ ಕಾರಣ ಧಾರವಾಡ, ಹುಬ್ಬಳ್ಳಿ, ಅಳ್ನಾವರ ಭಾಗದಲ್ಲಿ ಹೆಚ್ಚಿನ ಬೆಳೆಗಾರರು ಮಾವು ಬೆಳೆದಿದ್ದಾರೆ. ಅತ್ಯುತ್ತಮ ಗುಣಮಟ್ಟದ ಆಪೂಸ್‌ ತಳಿಯನ್ನು ರಫ್ತು ಮಾಡಲಾಗುತ್ತಿದೆ. ಉತ್ತಮ ಇಳುವರಿ ಬರಲಿ:

ಕಳೆದ ಹಲವು ವರ್ಷಗಳಿಂದ ಈ ಸಮಯದಲ್ಲಿ ಮೋಡ ಮುಸುಕುವುದು, ಚಳಿ ಇರದಿರುವುದು ಹಾಗೂ ಮಳೆ ಬಂದಿದ್ದೂ ಆಗಿದೆ. ಇನ್ನು, ಕಾಯಿ ಕಟ್ಟುವ ಸಮಯದಲ್ಲಿ ಮಂಜು ಬಿದ್ದರೆ ಕಾಯಿ ಉದುರಿ ಹೋಗುತ್ತವೆ. ಇನ್ನೇನು ಮಾವು ಕೈಗೆ ಬಂತು ಎನ್ನುವಷ್ಟರಲ್ಲಿ ಜೋರಾಗಿ ಗಾಳಿ ಸಮೇತ ಮಳೆ ಬಂದು ಮಾವು ನೆಲಕಚ್ಚಿದ ಅದೆಷ್ಟೋ ಉದಾಹರಣೆಗಳಿವೆ. ಹೀಗಾಗಿ, ಸಾಕಷ್ಟು ಮಾವು ಬೆಳೆಗಾರರು ಬೇಸತ್ತು ಅಲ್ಲಲ್ಲಿ ಪರ್ಯಾಯ ಬೆಳೆಯತ್ತ ಮನಸ್ಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಅನುಕೂಲ ವಾತಾವರಣದಿಂದ ಗಿಡಗಳ ತುಂಬೆಲ್ಲ ಹೂ ಬಿಟ್ಟಿದ್ದು ರೋಗದ ಭಯವೂ ಇಲ್ಲ. ಉತ್ತಮ ಇಳುವರಿ ನಿರೀಕ್ಷೆ ಹೊಂದಲಾಗಿದೆ ಎಂದು ಮಾವು ಬೆಳೆಗಾರ ಕೆಲಗೇರಿ ದೇವೇಂದ್ರಪ್ಪ ಜೈನರ್‌ ಹೇಳಿದರು. ಹೂಗಳ ರಕ್ಷಣೆಯಾಗಲಿ:

ಉತ್ತಮವಾಗಿ ಹೂ ಬಿಟ್ಟಿವೆ ಎಂದು ಬೆಳೆಗಾರರು ಸುಮ್ಮನೆ ಕೂರಬಾರದು. ಹೂಗಳನ್ನು ಉಳಿಸಿ ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಕಟ್ಟುವ ರೀತಿಯಲ್ಲಿ ಅವುಗಳ ರಕ್ಷಣೆ ಮಾಡಬೇಕು. ಹೂವಿನ ಪರಾಗಸ್ಪರ್ಶ ಸಮಯದಲ್ಲಿ ಔಷಧಿ ಸಿಂಪರಣೆ, ನೀರು ಹಾಯಿಸುವ ಕಾರ್ಯ ಬೇಡ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ. ಜತೆಗೆ ಮಾವು ಬೆಳೆಗಾರರು ಸೇರಿ ಬಳಗವೊಂದನ್ನು ಕಟ್ಟಿಕೊಂಡಿದ್ದು, ಬೆಳೆಗಾರರಿಗೆ ಕಾಲಕಾಲಕ್ಕೆ ಮಾರ್ಗದರ್ಶನ, ಕಾರ್ಯಾಗಾರ ಮಾಡುತ್ತಿರುವ ಕಾರಣ ಈ ಬಾರಿ ಮಾವಿನ ಬೆಳೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಜತೆ ಜತೆಗೆ ಈ ಭಾಗದಲ್ಲಿ ಗುಣಮಟ್ಟದ ಆಪೂಸ್‌ ಹಣ್ಣು ಬರುತ್ತಿದ್ದು, ಬಹುದಿನಗಳ ಮಾವು ಬೆಳೆಗಾರರ ಕನಸಾದ ಮಾವು ಅಭಿವೃದ್ಧಿ ಕೇಂದ್ರ ಧಾರವಾಡದಲ್ಲಾಗುತ್ತಿದೆ. ಇದೇ ಬೇಸಿಗೆಯಲ್ಲಿ ಧಾರವಾಡದಲ್ಲಿಯೇ ಮಾವು ಸಂಸ್ಕರಣೆ ಮಾಡಲು ಅನುಕೂಲ ಕಲ್ಪಿಸಲಾಗುತ್ತಿದೆ ಎಂಬುದು ಉತ್ತಮ ಬೆಳವಣಿಗೆ. ಈ ಬಾರಿ ಸಂಪೂರ್ಣ ಚಳಿ ಜತೆಗೆ ಬಿಸಿಲಿರುವ ಕಾರಣ ಮಾವಿನ ಗಿಡಗಳು ಚೆನ್ನಾಗಿ ಹೂ ಬಿಡಲು ಉತ್ತಮ ವಾತಾವರಣ ಕಲ್ಪಿಸಿದೆ. ಅದೇ ರೀತಿ ಬೆಳೆಗಾರರು ವಿಜ್ಞಾನಿಗಳು ತಿಳಿಸಿದ ಮಾರ್ಗದರ್ಶನ ಪಡೆದು ಬಿಟ್ಟಿರುವ ಹೂ ಉಳಿಸಿಕೊಂಡರೆ ಉತ್ತಮ ಫಸಲು ನಿಶ್ಚಿತ. ಪ್ರತಿ ಹೆಕ್ಟೇರ್‌ಗೆ ನಾಲ್ಕೈದು ಟನ್‌ ನಿರೀಕ್ಷೆ ಹೊಂದಲಾಗಿದೆ.

ಕಾಶೀನಾಥ ಬದ್ರಣ್ಣವರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ