ಸಾವಿಗೀಡಾದವರ ಕುಟುಂಬಗಳಿಗೆ ತಲಾ 30 ಲಕ್ಷ ರು. ಪಾವತಿಸುವಂತೆ ಸೂಚನೆ । ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ತರಾಟೆ
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ ಸೋಂಪುರ ಕೈಗಾರಿಕಾ ಪ್ರದೇಶದ ಕೆ.ಜಿ.ಶ್ರೀನಿವಾಸಪುರ ಗ್ರಾಮದಲ್ಲಿರುವ ಆಶಾ ಸ್ವೀಟ್ಸ್ ಕಂಪನಿಗೆ ಸೇರಿರುವ ಜೆ.ಆರ್.ಆರ್ ಆಕ್ವಾ ಕಂಪನಿಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಅ.31 ರಂದು ಇಬ್ಬರು ಕಾರ್ಮಿಕರು ಬಿದ್ದು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಡಾ. ಪಿ.ಪಿ. ವಾವ ಅವರ ತಂಡ ಕಂಪನಿಗೆ ಭೇಟಿ ನೀಡಿ ಘಟನೆಯ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೃತಪಟ್ಟ ಇಬ್ಬರು ಪೌರಕಾರ್ಮಿಕರ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ತಲಾ 10 ಲಕ್ಷ ರು. ಪಾವತಿಸಿದ್ದು, ನಿಯಮಾವಳಿಯಂತೆ ಸಾವಿಗೀಡಾದ ಪೌರಕಾರ್ಮಿಕರ ಕುಟುಂಬಗಳಿಗೆ ತಲಾ 30 ಲಕ್ಷ ರು.ಗಳನ್ನು ಪಾವತಿಸಲು ತಾಕೀತು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಪೌರ ಕಾರ್ಮಿಕರು ಎಷ್ಟೇ ಒತ್ತಾಯಿಸಿದರೂ ಮ್ಯಾನ್ ಹೋಲ್ ಗಳ ಒಳಗೆ ಇಳಿಯಬಾರದು, ಅದಕ್ಕಾಗಿಯೇ ಇರುವ ಸಕ್ಕಿಂಗ್ ಹಾಗೂ ಜಟ್ಟಿಂಗ್ ಯಂತ್ರಗಳನ್ನು ಬಳಸಬೇಕು ಹಾಗೂ ಇತ್ತೀಚಿಗೆ ರೋಬೋಟ್ ಗಳು ಬಂದಿದ್ದು, ಅವುಗಳ ಸಹಾಯದಿಂದ ಮ್ಯಾನ್ ಹೋಲ್ ಗಳನ್ನು ಸ್ವಚ್ಛ ಮಾಡಬಹುದಾಗಿದೆ, ಕಾರ್ಮಿಕರನ್ನು ಸ್ವಚ್ಛಗೊಳಿಸಲು ಇಳಿಸಿದ ಕಂಪನಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಅಧಿಕಾರಿಗಳಿಗೆ ತರಾಟೆ:ಘಟನೆ ಕುರಿತಂತೆ ಸ್ಥಳೀಯ ಆಡಳಿತ ಯಂತ್ರಕ್ಕೂ ಮಾಹಿತಿ ಇಲ್ಲದಿರುವುದು ಸರಿಯಲ್ಲ, ಘಟನೆ ನಡೆದು ಒಂದು ವಾರ ಕಳೆದರೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿಲ್ಲ, ಪರಿಶೀಲನೆ ನಡೆಸಿಲ್ಲ, ಕುಟುಂಬಸ್ಥರಿಗೆ ಸ್ವಾಂತನ ಹೇಳಿಲ್ಲ. ಪರಿಹಾರ ನೀಡಿಲ್ಲ, ಇಷ್ಟೊಂದು ಬೇಜವಾಬ್ದಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದೀರಾ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಪ್ರೇಮ ಅವರನ್ನು ತರಾಟೆಗೆ ತೆಗೆದುಕೊಂಡರು.
ಕೆಲಸದ ಭರವಸೆ: ಮೃತಪಟ್ಟ ಕುಟುಂಬದ ಸದಸ್ಯರಿಗೆ ಕಂಪನಿಯಲ್ಲಿ ಕೆಲಸ ಕೊಡಿಸುವುದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಮನೆ ನಿರ್ಮಿಸಿಕೊಳ್ಳಲು ಸಹಕಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.ಗ್ರಾಪಂಯಿಂದ ನೋಟಿಸ್ ನೀಡಿ:
ಕೈಗಾರಿಕೆಗಳನ್ನು ನಿರ್ಮಿಸಬೇಕಾದರೆ ಸ್ಥಳೀಯ ಆಡಳಿತವಾದ ಗ್ರಾಪಂ ವತಿಯಿಂದ ನಿರಕ್ಷೇಪಣಾ ಪತ್ರ ಹಾಗೂ ಕಂಪನಿಯವರು ತೆರಿಗೆ ಕಟ್ಟಬೇಕು. ಆದರೆ ಕಂಪನಿಯವರು ಕೆಐಎಡಿಬಿಯಿಂದಲೇ ಅನುಮತಿ ಪತ್ರ ಪಡೆಯುತ್ತಿದ್ದು, ಗ್ರಾಪಂಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಹೊನ್ನೇನಹಳ್ಳಿ ಗ್ರಾಪಂ ಪಿಡಿಒ ಮಂಜಮ್ಮ ವಿಷಯ ತಿಳಿಸಿದಾಗ, ಸ್ಥಳೀಯ ಆಡಳಿತದಿಂದ ಕಂಪನಿಯವರು ಅನುಮತಿ ಪಡೆದಿಲ್ಲವಾದರೆ ಕೂಡಲೇ ಕಂಪನಿಗಳಿಗೆ ನೋಟೀಸ್ ನೀಡುವಂತೆ ಆಯೋಗದ ಸದಸ್ಯ ಪಿ.ವಿ.ವಾವಾ ತಿಳಿಸಿದರು.ಕುಟುಂಬಸ್ಥರ ಜೊತೆ ಚರ್ಚೆ:
ಘಟನಾ ಸ್ಥಳದಲ್ಲಿ ಮೃತಪಟ್ಟ ನವೀನ್ ಹಾಗೂ ಲಿಂಗರಾಜು ಕುಟುಂಬಸ್ಥರು ಹಾಜರಿದ್ದು ಅವರ ಜೊತೆ ಆಯೋಗದ ಸದಸ್ಯ ಪಿ.ವಿ.ವಾವಾ ಚರ್ಚೆ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಮಾಡಿ ನಿಮ್ಮ ಜೊತೆ ನಾವಿರುತ್ತೇವೆ ಎಂದು ಧೈರ್ಯ ತುಂಬಿದರು.ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಗಿರಿಧರನಾಥ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಸೀಲ್ದಾರ್ ಅಮೃತ್ ಅತ್ರೇಶ್, ತಾಪಂ ಇಒ ಲಕ್ಷ್ಮೀ ನಾರಾಯಣ್, ಡಿವೈಎಸ್ ಪಿ ಜಗದೀಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮಾ, ವಾಣಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಭೀಮ್ ಸಿಂಗ್ ಗೂಗಿ, ಟಿ.ಎಲ್.ಎಸ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಹೊನ್ನೇನಹಳ್ಳಿ ಗ್ರಾಪಂ ಪಿಡಿಒ ಮಂಜಮ್ಮ, ಅಧ್ಯಕ್ಷೆ ವಸಂತ ವೆಂಕಟೇಶ್, ಇನ್ಸ್ಪೆಕ್ಟರ್‌ಗಳಾದ ರವಿ, ರಾಜು ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.