ಸಿವಿಲ್‌ ನ್ಯಾಯಾಧೀಶರಾಗಿ ಮಾಳೇನಳ್ಳಿಯ ಮಣಿಕಂಠ ಆಯ್ಕೆ

KannadaprabhaNewsNetwork |  
Published : Feb 23, 2026, 01:45 AM IST
22ಎಚ್ಎಸ್ಎನ್17 :  | Kannada Prabha

ಸಾರಾಂಶ

ಬಡತನದಲ್ಲಿ ಹುಟ್ಟಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದೊಂದಿಗೆ ವಿದ್ಯಾಭ್ಯಾಸ ಮಾಡಿದ ಗ್ರಾಮೀಣ ಪ್ರತಿಭೆಯೊಬ್ಬರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ನಂದನ್‌ಪುಟ್ಟಣ್ಣಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಬಡತನದಲ್ಲಿ ಹುಟ್ಟಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದೊಂದಿಗೆ ವಿದ್ಯಾಭ್ಯಾಸ ಮಾಡಿದ ಗ್ರಾಮೀಣ ಪ್ರತಿಭೆಯೊಬ್ಬರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಮಾಳೇನಹಳ್ಳಿ ಗ್ರಾಮದ ಮಣಿಕಂಠ (೨೮) ಎಂಬುವವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಬಡತನದ ಹಿನ್ನೆಲೆಯಿಂದ ಬಂದ ಮಣಿಕಂಠ, ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬಳಿಕ ಚನ್ನರಾಯಪಟ್ಟಣದಲ್ಲಿ ಪ್ರೌಢಶಾಲೆ ಮತ್ತು ಪದವಿ ಶಿಕ್ಷಣ ಪಡೆದು, ಹಾಸನ ನಗರದ ಎಂ. ಕೃಷ್ಣ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.೨೦೨೧ರಲ್ಲಿ ಕೆ.ಎನ್. ಸುಂದರ್ ರಾಜ್ ಎಂಬುವವರ ಕಚೇರಿಯಲ್ಲಿ ಜೂನಿಯರ್‌ ಆಗಿ ವಕೀಲ ವೃತ್ತಿ ಪ್ರಾರಂಭಿಸಿ, ೨ ವರ್ಷದ ಬಳಿಕ ಸ್ವಂತ ಕಚೇರಿ ತೆರೆದಿದ್ದಾರೆ. ವಕೀಲರಾದ ಬಳಿಕ ಜಡ್ಜ್ ಆಗಬೇಕೆಂದು ಮೊದಲ ಪ್ರಯತ್ನ ನಡೆಸಿದಾಗ ಕೇವಲ ಒಂದೆರಡು ಅಂಕಗಳಿಂದ ಕನಸು ಕೈತಪ್ಪಿತು. ಆದರೂ ಛಲ ಬಿಡದ ಮಣಿಕಂಠ, ಎರಡನೇ ಪ್ರಯತ್ನದಲ್ಲಿ ಸಕ್ಸಸ್ ಆಗಿ ಕೇವಲ ೫ ವರ್ಷಗಳ ಅಂತರದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ನಾನು ಕಾನೂನು ಪದವಿ ಮುಗಿಸಿ ಬಂದ ವೇಳೆ, ಜೂನಿಯರ್ ವಕೀಲರಾಗಿ ಇವರೊಂದಿಗೆ ಕಚೇರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಕೇವಲ ಒಂದು ವರ್ಷದ ಅಂತರದಲ್ಲಿಯೇ ನನಗೆ ವಕೀಲ ವೃತ್ತಿಯ ಸಾಕಷ್ಟು ಅನುಭವವನ್ನು ಕೊಟ್ಟಿದ್ದಾರೆ. ನನ್ನ ಸಹೋದ್ಯೋಗಿ ಎನ್ನುವುದಕ್ಕಿಂತ ನನ್ನ ಸಹೋದರನಾಗಿ ನನಗೆ ಕಾನೂನು ಮಾರ್ಗದರ್ಶಕರಾಗಿ ಜೊತೆಯಲ್ಲಿದ್ದರು. ಇಂದು ಅವರು ನ್ಯಾಯಾಧೀಶರಾಗಿರುವುದು ಒಂದು ಕಡೆ ತುಂಬಾ ಸಂತೋಷವನ್ನು ನೀಡಿದರೆ, ಮತ್ತೊಂದು ಕಡೆ ಇಷ್ಟು ದಿನಗಳ ಕಾಲ ನನ್ನೊಟ್ಟಿಗಿದ್ದು, ಈ ನಮ್ಮ ಕಚೇರಿಯಿಂದ ತೆರಳುತ್ತಿರುವುದು ಬೇಸರವಾಗುತ್ತಿದೆ ಎನ್ನುತ್ತಾರೆ ಸ್ನೇಹಿತ ಶರತ್.ನಮಗೆಲ್ಲಾ ಇಂದು ಸಂತೋಷದ ದಿನ

ನಮಗೆ ಬಹಳ ಖುಷಿಯಾಗುತ್ತಿದೆ. ಚಿಕ್ಕಂದಿನಿಂದಲೂ ಶಿಸ್ತುಬದ್ಧವಾಗಿ ಬೆಳೆದ ನನ್ನ ಮಾವ ಇಂದು ನ್ಯಾಯಾಧೀಶರಾಗಿರುವುದು ನಮ್ಮ ಗ್ರಾಮದಲ್ಲಿಯೇ ಹಬ್ಬದ ವಾತಾವರಣ ತಂದಿದೆ. ಕಾರಣ ನಮ್ಮೂರಿನಲ್ಲಿ ಸರ್ಕಾರಿ ಕೆಲಸವನ್ನು ಪಡೆದವರಲ್ಲಿ ನನ್ನ ಮಾವ ಎರಡನೇಯವರು. ಹಾಗಾಗಿ, ನಮಗೆಲ್ಲಾ ಇಂದು ಸಂತೋಷದ ದಿನವಾಗಿದೆ ಎಂದು ಮಾಳೇನಹಳ್ಳಿ ಪ್ರಜ್ವಲ್ ತಿಳಿಸಿದ್ದಾರೆ.ವಕೀಲ ಶಿವಕುಮಾರ್ ಎಂಬುವವರು ಮಾತನಾಡಿ, ಮಣಿಕಂಠ ನನ್ನ ಸ್ನೇಹಿತ. ನಾನು ಪಕ್ಕದ ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನಲ್ಲಿ ವಕೀಲ ವೃತ್ತಿಯ ತರಬೇತಿ ಪಡೆಯುವ ಸಂದರ್ಭದಲ್ಲಿ ನನಗೆ ಕೆಲವು ಕ್ಲಿಷ್ಟಕರ ವಿಷಯ ಬಂದಾಗ, ನನಗೆ ದೂರವಾಣಿಯ ಮೂಲಕವೇ ಎಲ್ಲವನ್ನು ತಿಳಿಸಿಕೊಡುತ್ತಿದ್ದರು. ನನ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮುಂದಿನ ದಿನದಲ್ಲಿ ಅವರು ನೊಂದವರ ಬದುಕಿಗೆ ಆಶಾಕಿರಣವಾಗಲಿದ್ದಾರೆ. ಅವರ ವೃತ್ತಿ ಬದುಕು ಮತ್ತಷ್ಟು ಉಜ್ವಲವಾಗಲಿ ಎಂದು ಹರಸಿದರು.ನ್ಯಾಯ ಕೊಡಿಸುವಲ್ಲಿ ಮುಂಚೂಣಿ ಪಾತ್ರ:

ಕಾನೂನು ಪದವಿ ಮುಗಿಸಿ ನನ್ನ ಕಚೇರಿಯಲ್ಲಿ ಜೂನಿಯರ್ ಆಗಿ ಬಂದರು. ಬಂದ ಕೆಲವೇ ದಿನದಲ್ಲಿ ಅವರು ಒಬ್ಬ ಉತ್ತಮ ವಕೀಲರಾಗುತ್ತಾರೆ ಎಂಬುದು ತಿಳಿಯಿತು. ಕಾರಣ, ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ದಾಖಲಾದರೂ, ಅದನ್ನು ಬಹಳ ಆಳವಾಗಿ ಅಧ್ಯಯನ ಮಾಡಿ ನ್ಯಾಯ ಕೊಡಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ಜೂನಿಯರ್ ಆಗಿ ಕೇವಲ ೩ ವರ್ಷದಲ್ಲಿಯೇ ಸ್ವಂತ ಕಚೇರಿ ಮಾಡಿಕೊಂಡು ಬಂದಾಗ, ನೀನು ನನಗೆ ಗುರುದಕ್ಷಿಣೆ ಕೊಡುವುದಾದರೇ ಏನನ್ನು ಕೊಡುತ್ತೀಯಾ ಎಂದು ತಮಾಷೆಗೆ ಕೇಳುತ್ತಿದ್ದೆ. ಆತ ನಿಜವಾಗಿಯೂ ನ್ಯಾಯಾಧೀಶರಾಗಿ ಹೋಗುತ್ತಿರುವುದು ನನಗೆ ಮತ್ತು ತಾಲೂಕಿಗೆ ಖುಷಿ ತಂದಿದೆ ಎನ್ನುತ್ತಾರೆ ಮಣಿಕಂಠನ ಸೀನಿಯರ್ ವಕೀಲ ಕೆ. ಎನ್. ಸುಂದರ್ ರಾಜ್ ಮಾತಾಗಿದೆ.

---ನನ್ನ ಅಕ್ಕನ ಮಹದಾಸೆಯಾಗಿತ್ತು: ನಾನು ಜೀವನದಲ್ಲಿ ಜಡ್ಜ್ ಆಗುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನ ಜೀವನದ ಯೌವನಾವಸ್ಥೆಯಲ್ಲಿ ನಡೆದ ಕೆಲವು ಕಹಿ ಘಟನೆಗಳು ನನ್ನನ್ನು ನ್ಯಾಯಾಧೀಶರನ್ನಾಗಿ ನಿಲ್ಲಿಸಿದೆ. ನನ್ನನ್ನು ನ್ಯಾಯಾಧೀಶರನ್ನಾಗಿ ನೋಡಬೇಕೆಂದು ಹೆಚ್ಚು ಕನಸು ಕಂಡಿದ್ದು ನನ್ನ ಅಕ್ಕ. ಆದರೆ, ನಾನು ಈ ದಿನ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದೇನೆ. ಆದರೆ, ನನ್ನ ಜೊತೆ ಅಕ್ಕ ಇಲ್ಲ ಎಂಬುದು ನೋವಿನ ಸಂಗತಿ ಎಂದು ಮಾತನಾಡುವಾಗ ಮಣಿಕಂಠ ಭಾವುಕರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೆಸ್‌ಕ್ರೀಡೆ ಮಕ್ಕಳ ಬುದ್ದಿ ವಿಕಸನಕ್ಕೆ ಸಹಕಾರಿ
ಮಹಿಳೆ ಸಾವು: ಚನ್ನಗಿರಿ ಸರ್ಕಾರಿ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ