ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ ಶಿಕ್ಷಣ ಮತ್ತು ಆರೋಗ್ಯಸೇವೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯ ಉದ್ದೇಶದಿಂದ ಗೂಗಲ್ ಇಂಡಿಯಾದೊಂದಿಗೆ ಒಪ್ಪಂದ ಸಹಿ ಹಾಕಲಾಗಿದೆ.ಈ ಸಹಭಾಗಿತ್ವವು ಮ್ಯಾಜಿಕ್ (ಮಾಹೆ ಏಜೆಂಟಿಕ್ ಇಂಟಲಿಜೆನ್ಸ್ ಕನ್ಸೋಲ್) ಉಪಕ್ರಮದ ಭಾಗವಾಗಿದ್ದು, ಇದರ ಮೂಲಕ ಮಾಹೆಯು ಪೂರ್ಣಪ್ರಮಾಣದ ಎಐ-ಏಜೆಂಟಿಕ್ ವಿವಿಯಾಗಿ ರೂಪುಗೊಳ್ಳಲಿದೆ.
ಈ ಸಹಯೋಗದ ಭಾಗವಾಗಿ ಮಾಹೆಯಲ್ಲಿ ಗೂಗಲ್ ತಂತ್ರಜ್ಞಾನ ಆಧಾರಿತ ಎಐ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸಲಾಗುತ್ತದೆ. ಇದರಿಂದ ಜೆಮಿನಿ ಸೇರಿದಂತೆ ಗೂಗಲ್‌ನ ವಿವಿಧ ಸಾಧನಗಳನ್ನು ಬಳಸಿಕೊಂಡು ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ, ಸಾಧ್ಯತೆಗಳನ್ನು ಅನ್ವೇಷಿಸುವ ಹಾಗೂ ಎಐ ಆಧಾರಿತ ಬೋಧನೆ ಮತ್ತು ಕಲಿಕೆಯನ್ನು ಬಲಪಡಿಸುವುದಕ್ಕೆ ಪ್ರಾಶಸ್ತ್ಯ ಸಿಗಲಿದೆ ಎಂದು ಮಾಹೆ ತಿಳಿಸಿದೆ.
ಮಾಹೆ- ಗೂಗಲ್ ಸಹಭಾಗಿತ್ವದ ಕುರಿತು ಮಾಹೆಯ ಕುಲಪತಿ ಡಾ. ಕೆ. ಶರತ್ ರಾವ್ ಅವರು, ವಿಶೇಷವಾಗಿ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಎಐ ಆಧಾರಿತ ಕಲಿಕೆ, ಸಂಶೋಧನೆ ಹಾಗೂ ಆರೋಗ್ಯ ಸೇವೆಯ ಫಲಿತಾಂಶಗಳನ್ನು ಸುಧಾರಿಸುವ ಅರ್ಥಪೂರ್ಣ ಅನ್ವಯ ಸಾಧ್ಯತೆಗಳನ್ನು ಅಭಿವೃದ್ಧಿ ಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.ಈ ಸಂದರ್ಭದಲ್ಲಿ ಮಾಹೆಯ ಕುಲಸಚಿವ ಡಾ. ಗಿರಿಧರ ಕಿಣಿ, ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿ ಮೇ.ಜ. (ಡಾ.) ಮ್ಯಾಥ್ಯೂಸ್ ಜೇಕಬ್, ಮಾಹೆಯ ಸಿಓಓ ಡಾ. ಆನಂದ್ ವೇಣುಗೋಪಾಲ್, ಮಾಹೆಯ ಐಟಿ ಮತ್ತು ಡಿಜಿಟಲ್ ಟ್ರಾನ್ಸ್‌ಫಾರ್ಮೇಶನ್ ವಿಭಾಗದ ನಿರ್ದೇಶಕ ಡಾ. ಗಣೇಶ್ ಪ್ರಸಾದ್ ಹಾಗೂ ಇಂಡಸ್ಟ್ರಿ ಆ್ಯಂಡ್ ಅಕಾಡೆಮಿಯಾ ಕೊಲಾಬರೇಶನ್ ನಿರ್ದೇಶಕ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.