47 ಸಾವಿರ ಮಂದಿ ಪಿಂಚಣಿ ರದ್ದು ಆತಂಕ: ಸುನಿಲ್‌ ಕುಮಾರ್‌

KannadaprabhaNewsNetwork |  
Published : Oct 07, 2026, 03:00 AM IST
ಬಿಜೆಪಿ ಕಾರ್ಕಳ ಮಂಡಲದ ವತಿಯಿಂದ ಕಾರ್ಕಳ ತಾಲೂಕು ಕಛೇರಿ ಬಳಿ ಸೋಮವಾರ  ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ನಾಲ್ಕು ಬಜೆಟ್ ಮಂಡಿಸಿದರೂ ರಾಜ್ಯದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾಣುತ್ತಿಲ್ಲ. ಹೊಸ ಪಡಿತರ ಚೀಟಿ ವಿತರಣೆಯಾಗದೆ, ಸಾವಿರಾರು ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ ಹಲವು ತಿಂಗಳಿಂದ ಬಾಕಿಯಿದ್ದು, ಉಡುಪಿ ಜಿಲ್ಲೆಯಲ್ಲಿ 47,447 ಫಲಾನುಭವಿಗಳ ಪಿಂಚಣಿ ರದ್ದಾಗುವ ಆತಂಕವಿದೆ ಎಂದು ಮಾಜಿ ಸಚಿವ, ಶಾಸಕ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ.

ಕಾರ್ಕಳ: ನಾಲ್ಕು ಬಜೆಟ್ ಮಂಡಿಸಿದರೂ ರಾಜ್ಯದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾಣುತ್ತಿಲ್ಲ. ಹೊಸ ಪಡಿತರ ಚೀಟಿ ವಿತರಣೆಯಾಗದೆ, ಸಾವಿರಾರು ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ ಹಲವು ತಿಂಗಳಿಂದ ಬಾಕಿಯಿದ್ದು, ಉಡುಪಿ ಜಿಲ್ಲೆಯಲ್ಲಿ 47,447 ಫಲಾನುಭವಿಗಳ ಪಿಂಚಣಿ ರದ್ದಾಗುವ ಆತಂಕವಿದೆ ಎಂದು ಮಾಜಿ ಸಚಿವ, ಶಾಸಕ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ.ಕಾಂಗ್ರೆಸ್ ಸರ್ಕಾರದ 3.75 ವರ್ಷದ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದ್ದು, ಜನರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಕಳ ಮಂಡಲದ ವತಿಯಿಂದ ಕಾರ್ಕಳ ತಾಲೂಕು ಕಚೇರಿ ಬಳಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಗೃಹಲಕ್ಷ್ಮಿ ಯೋಜನೆಯಲ್ಲೂ ಪರಿಷ್ಕರಣೆ ನೆಪದಲ್ಲಿ ಫಲಾನುಭವಿಗಳನ್ನು ಸತಾಯಿಸಲಾಗುತ್ತಿದೆ. ವಸತಿ ಯೋಜನೆಯಡಿ ಹಲವು ಗ್ರಾಮ ಪಂಚಾಯಿತಿಗಳಿಗೆ ಮನೆ ಮಂಜೂರಾಗಿಲ್ಲ. ಸರ್ಕಾರ ‘ಝೀರೋ ಬ್ಯಾಲೆನ್ಸ್’ ಸ್ಥಿತಿಗೆ ತಲುಪಿದೆ ಎಂದು ಅವರು ಟೀಕಿಸಿದರು.ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ರಾಜ್ಯ ಸರ್ಕಾರದ ವಿವಿಧ ಸರ್ವರ್ ಸಮಸ್ಯೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಕಳದಲ್ಲಿ 30 ಸಾವಿರಕ್ಕೂ ಹೆಚ್ಚು ರೈತರು ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ನಿಷ್ಕ್ರಿಯಗೊಂಡಿದ್ದು, ಸರ್ಕಾರವೇ ಇಲ್ಲದಂತಾಗಿದೆ ಎಂದು ಆರೋಪಿಸಿದರು. ಅನರ್ಹರು ಮತದಾರರ ಪಟ್ಟಿಗೆ ಸೇರ್ಪಡೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಕ್ಷೇತ್ರದ ಅಭಿವೃದ್ಧಿಗೆ ಸುಮಾರು ₹3,000 ಕೋಟಿ ಅಗತ್ಯವಿದ್ದರೂ, ಸರ್ಕಾರ ಕೇವಲ ₹38 ಕೋಟಿ ಅನುದಾನ ನೀಡಿದೆ ಎಂದು ಆರೋಪಿಸಿದರು. 2028ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದರು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಂಗ್ರೆಸ್ ಸರ್ಕಾರವನ್ನು ‘ಚೆಕ್ ಬೌನ್ಸ್ ಸರ್ಕಾರ’ ಎಂದು ಟೀಕಿಸಿದರು. ಸಚಿವ ಸಂಪುಟ ಸಭೆ ನಡೆಸಿ ಸಾವಿರಾರು ಕೋಟಿ ಅನುದಾನ ನೀಡುವ ಭರವಸೆ ನೀಡುವ ಬದಲು ಕನಿಷ್ಠ ₹300 ಕೋಟಿಯಾದರೂ ನೀಡಿ ಅಭಿವೃದ್ಧಿಗೆ ಬದ್ಧತೆ ತೋರಿಸಲಿ ಎಂದು ಸವಾಲು ಹಾಕಿದರು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಪಡಿತರ ಚೀಟಿ ಹಾಗೂ ಸರ್ವರ್ ಸಮಸ್ಯೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಬಗರ್‌ಹುಕುಂ ಅರ್ಜಿಗಳ ತಿರಸ್ಕಾರ, ಹೊಸ ತಂತ್ರಾಂಶಗಳಲ್ಲಿನ ತಾಂತ್ರಿಕ ಸಮಸ್ಯೆ ಹಾಗೂ ಪಡಿತರ ಚೀಟಿ ವಿತರಣೆಯ ವಿಳಂಬದ ಬಗ್ಗೆ ಸರ್ಕಾರವನ್ನು ಟೀಕಿಸಿದರು.ಬಿಜೆಪಿ ಕ್ಷೇತ್ರಾಧ್ಯಕ್ಷ ನವಿನ್ ನಾಯಕ್ ಮಾತನಾಡಿ, ಬಿಜೆಪಿ ಆಡಳಿತಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಶಾಶ್ವತ ಯೋಜನೆಗಳಾಗಿವೆ. ಬಿಜೆಪಿ ಕಾರ್ಯಕರ್ತರ ವಿರುದ್ಧ 29 ಪ್ರಕರಣಗಳು ದಾಖಲಾಗಿದ್ದು, ಅವು ರಾಜಕೀಯ ಪ್ರೇರಿತವಾಗಿವೆ ಎಂದು ಆರೋಪಿಸಿದರು. ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ದೂರಿದರು.ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿದರು. ಬಿಜೆಪಿ ಪದಾಧಿಕಾರಿಗಳಾದ ಶ್ಯಾಮಲಾ ಕುಂದರ್, ಮಹಾವೀರ ಹೆಗ್ಡೆ, ಮಣಿರಾಜ್ ಶೆಟ್ಟಿ, ರವೀಂದ್ರ ಮೊಯ್ಲಿ, ರವೀಂದ್ರ ಶೆಟ್ಟಿ, ವಿಖ್ಯಾತ್ ಶೆಟ್ಟಿ, ಸುಮಿತ್ ಶೆಟ್ಟಿ, ಆ್ಯಂಟನಿ ನಕ್ರೆ, ಪೃಥ್ವಿರಾಜ್ ಬಿಲ್ಲಾಡಿ, ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕರುಣಾಕರ ಕೋಟ್ಯಾನ್ ಸ್ವಾಗತಿಸಿದರು.............ಅಕ್ಟೋಬರ್ ತಿಂಗಳಿಡೀ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲಾಗುವುದು ಎಂದು ಬಿಜೆಪಿ ಮುಖಂಡರು ಘೋಷಿಸಿದರು.

ಹೋರಾಟವನ್ನು ಕರಾವಳಿಯಾದ್ಯಂತ ವಿಸ್ತರಿಸಲಾಗುವುದು ಎಂದು ಶಾಸಕ ಸುನಿಲ್‌ ಕುಮಾರ್‌ ಈ ಸಂದರ್ಭ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಮುದ್ದೇಬಿಹಾಳ, ತಾಳಿಕೋಟೆ ಕೆರೆಗಳಿಗೆ ನೀರು
ಸಿಎಂ ಪರಿಹಾರ ನಿಧಿಗೆ ₹ 2,600 ನೀಡಿದ ರೈತ