ಮಂಗಳೂರು: ಮಣಿಪಾಲ ಆರೋಗ್ಯ ಕಾರ್ಡ್-2026ರ ನೋಂದಣಿಗೆ ಆ.31 ಕೊನೆಯ ದಿನವಾಗಿದ್ದು, ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ಇದರ ಮಂಗಳೂರು ಕ್ಯಾಂಪಸ್‌ನ ಸಹ ಕುಲಾಧಿಪತಿ ಡಾ.ದಿಲೀಪ್ ಜಿ. ನಾಯಕ್ ತಿಳಿಸಿದರು.
ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಚಕ್ರಪಾಣಿ ಎಂ. ಮಾತನಾಡಿ, ವೈಯಕ್ತಿಕ ಸದಸ್ಯತ್ವ 350 ರು.ಗೆ ಲಭ್ಯವಿದೆ. ವ್ಯಕ್ತಿ, ಅವರ ಸಂಗಾತಿ ಮತ್ತು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಸಂಖ್ಯೆಯ ಅವಿವಾಹಿತ ಮಕ್ಕಳನ್ನು ಒಳಗೊಂಡ ಕೌಟುಂಬಿಕ ಸದಸ್ಯತ್ವ 700 ರು. ಆಗಿದೆ. ವ್ಯಕ್ತಿ ಸಂಗಾತಿ, 25 ವರ್ಷದೊಳಗಿನ ಯಾವುದೇ ಸಂಖ್ಯೆಯ ಅವಿವಾಹಿತ ಮಕ್ಕಳು ಹಾಗೂ ಅತ್ತೆ-ಮಾವಂದಿರು ಸೇರಿದಂತೆ ನಾಲ್ಕು ಪೋಷಕರನ್ನು ಒಳಗೊಂಡ ಕೌಟುಂಬಿಕ ಪ್ಲಸ್ ಸದಸ್ಯತ್ವ 900 ರು.ಗೆ ಲಭ್ಯವಿದೆ. ಈ ವ್ಯವಸ್ಥಿತ ವಿಧಾನ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಸಮಗ್ರ ಆರೋಗ್ಯ ಸೇವೆ ಕೈಗೆಟಕುವಂತೆ ಮಾಡುತ್ತವೆ. ನೋಂದಾವಣೆಯ ನಂತರದ ತಿಂಗಳ 15ನೇ ತಾರೀಕಿನಿಂದ ಪ್ರಯೋಜನಗಳು ಜಾರಿಗೆ ಬರುತ್ತವೆ. ಅಲ್ಲದೆ 2027ರ ಆಗಸ್ಟ್ 15ರವರೆಗೆ ಈ ಕಾರ್ಡ್‌ಗಳು ಮಾನ್ಯವಾಗಿರುತ್ತವೆ ಎಂದವರು ತಿಳಿಸಿದರು.
ಒಳರೋಗಿಗಳಿಗೂ ಬಿಲ್ ರಿಯಾಯ್ತಿ:ಕೆಎಂಸಿ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಮಡಿ ಮಾತನಾಡಿ, ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಸಮಾಲೋಚನೆಯ ಮೇಲೆ ಶೇ.50ರ ವರೆಗೆ, ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇ.20ರ ವರೆಗೆ ಸಿಟಿ, ಎಂಆರ್‌ಐ, ಅಲ್ಟ್ರಾಸೌಂಡ್, ಎಕ್ಸ್ ರೇ ಮುಂತಾದ ರೇಡಿಯಾಲಜಿ ಪರೀಕ್ಷೆಗಳ ಮೇಲೆ ಶೇ.20ರ ವರೆಗೆ ಮತ್ತು ಆಸ್ಪತ್ರೆಯ ಔಷಧಾಲಯದಲ್ಲಿ ಖರೀದಿಸುವ ಹೊರ ರೋಗಿ(ಒಪಿ) ಔಷಧಿಗಳ ಮೇಲೆ ಶೇ.10ರ ವರೆಗೆ, ವಿವಿಧ ವಾರ್ಡ್ ವಿಭಾಗಗಳಲ್ಲಿ ಕನ್‌ಸ್ಯುಮೇಬಲ್ ಹಾಗೂ ಪ್ಯಾಕೇಜ್ ಹೊರತುಪಡಿಸಿ ಒಳರೋಗಿ(ಐಪಿ) ಬಿಲ್ ಮೇಲೆ ಶೇ.25ರ ವರೆಗೆ ರಿಯಾಯಿತಿ ಪಡೆಯಬಹುದು ಎಂದರು.