ಕನ್ನಡಪ್ರಭ ವಾರ್ತೆ ಹುನಗುಂದತಾಲೂಕನ್ನು ಬರಪೀಡಿತ ತಾಲೂಕನನ್ನಾಗಿ ಘೋಷಣೆ ಮಾಡದಿರುವುದನ್ನು ಖಂಡಿಸಿ ಹುನಗುಂದ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ತಹಸೀಲ್ದಾರ ಕಚೇರಿಯ ಎದುರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹುನಗುಂದ
ತಾಲೂಕನ್ನು ಬರಪೀಡಿತ ತಾಲೂಕನನ್ನಾಗಿ ಘೋಷಣೆ ಮಾಡದಿರುವುದನ್ನು ಖಂಡಿಸಿ ಹುನಗುಂದ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ತಹಸೀಲ್ದಾರ ಕಚೇರಿಯ ಎದುರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.ರೈತ ಸಂಘದ ಮುಖಂಡ ಶಶಿಕಾಂತ ಬಂಡರಗಲ್ಲ ಮಾತನಾಡಿ, ಹುನಗುಂದ ತಾಲೂಕಿನಲ್ಲಿ ಮುಂಗಾರು ಮಳೆ ಸರಿಯಾಗಿ ಆಗಿಲ್ಲ. ಬಿತ್ತನೆ ಮಾಡಿದ ಹೆಸರು, ತೊಗರಿ, ಸೂರ್ಯಕಾಂತಿ ಬೀಜಗಳು ಭೂಮಿಯಲ್ಲಿ ಮೊಳಕೆ ಸಹ ಒಡೆದಿಲ್ಲ, ರೈತರು ಸಾಲವನ್ನು ಮಾಡಿ ಭೂಮಿಯನ್ನು ಬಿತ್ತನೆಯನ್ನು ಮಾಡಿದ್ದಾರೆ. ಆದರೆ, ಸರ್ಕಾರವು ಹುನಗುಂದ ತಾಲೂಕನನ್ನು ಬರ ಪೀಡಿತ ತಾಲೂಕನನ್ನಾಗಿ ಘೋಷಿಸದೇ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದೆ. ಆದ್ದರಿಂದ ಕೂಡಲೇ ಬರ ಪೀಡಿತ ತಾಲೂಕನ್ನಾಗಿ ಘೋಷಿಸಿ ರೈತರಿಗೆ ಬರ ಪರಿಹಾರ ಹಣ ಹಾಕಬೇಕು. ಪಿಕೆಪಿಎಸ್ ನ ರೈತರ ಸಾಲವನ್ನು ಮನ್ನಾ ಮಾಡಿ ಪ್ರತಿ ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಗುರು ಗಾಣಿಗೇರ ಮಾತನಾಡಿ, ಹುನಗುಂದ ತಾಲೂಕಿನಲ್ಲಿ ನದಿಗಳು ಹರಿಯುತ್ತಿದ್ದರು. ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಬಿಟ್ಟಿಲ್ಲ, ಬರಗಾಲ ಪೀಡಿತ ತಾಲೂಕನ್ನಾಗಿ ಇಳಕಲ್ಲ ತಾಲೂಕು ಮಾತ್ರ ಘೋಷಣೆಯನ್ನು ಸರ್ಕಾರ ಮಾಡಿರುವುದು ಹುನಗುಂದ ತಾಲೂಕಿಗೆ ಮಲತಾಯಿ ಧೋರಣೆಯನ್ನು ಸರ್ಕಾರ ಮಾಡಿದೆ. ಅದ್ದರಿಂದ ಕೂಡಲೇ ಹುನಗುಂದ ತಾಲೂಕನ್ನು ಬರಗಾಲ ಪೀಡಿತ ತಾಲೂಕನ್ನಾಗಿ ಘೋಷಣೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.ಯುವರೈತ ಬಸನಗೌಡ ಪಾಟೀಲ ಮಾತನಾಡಿ, ಹಿಂಗಾರು ಮಳೆ ಕೊರತೆಯಿಂದ ತಾಲೂಕಿನ ಬೆಳೆಗಳು ಒಣಗುತ್ತಿವೆ. ಆದರೆ, ಹುನಗುಂದ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡದಿರುವುದು ತಾಲೂಕಿನ ರೈತರಿಗೆ ಸರ್ಕಾರ ದ್ರೋಹ ಮಾಡಿದೆ. ಕಳೆದ ವರ್ಷದ ಹಿಂಗಾರು ಮುಂಗಾರು ಬೆಳೆಯ ಹಣ ಬಿಡುಗಡೆಯಾದರೂ ರೈತರಿಗೆ ಜಮಾ ಆಗಿಲ್ಲ. ಕೂಡಲೇ ಹಣ ನೀಡಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ರೈತರು ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ನಂತರ ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.ವಕೀಲ ವಿರೇಶ ಬಂಡಿ, ರಾಜಶೇಖರ ಗೌಡರ ಮಾತನಾಡಿದರು. ರೈತ ಸಂಘದ ಅಧ್ಯಕ್ಷ ಬಸನಗೌಡ ಪೈಲ, ಕಾರ್ಯಾಧ್ಯಕ್ಷ ರಸೂಲಸಾಬ ತಹಸೀಲ್ದಾರ, ರಾಜು ಬಡಿಗೇರ, ಎಸ್.ಎನ್.ತೋಟದ, ನಾಗರಾಜ ಹೂಗಾರ, ಮುತ್ತಪ್ಪ ಯಳಗುಂಡಿ, ನಾಗೇಶ ಗಂಜೀಹಾಳ, ರಾಜೀಸಾಬ ನದಾಫ್ ಸೇರಿದಂತೆ ತಾಲೂಕಿನ ರೈತರು ಆಗಮಿಸಿದರು.