ಕನ್ನಡಪ್ರಭ ವಾರ್ತೆ ಉಡುಪಿ
ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವಲ್ಲಿ ಮಣಿಪಾಲ ಸಂಸ್ಥೆಗಳು ಬಹಳ ಹಿಂದಿನಿಂದಲೂ ವಿಶೇಷ ಬದ್ಧತೆಯನ್ನು ನಿರ್ವಹಿಸುತ್ತಾ ಬಂದಿದೆ. ಕಾರ್ಮಿಕ ಇಲಾಖೆಯ ಜನಪರ ಯೋಜನೆಗಳನ್ನು ಅಸಂಘಟಿತ ಕಾರ್ಮಿಕರ ವಲಯದಲ್ಲಿ ಜಾಗೃತಿ ಮೂಡಿಸುವ ಮತ್ತು ಅದರ ಸೌಲಭ್ಯತೆಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವಂತಹ ಶಿಬಿರಗಳನ್ನು ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ನಿರಂತರವಾಗಿ ಆಯೋಜಿಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಮಣಿಪಾಲ ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ನ ಪ್ರಾಂಶುಪಾಲ ಡಾ. ಬಿ. ಎಚ್. ವೆಂಕಟರಮಣ ಪೈ ಅವರು ಅಭಿಮತ ವ್ಯಕ್ತಪಡಿಸಿದ್ದಾರೆ.ಭಾನುವಾರ ತಮ್ಮ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಆಶ್ರಯದಲ್ಲಿ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ, ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ ಇವರ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರದಿಂದ ನೂತನವಾಗಿ ಸ್ಥಾಪನೆಯಾದ ಸಾರಿಗೆ ಮಂಡಳಿಗೆ ಅಸಂಘಟಿತ ಗ್ಯಾರೇಜು ಕಾರ್ಮಿಕರ ಆನ್ಲೈನ್ ನೊಂದಣಿ, ಸಾರ್ವಜನಿಕರಿಗಾಗಿ ಆಧಾರ್ ತಿದ್ದುಪಡಿ ಮತ್ತು ಅಂಚೆ ವಿಮಾ ಯೋಜನೆ ನೋಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಮಣಿಪಾಲ ಕೌಶಲ್ಯ ತರಬೇತಿ ಕೇಂದ್ರದ ಆಡಳಿತ ಅಧಿಕಾರಿ ಡಾ. ಕಾಂತರಾಜ್ ಎ.ಎನ್., ಉಡುಪಿ ಕ್ಲಾಸಿಕ್ ಆಟೋಮೊಬೈಲ್ ಆಡಳಿತ ನಿರ್ದೇಶಕ ಸಂತೋಷ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಶಾ ಅಲ್ತಾಫ್ ಅಹಮದ್, ಕಾರ್ಮಿಕ ನಿರೀಕ್ಷಿತರಾದ ಸಂಜಯ್ ಮತ್ತು ಮಲ್ಲಿಕಾ ಪ್ರಸಾದ್, ಭಾರತೀಯ ಅಂಚೆ ಇಲಾಖೆಯ ಪ್ರತಿನಿಧಿಗಳಾದ ಜೀವನ್ ಮತ್ತು ತೌಸಿಫ್, ಸಂಘದ ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ ಮತ್ತು ಮುಖ್ಯಸ್ಥ ವಿಲ್ಸನ್ ಅಂಚನ್, ಗೌರವ ಸಲಹೆಗಾರ ಉದಯ್ ಕಿರಣ್, ಉಪಾಧ್ಯಕ್ಷರಾದ ರಾಜೇಶ್ ಜತ್ತನ್, ಕ್ರೀಡಾ ಕಾರ್ಯದರ್ಶಿ ಮಧುಸೂದನ್ ಕನ್ನರ್ಪಾಡಿ ಮತ್ತಿತರು ಇದ್ದರು.ಅಧ್ಯಕ್ಷ ರೋಷನ್ ಕರ್ಕಡ ಕಾಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ವಿನಯ್ ಕುಮಾರ್ ಸ್ವಾಗತಿಸಿದರು. ಕೋಶಾಧಿಕಾರಿ ಸಂತೋಷ ಕುಮಾರ್ ವಂದಿಸಿದರು. ನವೀನ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಣೆ ಮಾಡಿದರು.