- ಜಿಲ್ಲೆಯ 81 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆ । ಸೂಕ್ಷ್ಮ, ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಾಗಿ ವಿಂಗಡಿಸಿಲ್ಲ
- - - ಕನ್ನಡಪ್ರಭ ವಾರ್ತೆ ದಾವಣಗೆರೆಹೈಸ್ಕೂಲ್ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೈಲುಗಲ್ಲಾದ ಎಸ್ಸೆಸ್ಸೆಲ್ಸಿ ಪರೀಕ್ಷೆ 2024-25 ಜಿಲ್ಲಾದ್ಯಂತ ಮಾ.21ರಿಂದ ಆರಂಭವಾಗಿ ಏ.4 ರವರೆಗೆ ನಡೆಯಲಿದೆ. ಜಿಲ್ಲೆಯ 81 ಪರೀಕ್ಷಾ ಕೇಂದ್ರಗಳಲ್ಲಿ ಖಾಸಗಿ, ಖಾಸಗಿ ಪುನರಾವರ್ತಿತ, ಪುನರಾವರ್ತಿತ ವಿದ್ಯಾರ್ಥಿಗಳು, ಹೊಸ ವಿದ್ಯಾರ್ಥಿಗಳು ಸೇರಿದಂತೆ 22,579 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಹೊಸದಾಗಿ ಒಟ್ಟು 21704 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದು, ಇದರಲ್ಲಿ 10587 ಬಾಲಕ, 11117 ಬಾಲಕಿಯರಿದ್ದಾರೆ. ಅಲ್ಲದೇ ಖಾಸಗಿ 194, ಖಾಸಗಿ ಪುನರಾವರ್ತಿತ 41 ಹಾಗೂ ಪುನರಾವರ್ತಿತ 640 ವಿದ್ಯಾರ್ಥಿಗಳು ಸೇರಿದಂತೆ 22579 ವಿದ್ಯಾರ್ಥಿಗಳು ಒಟ್ಟು 81 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಸಾಶಿಇ ಉಪ ನಿರ್ದೇಶಕ ಜಿ.ಕೊಟ್ರೇಶ ತಿಳಿಸಿದ್ದಾರೆ.ಚನ್ನಗಿರಿ ತಾಲೂಕಿನಲ್ಲಿ 16 ಪರೀಕ್ಷಾ ಕೇಂದ್ರಗಳು, ದಾವಣಗೆರೆ ಉತ್ತರದಲ್ಲಿ 14, ದಾವಣಗೆರೆ ದಕ್ಷಿಣದಲ್ಲಿ 17, ಹರಿಹರದಲ್ಲಿ 12, ಹೊನ್ನಾಳಿಯಲ್ಲಿ 11, ಜಗಳೂರಿನಲ್ಲಿ 11 ಕೇಂದ್ರ ಸೇರಿದಂತೆ ಒಟ್ಟು 81 ಪರೀಕ್ಷಾ ಕೇಂದ್ರಗಳಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದು, ವೆಬ್ ಕಾಸ್ಟಿಂಗ್ ಇರಲಿದೆ. ದಾವಣಗೆರೆ ಜಿಲ್ಲೆಯಲ್ಲಿ 475 ಪ್ರೌಢಶಾಲೆಗಳಿದ್ದು ಇದರಲ್ಲಿ 135 ಸರ್ಕಾರಿ, 166 ಅನುದಾನಿತ, 169 ಅನುದಾನ ರಹಿತ ಪ್ರೌಢಶಾಲೆಗಳ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜಿಲ್ಲೆಯ 41 ಸರ್ಕಾರಿ, 35 ಅನುದಾನಿತ, 6 ಅನುದಾನ ರಹಿತ ಪ್ರೌಢಶಾಲೆಗಳು ಸೇರಿದಂತೆ 81 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಸಂಜೆವರೆಗೂ ಪರೀಕ್ಷೆಗೆ ಎಲ್ಲ ಅಂತಿಮ ಸಿದ್ಧತೆ ಕೈಗೊಳ್ಳಲಾಗಿದೆ. ಇಲಾಖೆ ಸೂಚನೆಯ ಅನ್ವಯ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆಗೆ ನಿಯೋಜನೆಗೊಂಡ ಯಾವುದೇ ಸಿಬ್ಬಂದಿ ಮೊಬೈಲ್‌ಗಳನ್ನು ಪರೀಕ್ಷಾ ಕೇಂದ್ರದೊಳಗೆ ಒಯ್ಯುವಂತಿಲ್ಲ. ಮುಖ್ಯ ಅಧೀಕ್ಷಕರು ಮಾತ್ರ ಮೊಬೈಲ್ ಬಳಸಲು ಅವಕಾಶ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರು, ಜಾಗೃತ ದಳ, ಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು, ಮೊಬೈಲ್ ಸ್ವಾಧೀನಾಧಿಕಾರಿ ಸೇರಿದಂತೆ 1 ಕೇಂದ್ರದಲ್ಲಿ ಅಂದಾಜು 20 ಜನರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪರೀಕ್ಷೆ ನಡೆಯುವ ಪ್ರತಿಯೊಂದು ಕೇಂದ್ರಕ್ಕೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಸಲದ ಪರೀಕ್ಷೆಗೆ ಯಾವುದೇ ಸೂಕ್ಷ್ಮ, ಅತೀ ಸೂಕ್ಷ್ಮ ಕೇಂದ್ರಗಳನ್ನು ಗುರುತಿಸಿಲ್ಲ. ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಿಂದ ಸಕಾಲದಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಮಾರ್ಗಗಳನ್ನು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿ, ಯಾವುದೇ ಅವ್ಯವಹಾರ ನಡೆಯದಂತೆ ಸುಗಮವಾಗಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿ.ಕೊಟ್ರೇಶ ತಿಳಿಸಿದ್ದಾರೆ.ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುವ ಜಿಲ್ಲೆಯ 81 ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಜೆರಾಕ್ಸ್ ಮತ್ತು ಸೈಬರ್ ಕೇಂದ್ರಗಳನ್ನು ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಆದೇಶ ಹೊರಡಿಸಿದ್ದಾರೆ.
- - -ಬಾಕ್ಸ್* ಮೊದಲ ಪರೀಕ್ಷೆ ವಿಷಯಗಳಿವು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನವಾದ ಶುಕ್ರವಾರ ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ವಿಷಯಕ್ಕೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ.
- - --20ಕೆಡಿವಿಜಿ3, 4, 5.ಜೆಪಿಜಿ:
ದಾವಣಗೆರೆ ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಾ.21ರಿಂದ ಆರಂಭವಾಗುವ ಹಿನ್ನೆಲೆ ಶಿಕ್ಷಣ ಇಲಾಖೆ ಅಧಿಕಾರಿ, ಸಿಬ್ಬಂದಿ ಅಂತಿಮ ಸಿದ್ಧತೆಯಲ್ಲಿ ತೊಡಗಿರುವುದು.