ಮಣಿಪಾಲ: ಮಣಿಪಾಲವನ್ನು ಶಿಕ್ಷಣಕಾಶಿಯನ್ನಾಗಿಸಿದ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಡಾ. ಟಿ.ಎಂ.ಎ. ಪೈ ಅವರ 128ನೇ ಜನ್ಮದಿನವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಮಾಹೆ ಟ್ರಸ್ಟ್ ಹಾಗೂ ಎಂಇಎಂಜಿ ಅಧ್ಯಕ್ಷ ಡಾ.ರಂಜನ್ ಆರ್. ಪೈ ಮಾತನಾಡಿ, ದೇಶದ ಪ್ರಗತಿಗೆ ಶಿಕ್ಷಣ ಮತ್ತು ಆರೋಗ್ಯ ಅತ್ಯಗತ್ಯ ಎಂಬುದು ಡಾ. ಟಿ. ಎಂ. ಎ. ಪೈ ಅವರ ದೃಢ ನಂಬಿಕೆಯಾಗಿತ್ತು. ಮಣಿಪಾಲ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವರ ಸೇವಾ ಮನೋಭಾವವೇ ಕಾರಣ. ಗುಣಮಟ್ಟದ ಕಲಿಕೆ, ಹೊಸ ಆವಿಷ್ಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಎತ್ತಿ ಹಿಡಿಯುವ ಮೂಲಕ ಅವರ ಆಶಯವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಂಕಲ್ಪವನ್ನು ನಾವು ಮಾಡಿದ್ದೇವೆʼ ಎಂದು ಹೇಳಿದರು. ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಆರೋಗ್ಯ ತಲುಪಬೇಕು ಎಂದು ಡಾ. ಟಿ.ಎಂ.ಎ. ಪೈ ಅವರು ಕನಸು ಕಂಡಿದ್ದರು. ಅಂದು ಅವರು ಹಾಕಿಕೊಟ್ಟ ಭದ್ರಬುನಾದಿಯೇ ಇಂದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದೆ. ಕೇವಲ ಒಂದು ಸಂಸ್ಥೆಯನ್ನು ಕಟ್ಟುವುದಷ್ಟೇ ಅವರ ಗುರಿಯಾಗಿರಲಿಲ್ಲ, ಬದಲಾಗಿ ಒಂದು ಸಮರ್ಥ ಸಮಾಜವನ್ನು ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು. ಮಣಿಪಾಲ್ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ, ಡಾ. ಟಿ.ಎಂ.ಎ. ಪೈ ಫೌಂಡೇಶನ್‌ನ ಅಧ್ಯಕ್ಷ ಟಿ. ಅಶೋಕ್ ಪೈ, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಎಜಿಇ ಉಪಾಧ್ಯಕ್ಷರಾದ ಟಿ. ಸತೀಶ್ ಯು. ಪೈ ಮತ್ತು ಮಾಹೆ ಕುಲಪತಿ ಲೆ. ಜ. (ಡಾ.) ಎಂ. ಡಿ. ವೆಂಕಟೇಶ್ ಅವರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ: ಶೈಕ್ಷಣಿಕ ಸಾಧನೆ ಮತ್ತು ಸಮಾಜ ಸೇವೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಕುಂದಾಪುರ ಮೋಹನ್ ಮತ್ತು ಲತಾ ಭಂಡಾರ್ಕರ್ ಹಾಗೂ ಕದಂಬಿ ವಿದ್ಯಾರ್ಥಿವೇತನಗಳನ್ನು ವಿತರಿಸಲಾಯಿತು. ಇಂದಿರಾ ಎಸ್. ಬಲ್ಲಾಳ್ ಮತ್ತು ಡಾ. ಎಚ್. ಎಸ್. ಬಲ್ಲಾಳ್ ಅವರ ಆಶಯದಂತೆ ರೂಪಿಸಲಾದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ದತ್ತಿ ನಿಧಿಯನ್ನು ಬಿಡುಗಡೆ ಮಾಡಲಾಯಿತು. ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ವಿವಿಧ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದ ೪೨ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಿಬ್ಬಂದಿಗೆ ಸನ್ಮಾನ: ಸಮಾಜದ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸುತ್ತಿರುವ ’ತೆರೆಯ ಮರೆಯ ಸಾಧಕರನ್ನುಕಾರ್ಯಕ್ರಮದಲ್ಲಿ ಗುರುತಿಸಲಾಯಿತು. ನರ್ಸಿಂಗ್, ಅಂಗನವಾಡಿ ಮತ್ತು ಹಾಸ್ಟೆಲ್ ಉಸ್ತುವಾರಿ ವಿಭಾಗಗಳಲ್ಲಿ ಶ್ಲಾಘನೀಯ ಸೇವೆ ನೀಡಿದವರಿಗೆ ಶಾರದಾ ಎಂ. ಪೈ - ಡಾ. ಪದ್ಮಾ ರಾವ್ ಮತ್ತು ಗೀತಾ ಕೆ. ನಾಯಕ್ ಅವರ ಸ್ಮರಣಾರ್ಥ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.