ಹಾವೆಮುಲ್‌ಗೆ ಮಂಜನಗೌಡ ಅಧ್ಯಕ್ಷ, ಉಜ್ಜನಗೌಡ ಉಪಾಧ್ಯಕ್ಷ

KannadaprabhaNewsNetwork | Published : Mar 18, 2025 12:32 AM

ಸಾರಾಂಶ

ಸೋಮವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು.

ಹಾವೇರಿ: ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ ಮಂಜನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಉಜ್ಜನಗೌಡ ಮಾವಿನತೋಪ ಅವರು ಅವಿರೋಧವಾಗಿ ಆಯ್ಕೆಯಾದರು.

ಹಾವೆಮುಲ್ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೋಮವಾರ ನಗರದ ಪಶು ಆಸ್ಪತ್ರೆ ಆವರಣದಲ್ಲಿರುವ ಹಾಲು ಒಕ್ಕೂಟದ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ರಾಣಿಬೆನ್ನೂರು ತಾಲೂಕು ಹಿರೇಮಾಗನೂರಿನ ಮಂಜನಗೌಡ ಹನುಮಂತಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಹಿರೇಕೆರೂರು ತಾಲೂಕು ದೀವಿಗಿಹಳ್ಳಿಯ ಉಜ್ಜನಗೌಡ ಹೂವನಗೌಡ ಮಾವಿನತೋಪ ಅವರು ಅವಿರೋಧವಾಗಿ ಆಯ್ಕೆಯಾದರು.

ಕಳೆದ ಮಾ. 2ರಂದು ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 6 ಜನ ಕಾಂಗ್ರೆಸ್‌ ಹಾಗೂ ಇಬ್ಬರು ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದರು. ಸೋಮವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು.

ಮಾದರಿ ಒಕ್ಕೂಟವನ್ನಾಗಿಸಿ: ಆಯ್ಕೆ ಪ್ರಕ್ರಿಯೆ ಬಳಿಕ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಯಲ್ಲಿ ಎಲ್ಲ ನಿರ್ದೇಶಕರು ಒಗ್ಗಟ್ಟಾಗಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಶ್ಲಾಘನೀಯ. ಸಹಕಾರ ಚುನಾವಣೆಯಲ್ಲಿ ಎಲ್ಲರೂ ಪಕ್ಷಾತೀತವಾಗಿ ನಡೆದುಕೊಂಡಾಗ ಮಾತ್ರ ಸಂಸ್ಥೆ ಏಳಿಗೆಯಾಗಲು ಸಾಧ್ಯ. ಹಾವೇರಿ ಹಾಲು ಒಕ್ಕೂಟ ಹೊಸದಾಗಿ ರಚನೆಯಾಗಿದ್ದು, ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರ ಒಕ್ಕೂಟದ ಜತೆಗಿದ್ದು, ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ₹20 ಕೋಟಿ ಹಾನಿಯಲ್ಲಿರುವ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯಬೇಕಿದೆ. ರಾಜ್ಯದಲ್ಲಿ ಮಾದರಿ ಒಕ್ಕೂಟವನ್ನಾಗಿಸುವಲ್ಲಿ ಮುಂದಾಗಬೇಕು. ಆ ನಿಟ್ಟಿನಲ್ಲಿ ಆಡಳಿತ ಮಂಡಳಿ ನಿರ್ಣಯ ಕೈಗೊಳ್ಳಬೇಕು ಎಂದರು.ರೈತರ ಶ್ರೇಯೋಭಿವೃದ್ಧಿಗೆ ಆದ್ಯತೆ: ಕಳೆದ ಎರಡೂವರೆ ವರ್ಷದಲ್ಲಿ ಹಾವೇರಿ ಹಾಲು ಒಕ್ಕೂಟ ಆರ್ಥಿಕವಾಗಿ ₹20 ಕೋಟಿ ನಷ್ಟದಲ್ಲಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು. ಜಿಲ್ಲೆಯ ರೈತರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಿ, ನಷ್ಟದಲ್ಲಿರುವ ಸಂಸ್ಥೆಯನ್ನು ವರ್ಷದೊಳಗಾಗಿ ಲಾಭದ ಹಾದಿಯಲ್ಲಿ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ ಎಂದು ಹಾವೆಮುಲ್ ನೂತನ ಅಧ್ಯಕ್ಷ ಮಂಜನಗೌಡ ಪಾಟೀಲ ತಿಳಿಸಿದರು.ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಹಾಲು ಉತ್ಪಾದಿಸುವ ರೈತರಿಗೆ ಅನ್ಯಾಯವಾಗುತ್ತಿದ್ದು, ಅವರಿಗೆ ತೊಂದರೆಯಾಗದ ರೀತಿಯಲ್ಲಿ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲಾಗುವುದು. ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಿ, ರೈತರನ್ನು ಉನ್ನತೀಕರಿಸುವುದೆ ಆದ್ಯತೆಯಾಗಿದೆ. ₹20 ಕೋಟಿ ನಷ್ಟದ ಬಗ್ಗೆ ನಿರ್ದೇಶಕರ ಜತೆಗೆ ಚರ್ಚಿಸಲಾಗುವುದು. ಸಂಸ್ಥೆಯಲ್ಲಿ ಕೆಲವು ಆಡಳಿತಾತ್ಮಕ ಬದಲಾವಣೆ ತಂದು ಒಗ್ಗಟ್ಟಿನಿಂದ ಕೆಲಸ ಮಾಡಿ ಲಾಭ ಹೆಚ್ಚಿಸುತ್ತೇವೆ. ಈ ಹಿಂದಿನ ಆಡಳಿತ ಮಂಡಳಿಯವರು ₹2 ಪ್ರೋತ್ಸಾಹಧನ ನೀಡಿದ್ದು, ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿರಲಿಲ್ಲ. ಸಮಯಕ್ಕೆ ಸರಿಯಾಗಿ ಪೇಮೆಂಟ್ ಮಾಡುತ್ತಿರಲಿಲ್ಲ. ವಾರದಲ್ಲಿ ಮೂರ್ನಾಲ್ಕು ದಿನ ಹಾಲಿನ ಗುಣಮಟ್ಟ ಕಡಿಮೆ ಎಂದು ತೋರಿಸಿ ರೈತರಿಗೆ ಕಡಿಮೆ ಹಣ ನೀಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಈ ವೇಳೆ ಶಾಸಕರಾದ ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಯಾಸೀರಖಾನ್ ಪಠಾಣ್, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹುಡಾ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಹಾಲು ಒಕ್ಕೂಟದ ನಿರ್ದೇಶಕರಾದ ಬಸವೇಶಗೌಡ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಅಶೋಕ ಪಾಟೀಲ, ಚಂದ್ರಪ್ಪ ಜಾಲಗಾರ, ತಿಪ್ಪಣ್ಣ ಸಾತಣ್ಣನವರ, ಶಶಿಧರ ಯಲಿಗಾರ, ಶಂಕರಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಎಚ್.ಟಿ. ಅಶೋಕಗೌಡ ಇತರರು ಇದ್ದರು. ರು.

Share this article