ಕನ್ನಡಪ್ರಭ ವಾರ್ತೆ ಬೆಂಗಳೂರು
ಕಿದ್ವಾಯಿ ಸ್ಮಾರಕ ಗ್ರಂಥಿ (ಕ್ಯಾನ್ಸರ್) ಸಂಸ್ಥೆಯ ಅಕ್ರಮಗಳನ್ನು ಸರಿಪಡಿಸಲು ಮತ್ತು ಸಂಸ್ಥೆಯ ಕಾರ್ಯ ಚಟುವಟಿಕೆಯ್ನು ಸರಿದಾರಿಗೆ ತರಲು ಆರು ತಿಂಗಳ ಅವಧಿವರೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್.ಮಂಜುಶ್ರೀ ಅವರನ್ನು ಆಡಳಿತಾಧಿಕಾರಿ ಆಗಿ ಸರ್ಕಾರ ನೇಮಕ ಮಾಡಿದೆ.ಕಿದ್ವಾಯಿ ಸಂಸ್ಥೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆಗೆ ಅರುಂಧತಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ದೂರುಗಳು ನೈಜತೆಯಿಂದ ಕೂಡಿವೆ. ಕಿದ್ವಾಯಿ ಸಂಸ್ಥೆಯ ಒಟ್ಟಾರೆ ಕಾರ್ಯ ನಿರ್ವಹಣೆಯಲ್ಲಿ ಸಮರ್ಥ ಆಡಳಿತ ವ್ಯವಸ್ಥೆಯ ಕೊರತೆ ಕಂಡು ಬಂದಿರುತ್ತದೆ ಎಂದು ವರದಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪೆಟ್ ಸ್ಕ್ಯಾನರ್ ಖರೀದಿ ಸೇರಿದಂತೆ ಟೆಂಡರ್ ಅಕ್ರಮ ಹಾಗೂ ಕಳಪೆ ಗುಣಮಟ್ಟದ ಚಿಕಿತ್ಸೆ ಮತ್ತಿತರ ಆರೋಪಗಳು ಸಾಬೀತಾಗಿದ್ದವು. ಈ ಹಿನ್ನೆಲೆಯಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಹುದ್ದೆಯಿಂದ ಡಾ। ವಿ.ಲೋಕೇಶ್ ಅವರನ್ನು ವಜಾಗೊಳಿಸಲಾಗಿತ್ತು. ಇದೇ ವೇಳೆ ಆಸ್ಪತ್ರೆಯ ತಾತ್ಕಾಲಿಕ ನಿರ್ದೇಶಕರನ್ನಾಗಿ ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ। ಸೈಯದ್ ಅಲ್ತಾಫ್ ಅವರನ್ನು ನೇಮಕ ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಆಡಳಿತವನ್ನು ಸರಿದಾರಿಗೆ ತರಲು ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಮಂಜುಶ್ರೀ ಅವರು ಎರಡೂ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.ಡಾ। ಲೋಕೇಶ್ ಅಮಾನತು
ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ವಜಾಗೊಂಡಿದ್ದ ಡಾ। ವಿ.ಲೋಕೇಶ್ ಅವರನ್ನು ಪ್ರಾಧ್ಯಾಪಕ ಹುದ್ದೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಮಾಡಿದೆ.ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಲ್ಪಟ್ಟಿರುವ ಡಾ। ವಿ.ಲೋಕೇಶ್ ಅವರನ್ನು ರೇಡಿಯೇಷನ್ ಆಂಕಾಲಜಿ ವಿಭಾಗದ ಪ್ರಾಧ್ಯಾಪಕ ಹುದ್ದೆಯಲ್ಲಿ ಮುಂದುವರೆಸಲಾಗಿತ್ತು. ಇದೀಗ ಗುರುವಾರ ಲೋಕೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.