ಮಾನವ ಕುಲಕ್ಕೆ ಸವಿತಾ ಸಮಾಜದ ಸೇವೆ ಅಗತ್ಯ

KannadaprabhaNewsNetwork | Published : Jul 22, 2024 1:21 AM

ಸಾರಾಂಶ

ಸವಿತಾ ಸಮಾಜ ಒಂದು ಚಿಕ್ಕ ಸಮುದಾಯವಾದರೂ ಇಡೀ ಮಾನವ ಕುಲಕ್ಕೆ ಅವರ ಸೇವೆ ಅಗತ್ಯವಿದೆ

ಕನ್ನಡಪ್ರಭ ವಾರ್ತೆ ತುಮಕೂರು ಸವಿತಾ ಸಮಾಜ ಒಂದು ಚಿಕ್ಕ ಸಮುದಾಯವಾದರೂ ಇಡೀ ಮಾನವ ಕುಲಕ್ಕೆ ಅವರ ಸೇವೆ ಅಗತ್ಯವಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಸಾಪ ಹಾಗೂ ತುಮಕೂರು ಜಿಲ್ಲಾ ಸವಿತಾ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜನ್ಮ ದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಮಾನವ ದೇವರ ಸೃಷ್ಟಿಯಾದರೆ, ಸುಂದರ ಮನುಷ್ಯ ಸವಿತಾ ಸಮಾಜದ ಸೃಷ್ಟಿಯಾಗಿದ್ದು, ರಾಜ ಮಹಾರಾಜರಿಂದ, ಸಾಮಾನ್ಯ ಮನುಷ್ಯರವರೆಗೂ ಇವರ ಸೇವೆ ವಿಸ್ತರಿಸಿದೆ ಎಂದರು. ಸವಿತಾ ಸಮಾಜ ಸೇರಿದಂತೆ ಬಹುತೇಕ ಕಾಯಕವನ್ನೇ ವೃತ್ತಿ ಮತ್ತು ಪ್ರವೃತ್ತಿಯಾಗಿಸಿಕೊಂಡಿದ್ದ ಅನೇಕ ಸಮುದಾಯಗಳು ಊರೂರು ತಿರುಗಿ, ಅವಶ್ಯವಿದ್ದವರಿಗೂ ತಮ್ಮ ಸೇವೆಯನ್ನು ಸಲ್ಲಿಸುತ್ತಾ, ಸಮುದಾಯಗಳ ನಡುವಿನ ಸೇತುವೆಯಾಗಿ ದುಡಿಯುತ್ತಿದ್ದವರು. ಹಡಪದ ಅಪ್ಪಣ್ಣ ಅವರು ಎಂದಿಗೂ ತಮ್ಮ ವೃತ್ತಿಯನ್ನು ಕೀಳಾಗಿ ಕಂಡವರಲ್ಲ. ಹಾಗಾಗಿ ಅವರ ಆದರ್ಶಗಳನ್ನು ಇಂದಿನ ಸವಿತಾ ಸಮಾಜ ಮೈಗೂಡಿಸಿಕೊಂಡು, ದುಡಿಮೆಯ ಜೊತೆ ಜೊತೆಗೆ ಶಿಕ್ಷಣದ ಕಡೆಗೂ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಹಡಪದ ಅಪ್ಪಣ್ಣ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬದುಕಿದ್ದಂತಹ ವ್ಯಕ್ತಿ. ತನ್ನ ವೃತ್ತಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಊರೂರು ಅಲೆಯುತ್ತಾ ಕಾಯಕದ ಮೂಲಕ ಕೈಲಾಸ ಎಂಬುದನ್ನು ಸಾರಿದವರು. ಶರಣನಾಗಿ, ದಾರ್ಶನಿಕ ನಾಗಿ ಸಮ ಸಮಾಜದ ಕನಸು ಕಂಡಿದ್ದ ಶಿವಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು.ಹಾಗಾಗಿ ಅವರ ಆದರ್ಶ ಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು,ಕಾಯಕ, ದಾಸೋಹ ಎಂಬ ಮಂತ್ರವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಅದೇ ನಾವು ಶಿವಶರಣರಿಗೆ ನೀಡುವ ನಿಜವಾದ ಗೌರವ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶಕುಮಾರ್ ಮಾತನಾಡಿ, ಸರಕಾರ ನಾಡಿನ ಶಿವಶರಣರು, ಸಮಾಜ ಸುಧಾರಕರುಗಳ ಜಯಂತಿಯನ್ನು ಸರಕಾರವೇ ಆಚರಿಸುವ ಮೂಲಕ ಆಯಾಯ ಸಮುದಾಯ ಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವ ಕೆಲಸ ಮಾಡುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರಕಾರದ ನಿರ್ದೇಶನದಂತೆ ಅಯಾಯ ಸಮುದಾಯಗಳೊಂದಿಗೆ ಸೇರಿ ಸಾಧಕರ ಜಯಂತಿ ಆಚರಿಸುವ ಕೆಲಸ ಮಾಡುತ್ತಿದೆ ಎಂದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶಕುಮಾರ್, ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಮಂಜೇಶಗಾಂಧಿ,ಪದಾಧಿಕಾರಿಗಳಾದ,ಡಿ.ಎಸ್.ಪಾರ್ಥಸಾರಥಿ , ಮೇಲಾಕ್ಷಪ್ಪ, ಅನಿಲ್‌ಕುಮಾರ್, ಕಟ್‌ವೆಲ್‌ ರಂಗನಾಥ್, ಮತ್ತಿತರರು ಉಪಸ್ಥಿತರಿದ್ದರು.

Share this article