ಮಂಗಳೂರು: ಎಸ್‌ಎಸ್ಎಲ್‌ಸಿ, ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮೊದಲ ಸ್ಥಾನಗಳನ್ನು ಪಡೆಯುತ್ತಿದೆ. ಆದರೆ ಸ್ಪರ್ಧಾತ್ಮ ಕ ಪರೀಕ್ಷೆಗಳಾದ ಯುಪಿಎಸ್ಸಿ ಪರೀಕ್ಷೆಗಳಲ್ಲಿ ನಮ್ಮವರ ಸಾಧನೆ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮವರು, ನಮ್ಮ ಸಂಘದವರು ಯೋಚಿಸಿ, ಯುಪಿಎಸ್‌ಸಿಯಲ್ಲೂ ನಮ್ಮ ವಿದ್ಯಾರ್ಥಿಗಳು ಸಾಧನೆ ಮಾಡಲು ಪ್ರೇರಣೆ ನೀಡುವಂತಹ ಶಿಕ್ಷಣ, ಕಲಿಕೆಯೆಡೆಗೆ ಆದ್ಯತೆ ನೀಡಬೇಕಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಸವಣೂರು ಹೇಳಿದ್ದಾರೆ.
ಇಲ್ಲಿನ ವಿದ್ಯಾರ್ಥಿಗಳು ವೈದ್ಯಕೀಯ, ವಾಣಿಜ್ಯ, ತಾಂತ್ರಿಕ ಕ್ಷೇತ್ರಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಯುಪಿಎಸ್‌ಸಿ ಫಲಿತಾಂಶದಲ್ಲಿ ನಮ್ಮವರು ಆಯ್ಕೆಯಾಗಿಲ್ಲ ಎಂಬುದು ಬೇಸರದ ಸಂಗತಿ, ಈ ಬಗ್ಗೆ ಗಮನಹರಿಸಬೇಕಿದೆ ಎಂದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಮೂರ್ತಿ ರಾಜೇಶ್ ರೈ ಕಲ್ಲಂಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸಮಾಜವನ್ನು ಪ್ರೀತಿಸಿ, ಇತರ ಸಮಾಜದವರೊಂದಿಗೆ ಸಹಬಾಳ್ವೆ ನಡೆಸುವುದು ರಾಜ್ಯ, ದೇಶದ ಏಳಿಗೆಗೆ ಪೂರಕ. ಸಂವಿಧಾನದ ಆಶಯದಂತೆ ಯೋಚಿಸಿದಾಗ ನಾವು ಪಾಲಿಸಬೇಕಾದ ಅಂಶಗಳು ಕಾಣುತ್ತದೆ ಎಂದರು.ಬಂಟರ ಯಾನೆ ನಾಡವರ ಮಾತೃ ಸಂಘದ ಆಧ್ಯಕ್ಷ ಕೆ.ಅಜಿತ್ ಕುಮಾರ್ ರೈ ಮಾಲಾಡಿ ಅದ್ಯಕ್ಷತೆ ವಹಿಸಿದ್ದರು. ಕೊಡ್ಮಾನ್ ಮೋಹನದೇವ ಆಳ್ವ, ಡಾ.ಎಂ.ಕೆ. ಶೈಲಜಾ ಆಳ್ವ, ಸಂಘದ ಉಪಾಧ್ಯಕ್ಷ ಎ.ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿ.ಎ.ರಾಮ್ ಮೋಹನ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ ಮತ್ತಿತರರು ಇದ್ದರು.
ಪ್ರಶಸ್ತಿ ಪ್ರದಾನ-ಸನ್ಮಾನ
ವಿವಿಧ ಕ್ಷೇತ್ರದ ಸಾಧಕರಾದ ವಿವೇಕ್ ಶೆಟ್ಟಿ ಬೊಳ್ಯಗುತ್ತು (ಕೈಗಾರಿಕೆ), ಪ್ರಕಾಶ್ ಭಂಡಾರಿ (ಸಾಂಸ್ಕೃತಿಕ), ಕೆ.ಕೆ.ಶೆಟ್ಟಿ ಕುತ್ತಿಕಾರ್ (ಧಾರ್ಮಿಕ), ಕರುಣಾಕರ ಶೆಟ್ಟಿ ಮಧ್ಯಗುತ್ತು (ಕೈಗಾರಿಕೆ), ದೇವಿಪ್ರಸಾದ್ ಶೆಟ್ಟಿ ಬೆಳಪು (ಸಹಕಾರಿ), ವೇಣುಗೋಪಾಲ್ ಎಲ್.ಶೆಟ್ಟಿ (ಅತಿಥ್ಯ ಉದ್ಯಮ), ಮುಗ್ರೋಡಿ ಸುಧಾಕರ ಶೆಟ್ಟಿ (ನಿರ್ಮಾಣ ಕ್ಷೇತ್ರ), ಡಾ.ನವೀನ್ ಚಂದ್ರ ಶೆಟ್ಟಿ (ಸಂಶೋಧನೆ), ಡಾ.ಅಶೋಕ್ ಆಳ್ವ (ದೈವಾರಾಧನೆ), ಕೆಂಚನೂರು ಸೋಮಶೇಖರ ಶೆಟ್ಟಿ (ಸಮಾಜಸೇವೆ), ದಿನೇಶ್ ಆಳ್ವ (ಶಿಕ್ಷಣ), ಮುರ ಸದಾಶಿವ ಶೆಟ್ಟಿ (ಕೃಷಿ) ಡಾ.ಸರಿತಾ ಹೆಗ್ಡೆ (ಕೃಷಿ), ರವೀಂದ್ರನಾಥ ಮಾರ್ಲ(ಉತ್ಪಾದನಾ ಕ್ಷೇತ್ರ) ಮೊದಲಾದವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಮೇಳಗಳ ಸಂಚಾಲಕ ಪಿ.ಕಿಶನ್ ಹೆಗ್ಡೆ ಅವರನ್ನು ಕೊಡಿಯಾಲ್‌ಗುತ್ತು ಭಾಸ್ಕರ ರೈ ಸ್ಮರಣಾರ್ಥ ಕಲೆ-ಯಕ್ಷಗಾನ ಕ್ಷೇತ್ರದ ಸಾಧನೆಗೆ ಸನ್ಮಾನಿಸಲಾಯಿತು.