ಭಾಲ್ಕಿಯಲ್ಲಿ ಮನೋಜ ಜರಾಂಗೆ ದಾದಾ ಪಾಟೀಲ್‌ಗೆ ಭರ್ಜರಿ ಸ್ವಾಗತ

KannadaprabhaNewsNetwork | Published : Apr 12, 2024 1:06 AM

ಸಾರಾಂಶ

ಭಾಲ್ಕಿ ಪಟ್ಟಣದ ಹೊರವಲಯದಲ್ಲಿ ನಡೆದ ಮರಾಠ ಸಮಾಜದ ಜಾಗೃತಿ ಸಮಾವೇಶದಲ್ಲಿ ಮರಾಠಾ ಮುಖಂಡ ಮನೋಜ ಜರಾಂಗೆ ದಾದಾ ಪಾಟೀಲ ಅವರನ್ನು ಮರಾಠ ಸಮುದಾಯದ ಪ್ರಮುಖರು ಸನ್ಮಾನಿಸಿ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಮರಾಠಿಗರ ಒಗ್ಗಟ್ಟಿನ ಲಾಭವನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ ಹೊರತು ಮರಾಠಿಗರ ಮೀಸಲಾತಿ ಸೇರಿ ವಿವಿಧ ಬೇಡಿಕೆ ಈಡೇರುತ್ತಿಲ್ಲ ಎಂದು ಮರಾಠ ಸಮಾಜದ ಹೋರಾಟಗಾರ ಮನೋಜ ಜರಾಂಗೆ ದಾದಾ ಪಾಟೀಲ್‌ ಆತಂಕ ವ್ಯಕ್ತಪಡಿಸಿದರು.

ಅವರು ಪಟ್ಟಣದ ಹೊರವಲಯದಲ್ಲಿ ಸಕಲ ಮರಾಠ ಸಮಾಜದ ವತಿಯಿಂದ ಏರ್ಪಡಿಸಿದ್ದ ಮರಾಠ ಸಮಾಜದ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಸುಮಾರು 40-50 ಲಕ್ಷ ಮರಾಠಿಗರು ಇದ್ದಾರೆ. ಹಲವು ವರ್ಷಗಳಿಂದ ಇಲ್ಲಿಯೆ ಮರಾಠಿಗರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸಮಾಜದವರಿಗೆ ಅದರ ಲಾಭ ಸಿಗುತ್ತಿಲ್ಲ ಎಂದರು.

ಅನ್ಯಾಯದ ವಿರುದ್ಧ ಹೋರಾಟ ನಡೆಸಲು ನಾನು ಸದಾ ಸಿದ್ಧನಿದ್ದೇನೆ. ರಾಜ್ಯದ ಎಲ್ಲ ಮರಾಠಿಗರು ಒಂದಾದರೆ ನಿಮ್ಮೆಲ್ಲರ ನ್ಯಾಯಯುತ ಹೋರಾಟಕ್ಕೆ ಧ್ವನಿಯಾಗುತ್ತೇನೆ. ಎಲ್ಲ ಮರಾಠಿಗರು ಸೇರಿ ರಾಜ್ಯದಲ್ಲಿ ಬೃಹತ್‌ ಸಮಾವೇಶ ಏರ್ಪಡಿಸಿ ನಮ್ಮ ಧ್ವನಿಯನ್ನು ಆಳುವ ಸರ್ಕಾರಕ್ಕೆ ಮುಟ್ಟಿಸೋಣ ಎಂದು ತಿಳಿಸಿದರು.ಏ. 12ರ ಸಭೆಯಲ್ಲಿ ಮರಾಠ ಸಮಾಜದಿಂದ ರಾಜಕೀಯ ನಿರ್ಧಾರ ಪ್ರಕಟ :

ಜಿಪಂ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ್‌ ಮಾತನಾಡಿ, ಬೀದರ್‌ನಲ್ಲಿ ಏ. 12ರಂದು ನಡೆಯುವ ಸಭೆಯಲ್ಲಿ ಮರಾಠ ಸಮಾಜದ ಜನರನ್ನು ಸೇರಿಸಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳಲಾಗುತ್ತದೆ. ಮರಾಠ ಸಮಾಜ ಶಿಕ್ಷಣ, ಕೃಷಿ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ನಮ್ಮ ಸಮುದಾಯವನ್ನು ಎಲ್ಲರೂ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಮೀಸಲಾತಿ ಸೇರಿ ನ್ಯಾಯಯುತ ವಿವಿಧ ಬೇಡಿಕೆ ಈಡೇರುತ್ತಿಲ್ಲ. ಹೀಗಾಗಿ ಮರಾಠಾ ಸಮುದಾಯದ ಎಲ್ಲ ಜನರು ಒಂದಾಗಿ ಶಕ್ತಿ ಪ್ರದರ್ಶಿಸಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಬೆಂಗಳೂರು ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ, ಶಿವಾಜಿ ಮಹಾರಾಜರ ಜೀವನ, ಚರಿತ್ರೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಅವರಲ್ಲಿನ ಸಾಹಸ, ಧೈರ್ಯ, ಶೌರ್ಯ, ದೇಶ ಪ್ರೇಮ, ದೇಶ ಭಕ್ತಿ, ಸಹೋದರತ್ವ ಪ್ರತಿಯೊಬ್ಬರೂ ಅನುಸರಿಸುವ ಮೂಲಕ ಅವರಿಗೆ ನಿಜವಾದ ಗೌರವ ಕೊಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜನಾರ್ಧನ ಬಿರಾದಾರ, ನಂದುಕುಮಾರ ಸಾಳುಂಕೆ, ಅಶೋಕರಾವ ಸೋನಜಿ, ರಾಮರಾವ ವರವಟ್ಟಿಕರ್‌, ವಿಜಯಕುಮಾರ ಕಣಜಿಕರ, ಡಾ. ದಿನಕರ ಮೋರೆ, ಬಾಲಾಜಿ ಪಟೇಲ್‌, ಪ್ರದೀಪ ಬಿರಾದಾರ ಹಾಗೂ ತುಕಾರಾಮ ಮೋರೆ ಸೇರಿದಂತೆ ಹಲವರು ಇದ್ದರು.

ಡಾ. ದಿನಕರ ಮೋರೆ ಸ್ವಾಗತಿಸಿ ತುಕಾರಾಮ ಮೋರೆ, ಎಸ್‌. ಪಟೇಲ್‌ ನಿರೂಪಿಸಿದರೆ ಜನಾರ್ಧನ ಬಿರಾದಾರ ವಂದಿಸಿದರು.

Share this article