ಕನ್ನಡಪ್ರಭ ವಾರ್ತೆ ಚವಡಾಪುರ
ಗುರುವಾರ ಸಂಜೆ ವೇಳೆಯಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ಮಳೆಯಿಂದ ಅಫಜಲ್ಪುರ ತಾಲೂಕಿನ ಆನೂರ ಗ್ರಾಮದ ರೈತ ಮನೋಹರ ಹಿಪ್ಪರಗಿ ಅವರಿಗೆ ಸೇರಿದ ಎಮ್ಮೆ ಮೃತ ಪಟ್ಟಿರುವ ಘಟನೆ ನಡೆದಿದೆ.ರೈತ ಮನೋಹರ ಅವರು ತೋಟದಲ್ಲೇ ಮನೆ ಮಾಡಿಕೊಂಡಿದ್ದು, ಬೇವಿನ ಮರದ ಕೆಳಗೆ ಎಮ್ಮೆ ಕಟ್ಟಿದ್ದರು. ಒಮ್ಮೆಲೆ ಬಿರುಗಾಳಿ, ಗುಡುಗು, ಮಿಂಚು ಸಹಿತ ಮಳೆ ಬರಲಾರಂಭಿಸಿದಾಗ ಎಮ್ಮೆ ಬೇರೆ ಕಡೆ ಕಟ್ಟಲು ಸಾಧ್ಯವಾಗಿರಲಿಲ್ಲ ಈ ವೇಳೆ ಸಿಡಿಲು ಬೇವಿನ ಮರದಲ್ಲಿ ಬಿದ್ದು ನಂತರ ಎಮ್ಮೆಗೆ ಬಡಿದಿದೆ. ಬಳಿಕ ಎಮ್ಮೆ ನರಳಾಡಿ ಕೊನೆಗೂ ಉಸಿರು ಚೆಲ್ಲಿದೆ. ಅಫಜಲ್ಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅದೇ ರೀತಿ ತಾಲೂಕಿನ ದಣ್ಣೂರ ಗ್ರಾಮದ ರೈತ ಯಲ್ಲಣ್ಣಗೌಡ ಅವರಿಗೆ ಸೇರಿದ ಎತ್ತು ಕೂಡ ಸಿಡಿಲಿಗೆ ಬಲಿಯಾಗಿದೆ. ಎತ್ತು ಎಮ್ಮೆಗಳನ್ನು ಕಳೆದುಕೊಂಡಿರುವ ರೈತರು ತಮ್ಮ ರಾಸುಗಳು ಕಳೆದುಕೊಂಡು ದುಃಖದಲ್ಲಿ ಮುಳುಗುವಂತಾಗಿದೆ. ಎರಡು ಘಟನೆಗಳು ಅಫಜಲ್ಪುರ ಹಾಗೂ ರೇವೂರ(ಬಿ) ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದಿವೆ.
ಕಾದು ಕೆಂಡವಾಗಿದ್ದ ಇಳೆಗೆ ತಂಪೆರೆದ ಮಳೆ: ಬಿರು ಬೇಸಿಗೆಯ ಕಾವಿಗೆ ಜಲಮೂಲಗಳೆಲ್ಲ ಬತ್ತಿ ಭೀಕರ ಬರಗಾಲ ಆವರಿಸಿತ್ತು. ಜನ ಜಾನುವಾರುಗಳು, ಹಕ್ಕಿಪಿಕ್ಕಿಗಳು, ಹುಲ್ಲು ಕಡ್ಡಿ ಎಲ್ಲವು ಮಳೆಯ ಹಾದಿ ಕಾಯುವಂತಾಗಿತ್ತು. 40+ ಡಿಗ್ರಿಯ ಸುಡು ಬಿಸಿಲಿಗೆ ಬಸವಳಿದಿದ್ದ ಜನಜಾನುವಾರುಗಳಿಗೆ ಮಳೆ ತಂಪೆರೆದಿದೆ. ಕೆಲ ಹೊತ್ತು ಮಳೆ ಸುರಿದರೂ ಕೂಡ ಅಲ್ಲಲ್ಲಿ ನೀರು ಹರಿದಾಡಿದೆ. ಹೀಗಾಗಿ ಮಳೆ ಕಂಡು ಜನ ಸಂತಸಗೊಂಡಿದ್ದಾರೆ. ಇದೇ ರೀತಿ ಮಳೆಗಾಲದಲ್ಲೂ ಉತ್ತಮ ಮಳೆಯಾದರೆ ಕೆರೆ ಕಟ್ಟೆಗಳು ತುಂಬಿಕೊಂಡು ಕುಡಿಯುವ ನೀರಿನ ಸಮಸ್ಯೆ ಬಾರದಂತಾದರೆ ಸಾಕೆಂದು ಜನ ಆಡಿಕೊಳ್ಳುತ್ತಿದ್ದಾರೆ.ಕಲಬುರಗಿಗೆ ತಂಪೆರೆದ ಮಳೆ: ಕಾದು ಕೆಂಡವಾಗಿದ್ದ ಕಲಬುರಗಿಗೆ ಗುರುವಾರ ಸಂಜೆ 45 ನಿಮಿಷ ಸುರಿದ ಮಲೆ ತಂಪೆರೆದಿದೆ. ಕಳೆದ 2 ವಾರದಿಂದ ಕಲಬುರಗಿಯಲ್ಲಿ ತಾಪಮಾನ 44. 8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತಲ್ಲದೆ ಜನ- ಜಾನುವಾರು ತಾಪಕ್ಕೆ ಕಂಗೆಟ್ಟಿದ್ದರು.ಈ ಬೇಸಿಗೆ ಮೊದಲ ಮಳೆ ರೂಪದಲ್ಲಿ ಗುರುವಾರ ಸಂಜೆ ಹೊತ್ತು ಗುಡುಗು, ಸಿಡಿಲು, ಬಿರುಗಾಳಿ ಸಮೇತ ಸುರಿದ ಮಳೆಗೆ ಕಲಬುರಗಿ ಬಿಸಿ ತುಸು ಶಮನಗೊಂಡಿದೆ.ಕಲಬುರಗಿ ನಗರ, ಅಫಜಲ್ಪುರ, ಆಳಂದ, ಜೇವರ್ಗಿಯಲ್ಲಿ ಮಳೆಯಗಿದೆ. ಚಿಂಚೋಳಿಯಲ್ಲಿ ಮೋಡ ಕವಿದ ವಾತಾವರಣವಿತ್ತು. ಅಫಜಲ್ಪೂರದಲ್ಲಿ ಆನೂರು ರೈತ ಮನೋಹರ ಹಿಪ್ಪರಗಿ ಇವರ ತೋಟದಲ್ಲಿ ಸಿಡಿಲು ಬಡಿದು ಎಮ್ಮೆ ಸಾವನ್ನಪ್ಪಿದೆ. ಮಳೆ ಬರುವಾಗ ಎಮ್ಮೆಯನ್ನು ಗಿಡಕ್ಕೆ ಕಟ್ಟಿದ್ದರು. ಸಿಡಿಲು ಬಡಿದು ಎಮ್ಮೆ ಸ್ಥಳದಲ್ಲೇ ಸಾವನ್ನಪ್ಪಿದೆ.ಅಫಜಲ್ಪುರ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಬಿರುಗಾಳಿ, ಗುಡುಗು ಮಿಶ್ರಿತವಾಗಿ ಮಳೆಯಾಗಿದೆ. ಇದಲ್ಲದೆ ಆಳಂದ, ಕಡಗಂಚಿ ಸುತ್ತಲೂ ಮಳೆಯಾದ ವರದಿಗಳು ಬಂದಿವೆ